Home ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ : ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮ್ಮದ್
Homeವಿಶೇಷ ವರದಿಗಳು

ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ : ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮ್ಮದ್

Share
Share

ವಿಜಯನಗರ :  ರಾಜ್ಯದಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಸುಮಾರು 2.7 ಲಕ್ಷ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಶಿಕ್ಷಣ ಪಡೆಯಬೇಕಿತ್ತು. ಆದರೆ ಪ್ರಸ್ತುತ ಕೇವಲ 1.7 ಲಕ್ಷ ಮಕ್ಕಳು ಮಾತ್ರ ವಿದ್ಯಾಭ್ಯಾಸ ಮಾಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ಕುರಿತು ಇಲಾಖೆಗಳ ಬಳಿ ನಿಖರ ಮತ್ತು ಸ್ಪಷ್ಟ ದತ್ತಾಂಶದ ಕೊರತೆಯಿದ್ದು, ಅಧಿಕಾರಿಗಳು ತಕ್ಷಣವೇ ನಿಖರವಾದ ಮಾಹಿತಿ ನೀಡಬೇಕು ಎಂದು ರಾಜ್ಯ ಅಲ್ಪಸಂಖ್ಯಾರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮದ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಪ್ರಗತಿ ಪರೀಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2011 ರ ಶೈಕ್ಷಣಿಕ ಸರ್ವೇ ವರದಿಯನ್ನು ಉಲ್ಲೇಖಿಸಿದ ಅವರು, ಅಲ್ಪಸಂಖ್ಯಾತ ಸಮುದಾಯದಲ್ಲಿ ಕೇವಲ ಶೇ. 42.73 ರಷ್ಟು ವಿದ್ಯಾರ್ಥಿಗಳು ಮಾತ್ರ ಸಾಕ್ಷರತೆ ಪ್ರಮಾಣ ಹೊಂದಿರುವುದು ಆತಂಕ ಮೂಡಿಸಿದೆ. ಮಕ್ಕಳ ಭವಿಷ್ಯವನ್ನು ಕಸಿಯುತ್ತಿರುವ ಪೋಷಕರಲ್ಲಿ ಶಿಕ್ಷಣದ ಬಗ್ಗೆ ವ್ಯಾಪಕ ಅರಿವು ಮೂಡಿಸಬೇಕು. ಜಿಲ್ಲೆಯ ಯಾವೊಬ್ಬ ವಿದ್ಯಾರ್ಥಿಯೂ ಶಾಲೆಯಿಂದ ಹೊರಗುಳಿಯದಂತೆ ಇಲಾಖೆಗಳು ಕಟ್ಟೆಚ್ಚರ ವಹಿಸಬೇಕು ಎಂದು ಅವರು ತಾಕೀತು ಮಾಡಿದರು.

ಶಿಕ್ಷಕರ ಕೊರತೆ ನೀಗಿಸಲು ಹೊರಗುತ್ತಿಗೆ ನೇಮಕಾತಿ: ಜಿಲ್ಲಾದ್ಯಂತ ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದು ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ, ಅಗತ್ಯಕ್ಕೆ ಅನುಗುಣವಾಗಿ ತಕ್ಷಣವೇ ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ನೇಮಕ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ನೀಡಲು ಸೂಚಿಸಲಾಯಿತು.

ಶಾಲಾ ಮೂಲಸೌಕರ್ಯ ವೃದ್ಧಿ : ಜಿಲ್ಲಾದ್ಯಂದ 748 ಶಾಲೆಗಳಿದ್ದು, ಅದರಲ್ಲಿ 46 ಸರ್ಕಾರಿ ಉರ್ದು ಶಾಲೆ, 2 ಅನುದಾನಿತ ಮತ್ತು 2 ಅನುದಾನ ರಹಿತ ಉರ್ದು ಶಾಲೆ ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಅಗತ್ಯವಾಗಿ ಬೇಕಾದ ಕುಡಿಯುವ ನೀರು, ಸುಸಜ್ಜಿತ ಶೌಚಾಲಯ, ಉತ್ತಮ ಶಾಲಾ ಕೊಠಡಿಗಳು ಹಾಗೂ ಆಟದ ಮೈದಾನದ ವ್ಯವಸ್ಥೆಯನ್ನು ಆದ್ಯತೆಯ ಮೇರೆಗೆ ಕಲ್ಪಿಸಬೇಕು.

