ವಿಜಯನಗರ:
ನವಕಾಲದ ಯುವ ಕವಿಗಳು ಜನಸಾಮಾನ್ಯರ ಬದುಕು ಬವಣೆಗಳಿಗೆ ಧ್ವನಿಯಾಗಬೇಕು. ಸಾಹಿತ್ಯ ಪರಂಪರೆಯಲ್ಲಿ ದಾಖಲಾಗದ ಬೀದಿಯಲ್ಲಿರುವ ಕೂಲಿ ಕಾರ್ಮಿಕರ ಜೀವನವನ್ನು ಕವಿತೆಗಳಲ್ಲಿ ವ್ಯಕ್ತಪಡಿಸಿ ಅವರ ಕಥೆಗಳನ್ನು ಹೇಳಬೇಕು ಎಂದು ಹಿರಿಯ ಸಾಹಿತಿ ಎ.ಎಂ.ಮದರಿ ಯುವಕವಿಗಳಿಗೆ ಸಲಹೆ ನೀಡಿದರು.
ಹಂಪಿ ಉತ್ಸವದ ಅಂಗವಾಗಿ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಭಾನುವಾರ ನಡೆದ ಯುವಕವಿಗೋಷ್ಠಿ ಉದ್ಘಾಟಿಸಿ ಎ.ಎಂ.ಮದರಿ ಮಾತನಾಡಿದರು.
ಕವಿತೆ ಹಾಗೂ ಕಾವ್ಯರಚನೆಗೆ ಅರ್ಥಗರ್ಭಿತವಾದ ಭಾಷೆ, ಶೈಲಿ, ಆಕೃತಿ ಬಳಹ ಮುಖ್ಯವಾದವು. ಯುವಕವಿಗಳು ಇವನ್ನು ನಿರ್ಲಕ್ಷಿಸಬಾರದು. ಹಳೆಗನ್ನಡ, ವಚನ, ತತ್ವಪದ, ಜಾನಪದ, ದಾಸವಾಣಿ ಹಾಗೂ ನವೋದಯ ಸಾಹಿತ್ಯ ಯುವ ಕವಿಗಳಿಗೆ ಕವಿತೆ ರಚಿಸಲು ದಿಕ್ಕ್ಸೂಚಿಯಾಗಿವೆ. ಕೇವಲ ವಿದ್ವಾಂಸರು ಬಳಸುವ ಪ್ರತಿಮೆ, ಪ್ರತೀಕಗಳಂತಹ ತಾಂತ್ರಿಕ ಪದಗಳಿಂದ ಸಾಹಿತ್ಯವಾಗುವುದಿಲ್ಲ. ಬದಲಿಗೆ, ಸಾಮಾನ್ಯ ಜನರ ಬದುಕಿನ ನೋವು-ನಲಿವುಗಳನ್ನು ಒಳಗೊಂಡ ವಾಸ್ತವದ ಹಾದಿಯೇ ನಿಜವಾದ ಸಾಹಿತ್ಯ. ಕವಿತೆ ಎಂಬುದು ಮನಸ್ಸಿನ ಭಾರ ಇಳಿಸಿಕೊಳ್ಳುವ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡುವ ಮಾರ್ಗವೂ ಹೌದು ಎಂದು ಅವರು ಅಭಿಪ್ರಾಯಪಟ್ಟರು.
ಭಟ್ಟಂಗಿತನ ಬೇಡ, ಸ್ವಾಭಿಮಾನಿಗಳಾಗಿರಿ:
ಕವಿ,ಕಲಾವಿದ, ಸಾಹಿತಿ ಅಧಿಕಾರಸ್ಥರನ್ನು ಓಲೈಸುವ ಭಟ್ಟಂಗಿಗಳಾಗಬಾರದು. ಸ್ವಾಭಿಮಾನಿಗಳಾಗಿದ್ದು, ಅಧಿಕಾರಸ್ಥರ ತಪ್ಪುಗಳನ್ನು ಪ್ರಶ್ನಿಸುವ ನೈತಿಕತೆ ಉಳ್ಳವರಾಗಬೇಕು. ಪದಗಳ ಸ್ತುತಿಯಿಂದ ಕ್ಲೇಶವೆನಿಸುವ ಕವಿತೆ ರಚಿಸುವ ಬದಲು, ಜೀವನದ ಅನುಭವಗಳಿಗೆ ಪದಗಳ ರೂಪನೀಡಿ ಜೀವಂತಿಕೆ ಭಾವವನ್ನು ಕವಿತೆಗೆ ನೀಡಬೇಕು. ಇಂದಿನ ಪೀಳಿಗೆಯ ಬಹುತೇಕ ಯುವಕವಿಗಳ ಕವಿತೆಗಳು ಜನರ ಬದುಕನ್ನು ಚಿತ್ರಿಸುವ ಬದಲು, ಅವರ ಬದುಕನ್ನು ಅಂತ್ಯಗೊಳಿಸುವ ಹಾಗೆ ಭಾಸವಾಗುತ್ತವೆ ಎಂದು ಎ.ಎಂ.ಮದರಿ ವಿಷಾದ ವ್ಯಕ್ತಪಡಿಸಿದರು.
