ಹರಪನಹಳ್ಳಿ : ಪರಿಶಿಷ್ಟ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಳಮೀಸಲಾತಿಗೆ ಕಲ್ಪಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಆದರೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಅಡಿಯಲ್ಲಿ ಪಿಯುಸಿ ದಾಖಲಾತಿಗೆ ಅರ್ಜಿ ಆಹ್ವಾನಿಸಿದ ಅಧಿಸೂಚನೆಯಲ್ಲಿ ಉಪ ವರ್ಗೀಕರಣಕ್ಕೆ ಅವಕಾಶ ಕಲ್ಪಿಸದೇ ಇರುವುದಕ್ಕೆ ದಲಿತ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ 104 ವಸತಿ ಕಾಲೇಜುಗಳಲ್ಲಿ 2026-27ನೇ ಸಾಲಿನ ಪ್ರಥಮ ಪಿಯುಸಿ ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಏಪ್ರಿಲ್ 29ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಪ್ರವೇಶ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿಯ ಸೀಟುಗಳನ್ನು ಉಪ ವರ್ಗೀಕರಣವಿಲ್ಲದೆ ಹಂಚಿಕೆ ಮಾಡಲು ನಿರ್ದೇಶಿಸಲಾಗಿದೆ.
ಮೇ 4ಕ್ಕೆ ಮೊದಲ ಆಯ್ಕೆ ಪಟ್ಟಿ ಪ್ರಕಟವಾಗಲಿದ್ದು, ಮೇ 29ರಿಂದ ತರಗತಿಗಳು ಆರಂಭವಾಗಲಿವೆ. ಈ ಬಾರಿ 31 ಶಾಲೆಗಳನ್ನು ಪಿಯು ಕಾಲೇಜುಗಳಾಗಿ ಉನ್ನತೀಕರಿಸಲಾಗುತ್ತಿದ್ದು, ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದೇಶ ಪರಿಷ್ಕರಿಸುವಂತೆ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಕೆ.ಸುಭಾಷ್ ಮತ್ತು ಜಿಲ್ಲಾ ಸಂಘಟನಾ ಸಂಚಾಲಕ ಯಲ್ಲಪ್ಪ ಸವಣೂರು ಆಗ್ರಹಿಸಿದ್ದಾರೆ.
Leave a comment