ಸಕಾಲಕ್ಕೆ ಸಾಲ ಸೌಲಭ್ಯ ವಿತರಣೆ: ಲೀಡ್ ಬ್ಯಾಂಕ್ ಮತ್ತು ವಿವಿಧ ಇಲಾಖಾ ನಿಗಮ-ಸಂಸ್ಥೆಗಳಿAದ ಅರ್ಹ ಫಲಾನುಭವಿಗಳಿಗೆ ಶೈಕ್ಷಣಿಕ ಸಾಲ, ವಸತಿ ಸಾಲ ಹಾಗೂ ಕೃಷಿ ಸಂಭಂದಿತ ಸಾಲಗಳನ್ನು ಸಕಾಲದಲ್ಲಿ ಒದಗಿಸಬೇಕು. ಇದರೊಂದಿಗೆ ಬೀದಿ ಬದಿ ವ್ಯಾಪಾರಿಗಳಿಗೂ ಸಾಲ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು.

ಪ್ರಧಾನ ಮಂತ್ರಿ ಆವಾಸ್ ಯೋಜನೆ : ಜಿಲ್ಲೆಯಲ್ಲಿನ ನಿರ್ಗತಿಕರಿಗೆ, ಅಶಕ್ತರಿಗೆ ವಿವಿಧ ಇಲಾಖೆಗಳಿಂದ ಮಂಜೂರಾಗುವ ಮನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ವಾಸಕ್ಕೆ ನೀಡಬೇಕು. ಯಾವುದೇ ರೀತಿಯ ನೆಪ ಹೇಳಿ ಕಾಮಗಾರಿ ಕುಂಟಿತವಾಗಿದೆ ಕುಂಟು ನೆಪ ಸಲ್ಲದು. ಆದಷ್ಟು ತ್ವರಿತವಾಗಿ ಮನೆ ಕಾಮಗಾರಿ ಪೂರ್ಣಗೊಳಿಸಿ ಮುಕ್ತ ವಾಸಕ್ಕೆ ನೀಡಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಭಂದಪಟ್ಟ ಅಧಿಕಾರಿಗಳು ಕಳೆದ ವರ್ಷ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 772 ಮನೆ ಮಂಜೂರಾಗಿದ್ದು, ಈ ಪೈಕಿ 561 ಪೂರ್ಣಗೊಂಡಿವೆ. ಬಾಕಿ ಉಳಿದಿರುವ 211 ಮನೆಗಳ ನಿರ್ಮಾಣ ಕಾರ್ಯವು ಪ್ರಸ್ತುತ ಪ್ರಗತಿ ಹಂತಗಳಲ್ಲಿದ್ದು, ಮುಂಬರುವ ಸೆಪ್ಟೆಂಬರ್ ವೇಳೆಗೆ ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ರೀತಿಯ ವಿಳಂಬ ಧೋರಣೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ ಅವರು, ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಿ ಪ್ರಗತಿ ಸಾಧಿಸಬೇಕೆಂದು ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ವಸತಿ ನಿಲಯಗಳು ಎದುರಿಸುತ್ತಿರುವ ಮೂಲಸೌಕರ್ಯ ಹಾಗೂ ಇಲಾಖಾ ಮಟ್ಟದ ಇತರೆ ಸಮಸ್ಯೆಗಳ ಕುರಿತು ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಂಭಂದಿಸಿದಂತೆ ಇರುವ ಎಲ್ಲಾ ಪ್ರಮುಖ ಬೇಡಿಕೆಗಳು ಮತ್ತು ಸವಾಲುಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರ ವಿಶೇಷ ಕಾರ್ಯದರ್ಶಿ ಮುಜೀಬುಲ್ಲಾ ಖಾನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಪ್ರಗತಿ ಪರಿಶೀಲನಾ ಸಭೆ ಆರಂಭಕ್ಕೂ ಮುನ್ನ ಅಲ್ಪಸಂಖ್ಯಾತರ ಸಮುದಾಯದವರಿಂದ ಕುಂದು ಕೊರತೆ ಅಹವಾಲು ಸ್ವೀಕರಿಸಿದರು. ಈ ವೇಳೆ ಸಂವಿಧಾನದಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಹಾಗೂ ಪಾರ್ಸಿ ಸೇರಿದಂತೆ ಆರು ಸಮುದಾಯಗಳು ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಸೇರಿವೆ.

ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತ ಅಂಗನವಾಡಿ ಕೇಂದ್ರಗಳ ಗುಣಮಟ್ಟ ಕುಸಿದಿದೆ, ಇತ್ತೀಚಿನ ದಿನದಲ್ಲಿ ಉರ್ದು ಶಾಲೆಗಳ ಮುಚ್ಚುತ್ತಿವೆ ಜೊತೆಗೆ ಅಲ್ಪಸಂಖ್ಯಾತ ಶಾಲೆಗಳಲ್ಲಿ ಯಾವುದೇ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ, ಅಲ್ಪಸಂಖ್ಯಾತ ಮಕ್ಕಳು ಓದುವುದು ಇಲ್ಲಿ ಆದರೆ ಉದ್ಯೋಗ ಮಾಡುವುದು ಇನ್ನೆಲ್ಲೋ. ಆದ್ದರಿಂದ ಈ ಕುರಿತು ಸ್ಥಳೀಯ ಕಂಪನಿಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು.

ಅಲ್ಪ ಸಂಖ್ಯಾತ ಸಮುದಾಯದವರಿಗೆ ಒಬಿಸಿ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಹಾಗೂ ಕ್ರಿಶ್ಚಿಯನ್ ಸಮುದಾಯದ ಮುಖಂಡರೊಬ್ಬರು ಸಮುದಾಯಕ್ಕೆ ಪ್ರತ್ಯೇಕ ರುದ್ರಭೂಮಿ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷರು ಸಮಸ್ಯೆಗಳಿಗೆ ತ್ವರಿತವಾಗಿ ಪರಿಹರಿಸುವುದಾಗಿ ಹಾಗೂ ಸಮಸ್ಯೆಗಳಿಗೆ ಸಂಭಂದಿಸಿದ ಅಧಿಕಾರಿಗಳಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಅಧಿಕಾರಿ ಜಾವೀದ್ ಸೇರಿದಂತೆ ಅಲ್ಪ ಸಂಖ್ಯಾತ ಸಮುದಾಯದ ವಿವಿಧ ಮುಖಂಡರು, ಸಾರ್ವಜನಿಕರು ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರಸ್ತೆ ನಿರ್ಮಾಣಕ್ಕೆ ಜಾಗ ತ್ಯಾಗ ಮಾಡಿದ ಗ್ರಾಮಸ್ಥರ ಋಣ ತೀರಿಸಲಾಗದು: ಶಾಸಕ ಹೆಚ್.ಆರ್. ಗವಿಯಪ್ಪ

ವಿಜಯನಗರ (ಹೊಸಪೇಟೆ) : ಊರಿನ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ತಮ್ಮ ಜಾಗ...

Homeಅಪರಾಧ

ಹರಪನಹಳ್ಳಿ: ನಕಲಿ ದಾಖಲೆ ಸೃಷ್ಟಿಸಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಹರಪನಹಳ್ಳಿ : ನಕಲಿ ದಾಖಲೆ ಸೃಷ್ಟಿಸಿಕೊಂಡು ತನ್ನ ಹೆಸರಿಗೆ ಆಸ್ತಿ ಪತ್ರಗಳನ್ನು ಮಾಡಿಕೊಂಡು ಪರಾರಿಯಾಗಿದ್ದ 12...

Homeಸುದ್ದಿಗಳು

ಕೊಪ್ಪಳ : ಪ್ರತಿಭಾ ಪುರಸ್ಕಾರಕ್ಕೆ ಬನ್ನಿ

ಹರಪನಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲೂಕು ಘಟಕದ ವತಿಯಿಂದ 2026-27ನೇ ಸಾಲಿನ...

Homeಕೃಷಿ

ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ

ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂದು ಆಗ್ರಹಿಸಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.