ಇತಿಹಾಸ, ಪರಂಪರೆ ಹಾಗೂ ವರ್ತಮಾನಕ್ಕೆ ಸಂವಾದಿಯಾದ ಯುವ ಕವಿಗೋಷ್ಠಿ :

ಯುವಕವಿಗೋಷ್ಠಿಯಲ್ಲಿ 38 ಯುವ ಸಾಹಿತಿಗಳು ಸ್ವರಚಿತ ಕವನ ಹಾಗೂ ಕವಿತೆಗಳನ್ನು ವಾಚಿಸಿದರು. ಇತಿಹಾಸ, ಪರಂಪರೆ ಹಾಗೂ ವರ್ತಮಾನಕ್ಕೆ ಸಂವಾದಿಯಾದ ಕವನ ಹಾಗೂ ಕವಿತೆಗಳು ಸಹೃದಯರ ಮೆಚ್ಚುಗೆ ಗಳಿಸಿದವು. ವಿಜಯನಗರ ಸಾಮ್ರಾಜ್ಯದ ಐತಿಹ್ಯ, ಪೌರಾಣಿಕ ಚಿತ್ರಣ, ಪ್ರಸ್ತಕ ರಾಜಕೀಯ, ಧರ್ಮ ಸಂಘರ್ಷ, ತಂದೆಯ ಪ್ರೀತಿ, ಹೆಣ್ಣು ಮಗು ಹಾಗೂ ಸ್ರ್ತೀ ಸಂವದೇನೆಗಳುಳ್ಳ ಕವಿತೆಗಳನ್ನು ರಚಿಸುವ ಮೂಲಕ ಯುವ ಕವಿಗಳು ಒಟ್ಟಾರೆ ಸಮಕಾಲೀನ ಸಮಾಜದಲ್ಲಿನ ಅಂಶಗಳಿಗೆ ಕೈಗನ್ನಡಿಯಾದರು.
ಮುಗಿಲ ಹಕ್ಕಿ ಎಂಬ ಕಾವ್ಯ ನಾಮದೊಂದಿಗೆ ಯುವ ಕವಿ ಮೈಲಾರಪ್ಪ ಬೂದಿಹಾಳ ತಮ್ಮ ‘ಬಟ್ಟೆ ಮತ್ತು ಧರ್ಮ’ ಎನ್ನುವ ಕವಿತೆ ವಾಚಿಸಿದರು. ಪ್ರಸ್ತುತ ಸಮಾಜದಲ್ಲಿ ನೇಕಾರ ನೇಯ್ದ ಬಣ್ಣದ ಬಟ್ಟೆಗಳಿಗೂ ಧರ್ಮದ ಲೇಪನವಾಗಿದೆ. ಪ್ರತಿಯೊಂದು ಬಣ್ಣದ ಬಟ್ಟೆ ಧರ್ಮಲಾಂಚನವಾಗಿ ರಾರಾಜಿಸುತ್ತಿವೆ. ಬಟ್ಟೆ ನೇಯ್ದೆಯ ನೇಕಾರ ಬದುಕು ಮಾತ್ರ ಹಸಿವಿನಿಂದ ಕಂಗೆಟ್ಟಿದೆ. ಧರ್ಮಗಳ ದಂಗಲ್ ಬಿಟ್ಟು ಒಂದಾಗಿ ಬಾಳೋಣ ಎನ್ನುವ ಸಂದೇಶ ಕವಿತೆಯಿಂದ ಮೂಡಿಬಂತು.
