ಹರಪನಹಳ್ಳಿ : ನಗರದ ಕಾಶಿ ಸಂಗಮೇಶ್ವರ ಬಡಾವಣೆಯ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರ ನಿವಾಸದ ಎದುರಿನ ಮನೆಯಲ್ಲೇ ಕಳ್ಳರು ಕೈಚಳಕ ತೋರಿಸಿದ್ದು, ಸುಮಾರು ₹20 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದಾರೆ.
ಇಲ್ಲಿನ ನಿವಾಸಿ ಹರಾಳು ಸಿದ್ದೇಶ ಎಂಬುವವರ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ಅಲ್ಮೇರಾದಲ್ಲಿ ಇರಿಸಲಾಗಿದ್ದ 11 ತೊಲ ಚಿನ್ನದ ಆಭರಣ ಹಾಗೂ ವ್ಯಾಪಾರ ವಹಿವಾಟಿನಿಂದ ಸಂಗ್ರಹವಾಗಿದ್ದ ₹80 ಸಾವಿರ ನಗದನ್ನು ಅಪಹರಿಸಿ ಪರಾರಿಯಾಗಿದ್ದಾರೆ.
ಮೊದಲು ಶಾಸಕಿ ಲತಾ ಮಲ್ಲಿಕಾರ್ಜುನ್ ಅವರ ಮನೆ ಕಾಂಪೌಂಡ್ ಹಾರಿ ಒಳಬಂದ ಮುಸುಕುಧಾರಿಗಳು, ಶಾಸಕರ ಕಟ್ಟಡದ ಮೇಲ್ಭಾಗದ ಮನೆಯ ಅಂಗಳದಲ್ಲಿ ಹುಡುಕಾಟ ನಡೆಸಿದ್ದಾರೆ. ಬಳಿಕ ಆವರಣದ ಗೇಟು ಮೂಲಕ ಹೊರಬಂದು ಹರಾಳು ಸಿದ್ದೇಶ ಅವರ ಮನೆಯತ್ತ ನಿಶ್ಯಬ್ಧವಾಗಿ ತೆರಳಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಘಟನೆ ನಡೆದ ಸ್ಥಳಕ್ಕೆ ಡಿವೈಎಸ್ಪಿ ಸಂತೋಷ ಚೌವ್ಹಾಣ್, ಸಿಪಿಐ ಮಹಾಂತೇಶ ಸಜ್ಜನ್ ಹಾಗೂ ಅಪರಾಧ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಅಕ್ಕಪಕ್ಕದ ಮನೆಗಳ ಸಿಸಿಟಿವಿ ಫೂಟೇಜ್‌ಗಳನ್ನು ಸಂಗ್ರಹಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಸಂಜೆ ತನಕ ಪ್ರಕರಣ ದಾಖಲಾಗಿರಲಿಲ್ಲ.
2025ರ ಜುಲೈ 16ರಂದು ಇದೆ ಬಡಾವಣೆಯ ಶಾಸಕಿ ಲತಾ ಮಲ್ಲಿಕಾರ್ಜುನ ಅವರ ಕಚೇರಿ ಕಳ್ಳತನವಾಗಿತ್ತು. ಪೊಲೀಸರು ಆರೋಪಿಗಳನ್ನು ಸೆರೆಹಿಡಿದಿದ್ದರು.
‘ನನ್ನ ನಿವಾಸದ ಮುಂಭಾಗದಲ್ಲೇ ಕಳ್ಳತನ ನಡೆದಿರುವುದು ಆತಂಕದ ವಿಷಯ. ಶೀಘ್ರವೇ ಕಳ್ಳರನ್ನು ಪತ್ತೆಹಚ್ಚಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು,’ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
Leave a comment