Home ಧಾರ್ಮಿಕ ದತ್ತಿ ಇಲಾಖೆ ದೇವಾಲಯಗಳಲ್ಲಿ ಪ್ರತಿ ತಿಂಗಳು ಹುಂಡಿ ಎಣಿಕೆ ಕಡ್ಡಾಯ
Homeಸುದ್ದಿಗಳು

ಧಾರ್ಮಿಕ ದತ್ತಿ ಇಲಾಖೆ ದೇವಾಲಯಗಳಲ್ಲಿ ಪ್ರತಿ ತಿಂಗಳು ಹುಂಡಿ ಎಣಿಕೆ ಕಡ್ಡಾಯ

Share
Share

ವಿಜಯನಗರ (ಹೊಸಪೇಟೆ) : ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ‘ಎ’ ಮತ್ತು ‘ಬಿ’ ದರ್ಜೆಯ ಹಾಗೂ ಪ್ರಮುಖ ದೇವಾಲಯಗಳ ಆಡಳಿತ, ಹುಂಡಿ ಎಣಿಕೆ ಕಾರ್ಯವಿಧಾನ, ಆಸ್ತಿ ರಕ್ಷಣೆ ಹಾಗೂ ಭಕ್ತಾದಿಗಳ ಸೌಲಭ್ಯಗಳಲ್ಲಿ ಪಾರದರ್ಶಕತೆ ಕಾಪಾಡಲು ಹುಂಡಿ ಎಣಿಕೆಗೆ ಫೇಸ್ ರೆಕಗ್ನೇಜೆಸನ್‌ , ಸಿಸಿಟಿವಿ, ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ವಿವಿಧ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹುಂಡಿ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಳ್ಳುವ ಕಂದಾಯ, ಪೊಲೀಸ್ ಹಾಗೂ ದೇವಾಲಯದ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಫೇಸ್ ರೆಕಗ್ನಿಷನ್ ಯಂತ್ರದ ಮೂಲಕವೇ ಹಾಜರಾತಿ ನಮೂದಿಸಬೇಕು.

ಈ ಯಂತ್ರವನ್ನು ದೇವಾಲಯದ ನಿಧಿಯಿಂದಲೇ ಖರೀದಿಸಲು ಸೂಚಿಸಿದರು. ಎಣಿಕೆ ಕೊಠಡಿಗೆ ಪ್ರವೇಶಿಸುವ ಪ್ರತಿಯೊಬ್ಬ ಸಿಬ್ಬಂದಿ ತಮ್ಮ ಬಳಿ ಇರುವ ನಗದು ವಿವರವನ್ನು ಪ್ರವೇಶ ವಹಿಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಜಿಲ್ಲೆಯ ಎ, ಬಿ ಹಾಗೂ ಅಗತ್ಯವಿರುವ ‘ಸಿ’ ದರ್ಜೆಯ ದೇವಾಲಯಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ತಪ್ಪದೇ ಹುಂಡಿ ಎಣಿಕೆ ನಡೆಸಬೇಕು.

ಈ ಎಣಿಕೆ ಪ್ರಕ್ರಿಯೆಯು ಸಹಾಯಕ ಆಯುಕ್ತರು, ಕಂದಾಯ ಇಲಾಖೆ, ಪೊಲೀಸ್, ತಹಶೀಲ್ದಾರ್, ಪಂಚಾಯತ್, ಬ್ಯಾಂಕ್ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳ ಜಂಟಿ ಉಸ್ತುವಾರಿಯಲ್ಲಿ ನಡೆಯಬೇಕು. ಎಣಿಕೆ ಕಾರ್ಯಕ್ಕೆ ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳ ನಿಯೋಜಿಸುವಂತಿಲ್ಲ. ಎಣಿಕೆ ಕಾರ್ಯದ ಸಂಪೂರ್ಣ ಪ್ರಕ್ರಿಯೆಯನ್ನು ಕಡ್ಡಾಯವಾಗಿ ವೀಡಿಯೋ ಚಿತ್ರೀಕರಣ ಮಾಡಬೇಕು ಎಂದು ತಿಳಿಸಿದರು.

ಹುಂಡಿ ಎಣಿಕೆ ಸಂದರ್ಭದಲ್ಲಿ ದೊರೆಯುವ ಚಿನ್ನ, ಬೆಳ್ಳಿ ಹಾಗೂ ಇತರೆ ಮೌಲ್ಯಯುತ ವಸ್ತುಗಳನ್ನು ಎಣಿಕೆಯ ದಿನದಂದೇ ಪ್ರಮಾಣೀಕೃತ ಮೌಲ್ಯಮಾಪಕರಿಂದ ಮೌಲ್ಯಮಾಪನ ಮಾಡಿಸಬೇಕು. ಹಣಕಾಸಿನ ನಿರ್ವಹಣೆ ಹಾಗೂ ಲೆಕ್ಕಪರಿಶೋಧನೆ ಪೂರ್ಣಗೊಳಿಸಿ ವರದಿಯೊಂದಿಗೆ ಉಪ ಖಜಾನೆಗೆ ಜಮಾ ಮಾಡಬೇಕು.