ಚುನಾವಣೆ ಆಮಿಷಗಳ ಬಗ್ಗೆ ಜಾಗೃತಿ:
ಬರಹಗಾರ ಹಾಗೂ ವಕೀಲ ಅಯ್ಯಣ್ಣ ನಾಯಕ ಪಾಮನಕಲ್ಲೂರು ಚುನಾವಣೆಯಲ್ಲಿ ಹೆಂಡ, ಸೀರೆ, ಹಣ ಹಂಚಿ ಮತದಾರರಿಗೆ ಆಮಿಷ ವಡ್ಡುವ ಮೂಲಕ ಮತ ಪಡೆಯುವ ರಾಜಕಾರಣಿಗಳ ಬಗ್ಗೆ ‘ಚುನಾವಣೆ ಬಂತಣ್ಣಾ’ ಎನ್ನುವ ಕವನ ಮೂಲಕ ಮತದಾರರು ಎಚ್ಚರಿಸಿದರು. ಮತದಾನದಲ್ಲಿ ದೇಶದ ಭವಿಷ್ಯ ಅಡಗಿದೆ. ಧನದಾಹಿ, ಭ್ರಷ್ಟ, ಕೋವುವಾದಿ ರಾಜಕಾರಣಿಗಳನ್ನು ಧಿಕ್ಕರಿಸಿ ಉತ್ತಮ ದೇಶ ಕಟ್ಟಲು ಕವನದ ಮೂಲಕ ಕರೆ ನೀಡಿದರು.
ಅನ್ಯಾಯ ಹಾಗೂ ದೌರ್ಜನ್ಯಕ್ಕೆ ವಿರೋಧ:
ವಿದ್ಯಾರ್ಥಿನಿ ಬಿ.ಎಂ.ಪ್ರಿಯಾಂಕ ‘ಯಾರಿಗೆ ಬಂತು ಸ್ವಾತಂತ್ರ್ಯ ಎಂದು ಪ್ರಶ್ನಿಸುವ ಧ್ವನಿಯಲ್ಲಿಯೇ ತಮ್ಮ ಕವನ ವಾಚಿಸಿದಳು. ಜಾತಿ ಧರ್ಮ, ರೈತರ ಬವಣೆ, ಸರ್ಕಾರದ ಆರ್ಥಿಕ ನೀತಿ, ಹೆಣ್ಣು ಮಕ್ಕಳು ಹಾಗೂ ಮುಗ್ದ ಮಕ್ಕಳ ಮೇಲಿನ ದೌರ್ಜನ್ಯ, ಭಯೋತ್ಪಾದನೆಗಳ ವಿರುದ್ದ ಗುಡುಗಿದಳು. ಪ್ರಿಯಾಂಕ ಅವರ ಕವಿತೆ ದಲಿತ ಕವಿ ಸಿದ್ದಲಿಂಗಯ್ಯ ಅವರ ‘ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ’ ಕವಿತೆಯನ್ನು ನೆನಪಿಸಿತು.

ವ್ಯಕ್ತವಾದ ಸ್ತ್ರೀ ಸಂವೇದನೆ :
ಕವಿಗೋಷ್ಠಿಯಲ್ಲಿ ಲಿಂಗಭೇದವಿಲ್ಲದೇ, ಯುವಕ ಯುವತಿಯರು ಸ್ತ್ರೀ ಸಂವೇದನೆವುಳ್ಳ ಕವಿತೆಗಳನ್ನು ವಾಚಿಸುವ ಮೂಲಕ ಸ್ತ್ರೀ ವಿಮೋಚನೆಗೆ ಧ್ವನಿಯಾದರು.
ಶೇಖ್ ಮೊಹಮ್ಮದ್ ಷಾಜಿ ‘ಇದೊಮ್ಮೆ ನಾನು ಹೆಣ್ಣಲ್ಲ ಸುಮ್ನನಿರಿ’ ಎಂಬ ಕವನ ವಾಚಿಸಿ, ಹೆಣ್ಣು ಭ್ರೂಣ ಹತ್ಯ, ಬಾಲಕಿ ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಸೂಕ್ಷö್ಮ ವಿಚಾರಗಳನ್ನು ಮನಮುಟ್ಟುವಂತೆ ಹೇಳಿದರು. ಅವರ ಕವನದ ಕೊನೆಯ ಸಾಲು ‘ನನ್ನನ್ನ ಭ್ರೂಣ ಹತ್ಯೆ ಮಾಡಿದ್ದರೆ, ಎಷ್ಟೋ ಚೆನ್ನಾಗಿ ಇರುತ್ತಿತ್ತು ಬಿಡಿ..!!’ ಸಮಾಜದ ವಿರುದ್ದ ಹೋರಾಡಿ ಸೋತ ಹೆಣ್ಣು ಮಗಳ ಆರ್ತನಾದದಂತೆ ತೋರಿತು.
ಡಾ.ಅನಸೂಯ ವೈ.ಟಿ ಅವರ ‘ಸೂಳೆ’ ಕವನ ವೇಶ್ಯಾವೃತ್ತಿಯಲ್ಲಿ ತೊಡಗಿರುವ ಮಹಿಳೆಯ ವಿವಿಧ ಮಜಲುಗಳನ್ನು ಸಹೃದಯರ ಎದುರು ತೆರೆದಿಟ್ಟಿತ್ತು. 12ನೇ ಶತಮಾನದಲ್ಲಿ ಬಸವಣ್ಣ ಸೂಳೆ ಸಂಕವ್ವೆಯನ್ನು ಶಿವಶರಣೆಯಾಗಿಸಿದ ಪರಿಯನ್ನು ವರ್ಣಿಸಿತು.
ಹಂಪಿ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಶ್ವೇತಾ ಬಾಳಿ ‘ಬಡಿಸುವಳು ಬರಿದಾಗದಂತೆ!’ ಎನ್ನುವ ಕವನದಲ್ಲಿ ಒಡಲ ಹಾಗೂ ದೇಹದ ಹಸಿವನ್ನು ತೀರಿಸುವ ಹೆಣ್ಣಿನ ತಮುಲಗಳನ್ನು ತೆರದಿಟ್ಟಿತು. ಹೊಟ್ಟೆಯ ಹಸಿವೆಗೆ ಬಗೆ ಬಗೆ ಅಡುಗೆ ಮಾಡಿ ಬಡಿಸುವ ಹೆಣ್ಣು, ಪುರಷರ ಕಾಮದಾಹಕ್ಕೂ ಬಲಿಯಾಗುತ್ತಾಳೆ. ಅಡುಗೆ ಪಾತ್ರೆ ಹಾಗೂ ಅವಳ ದೇಹ ಅಕ್ಷಯ ಪಾತ್ರೆಯಲ್ಲ, ಎರಡು ಸಹ ಬರಿದಾಗುತ್ತವೆ. ಪುರುಷ ವಯಸ್ಸಾದ ಹೆಣ್ಣಿ ಸಾಂಗತ್ಯ ತೊರೆದು, ಮಗದೊಬ್ಬಳ ಸಂಗಕ್ಕೆ ಹಾತೋರೆಯುತ್ತಾನೆ. ರುಚಿ ರುಚಿಯಾದ ಅಡುಗೆ ಹುಡುಕಿ ಅಲೆಯುತ್ತಾನೆ. ಊಟದ ವರ್ಣನೆಯೊಂದಿಗೆ ಕಾಮದ ವಾಂಚೆಯನ್ನು ಸಮೀಕರಿಸಿ ಕವನ ರಚಿಸಿರುವುದು ಸಭಿಕರ ಮನಸೆಳೆಯಿತು.
‘ಲಿವಿಂಗ್ ಟುಗೆದರ್’ ಸಹಜೀವನ ಪದ್ದತಿ ಬಗ್ಗೆ ರೇಣುಕಾ ಹೆಳವರ್ ಕವನ ವಾಚಿಸಿ, ನವಯುಗದ ಯುವಜನತೆ ಕ್ಷಣಿಕ ಪ್ರೀತಿ, ಪ್ರೇಮ, ಕಾಮಗಳ ಅಡ್ಡಪರಿಣಾಮವನ್ನು ಕೇಳುಗರ ಮುಂದೆ ತೆರೆದಿಟ್ಟಿತು. ಕವನದಲ್ಲಿ ನೈಜ ಘಟನೆಗಳನ್ನು ಉಲ್ಲೇಖಿಸಿ ಭಾರತೀಯ ಪರಂಪರೆಯಲ್ಲಿ ಪವಿತ್ರ ಪ್ರೇಮಕ್ಕೆ ಕುರುಹಾದ ಅಕ್ಕಮಹಾದೇವಿ, ಅಹಲ್ಯ, ರಾಧೆಯ ಆದರ್ಶವನ್ನು ಸಾರಿತು.
ಉಳಿದಂತೆ ಇತರೆ ಯುವಕವಿಗಳು ಹಂಪಿಯ ಇತಿಹಾಸ, ನಾಡು ನುಡಿ ಹಾಗೂ ತಂದೆ-ತಾಯಿ, ಧರ್ಮ ರಾಜಕಾರಣದ ಕುರಿತಾದ ಕವನಗಳನ್ನು ವಾಚಿಸಿದರು.
ಹಂಪಿ ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕೂಡ್ಲಗಿ ತಹಶೀಲ್ದಾರ್ ನೇತ್ರಾವತಿ, ಸಾಹಿತಿ ಡಾ.ಚನ್ನಬಸಪ್ಪ ಚಿಲ್ಕರಾಗಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೋರೇಗೌಡ, ಉಪನ್ಯಾಸಕ ಎಂ. ಆರ್.ವಾಗೀಶ, ಕನ್ನಡ ಸಾಹಿತ್ಯ ಪರಿಷತ್ ನಿಶ್ಚಿ ರುದ್ರಪ್ಪ ಸೇರಿದಂತೆ ಸಾಹಿತಿಗಳು, ಗಣ್ಯರು ಇದ್ದರು.
Leave a comment