ಡಿಜಿಟಲ್ ಪಾವತಿ ಹಾಗೂ ಕ್ಯೂಆರ್ ಕೋಡ್ ವ್ಯವಸ್ಥೆ:
ಜೇಬುಗಳ್ಳತನ ಹಾಗೂ ನಗದು ದುರುಪಯೋಗ ತಡೆಯಲು ಭಕ್ತಾದಿಗಳಿಗೆ ಡಿಜಿಟಲ್ ಪಾವತಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ದೇವಾಲಯಗಳಲ್ಲಿ ಅಧಿಕೃತ ಕ್ಯೂಆರ್ ಕೋಡ್ ಅಳವಡಿಸಬೇಕು. ಈ ಕ್ಯೂಆರ್ ಕೋಡ್‌ಗಳು ಹಾಳಾಗದಂತೆ ಹಾಗೂ ದುರುಪಯೋಗವಾಗದಂತೆ ಕಾಲಕಾಲಕ್ಕೆ ಪರಿಶೀಲಿಸಿ ರಕ್ಷಣೆ ಮಾಡಲು ಸೂಚಿಸಿದರು.

ಅಗ್ನಿಶಾಮಕ ಉಪಕರಣ ಹಾಗೂ ಸಿಬ್ಬಂದಿಗೆ ತರಬೇತಿ: ಎ ಮತ್ತು ಬಿ ದರ್ಜೆಯ ದೇವಾಲಯಗಳ ಹುಂಡಿ ಎಣಿಕೆ ಕೊಠಡಿ ಹಾಗೂ ದೇವಾಲಯದ ಆವರಣದಲ್ಲಿ ಅಗ್ನಿ ಅವಘಡ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ ಅವರು, ಹುಂಡಿ ಎಣಿಕೆ ಸಮಯದಲ್ಲಿ ಅಥವಾ ಸಾಮಾನ್ಯ ದಿನಗಳಲ್ಲಿ ಕಳವು ಪ್ರಕರಣಗಳು ಕಂಡುಬಂದಲ್ಲಿ, ಸಂಬಂದಪಟ್ಟ  ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಧಿಸೂಚಿತ ದೇವಾಲಯಗಳಿಗೆ ಸೇರಿದ ಜಮೀನು ಹಾಗೂ ಸ್ಥಿರಾಸ್ತಿಗಳ ಸರ್ವೇ ಅಳತೆ ಕಾರ್ಯವನ್ನು ಪೂರ್ಣಗೊಳಿಸಿ, ಎಲ್ಲಾ ಆಸ್ತಿ, ಜಮೀನುಗಳ ಖಾತೆಗಳನ್ನು ಕಡ್ಡಾಯವಾಗಿ ದೇವಸ್ಥಾನದ ಹೆಸರಿಗೆ ಇಂದೀಕರಣ ಮಾಡುವಂತೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಈ. ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ವರಷ್ಠಾಧಿಕಾರಿ ಮಂಜುನಾಥ್, ಸಹಾಯಕ ಆಯುಕ್ತ ಪಿ.ವಿವೇಲಕಾನಂದ, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಮನೋಹರ್, ಹಿಂದೂ ಧಾರ್ಮಿಕ ಧತ್ತಿ ಇಲಾಖೆ ಸಹಾಯಕ ಆಯುಕ್ತರಾದ ಸವಿತಾ ಸೇರಿದಂತೆ ಮತ್ತಿತರರು ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಪೌರಕಾರ್ಮಿಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ದಾವಣಗೆರೆ : ಮಹಾನಗರಪಾಲಿಕೆ ಮತ್ತು ಹರಿಹರ ನಗರಸಭೆಯಲ್ಲಿ ನೇರ ಪಾವತಿಯಡಿಯಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳನ್ನು...

Homeಸುದ್ದಿಗಳು

ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ : ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ಮೂಲ ನಿವಾಸಿ...

Homeಸುದ್ದಿಗಳು

ಜುಲೈ 31ರಂದು ನೇರ ಸಂದರ್ಶನ

ವಿಜಯನಗರ(ಹೊಸಪೇಟೆ) : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಜುಲೈ 31ರಂದು ಬೆಳಿಗ್ಗೆ 10ಗಂಟೆಗೆ...

Homeಸುದ್ದಿಗಳು

ಹೊಸಪೇಟೆಯಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ 892ನೇ ಜಯಂತಿ ಸಂಭ್ರಮ

ವಿಜಯನಗರ(ಹೊಸಪೇಟೆ) : 12ನೇ ಶತಮಾನದಲ್ಲೇ ರಕ್ತ ಕ್ರಾಂತಿಯ ಬದಲು ವೈಚಾರಿಕ ಕ್ರಾಂತಿಯ ಮೂಲಕ ಸಮಾಜದಲ್ಲಿ ಸಮಾನತೆ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.