ಹರಪನಹಳ್ಳಿ : ತಾಲ್ಲೂಕಿನ ಕೊಂಗನಹೊಸೂರು ಗ್ರಾಮದಲ್ಲಿ ಶನಿವಾರ ಸಂಜೆ ಅತಿವೇಗದ ಗಾಳಿ ಸಹಿತ ಸುರಿದ ಮಳೆಯಲ್ಲಿ ದನದ ಕೊಟ್ಟಿಗೆ ಗೋಡೆ ಕುಸಿದು ಬಿದ್ದ ಪರಿಣಾಮ ಎರಡು ಆಕಳು ಮೃತಪಟ್ಟು, 1 ಎತ್ತು ಮತ್ತು ಇಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ.
ಕಾಲುಮುರಿದು ಅಸ್ವಸ್ಥಗೊಂಡಿರುವ ಗಜಾಪುರ ಕೊಟ್ರಪ್ಪ ಹಾಗೂ ಸೊಂಟಕ್ಕೆ ಪೆಟ್ಟು ಬಿದ್ದಿರುವ ಗಾಯಗೊಂಡಿರುವ ನಂದಿಬೇವೂರು ಬಸವಂತಪ್ಪ ಅವರುಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಟ್ರಪ್ಪ ಅವರಿಗೆ ಸೇರಿದ ಎರಡು ಆಕಳು ಮೃತಪಟ್ಟಿದ್ದು, ಎರಡು ಕಾಲು ಮುರಿದು ಎತ್ತು ಗಾಯಗೊಂಡಿದೆ. ಕೆಲ ಕ್ಷಣದಲ್ಲಿಯೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಗ್ರಾಮಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂಜೆ ಬೀಸಿದ ಭಾರಿ ವೇಗದ ಗಾಳಿಯ ಪರಿಣಾಮ ಗ್ರಾಮದಲ್ಲಿ 20ಕ್ಕೂ ಹೆಚ್ಚಿನ ಮನೆಗಳ ಮೇಲ್ಛಾವಣಿ ಗಾಳಿಯಲ್ಲಿ ಹಾರಿಹೋಗಿವೆ. 25ಕ್ಕೂ ಅಧಿಕ ವಿದ್ಯುತ್ ಕಂಬಗಳು, ಅನೇಕ ಮರಗಳು ಧರೆಗುರುಳಿವೆ. ಪಾಟೀಲ್ ಚೆನ್ನನಗೌಡ ಅವರಿಗೆ ಸೇರಿದ ರೇಷ್ಮೆ ಮನೆ ಸಂಪೂರ್ಣ ನೆಲಸಮಗೊಂಡಿದೆ. ಕೊಂಗನಹೊಸೂರು ಬಸವರಾಜ್ ಅವರ ಮನೆಯ ಮುಂದಿನ ಎರಡು ವಿದ್ಯುತ್ ಕಂಬಗಳು ಮುರಿದುಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಗ್ರಾಮದ ಹೊರವಲಯದಲ್ಲಿ ನಿರ್ಮಿಸಿಕೊಂಡಿದ್ದ ಮನೆಗಳು ಜಖಂಗೊಂಡಿವೆ. ಸಂಪೂರ್ಣ ವಿದ್ಯುತ್ ಸಂಪರ್ಕ ಕಡಿತಗೊಂಡು ಗ್ರಾಮದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಸಮೀಪದ ಬಾವಿಹಳ್ಳಿಯಲ್ಲಿ ಮೂರು ದನದಕೊಟ್ಟಿಗೆ ಮೇಲ್ಛಾವಣಿಗಳು ಮುರಿದು ಬಿದ್ದಿವೆ.
‘ ಸಂಜೆ 4 ಗಂಟೆಯ ಸಂದರ್ಭದಲ್ಲಿ ಪೂರ್ವ ದಿಕ್ಕಿನಿಂದ ಆರಂಭವಾದ ಬಿರುಗಾಳಿ ಬೀಸಿದ ರಭಸಕ್ಕೆ ಗ್ರಾಮಸ್ಥರೂ ಮನೆಯೊಳಗೆ ಸೇರಿ ರಕ್ಷಣೆ ಪಡೆದುಕೊಂಡೆವು, ಮಳೆ ಕಡಿಮೆ ಸುರಿಯಿತು ಆದರೆ ಇದಕ್ಕಿದ್ದಂತೆಯೆ ವಿದ್ಯುತ್ ಕಂಬಗಳು, ಮರಗಳು ಮುರಿದು ಬಿದ್ದವು. ಸ್ವಲ್ಪ ಸಮಯದ ಬಳಿಕ ಗ್ರಾಮದಲ್ಲಿ ಆಗಿರುವ ಅನಾಹುತ ತಿಳಿಯಿತು’ ಎಂದು ಗ್ರಾಮದ ಬಸವರಾಜ್ ಮತ್ತು ಮಲ್ಲಪ್ಪ ಅವರು ಗ್ರಾಮದ ನೈಜ ಚಿತ್ರಣವನ್ನು ವಿವರಿಸಿದರು.
ಜಿ.ದಾದಾಪುರದಲ್ಲಿ ಅಸ್ತವ್ಯಸ್ತ
ಹರಪನಹಳ್ಳಿ ತಾಲ್ಲೂಕಿನ ಜಿ.ದಾದಾಪುರ ಗ್ರಾಮದಲ್ಲಿ ಶನಿವಾರ ಸಂಜೆ ಬೀಸಿದ ಬಿರುಗಾಳಿ, ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಗೆ ಮನೆಗಳು ಬಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮಾಗಳ್ದ ಉಮಾಪತಿ, ಮಾಗಳ್ದ ಬಸವಂತಪ್ಪ ಅವರ ಮನೆ, ಅಡಿಕೆ ತೋಟಕ್ಕೆ ಹಾನಿಯಾಗಿದೆ. ಗ್ರಾಮದ ಸಿದ್ದಪ್ಪ, ಪರಸಪ್ಪ, ಹನುಮಂತಪ್ಪ, ಆನಂದ, ಕರಡಿ ಅಶೋಕ ಅವರ ಮನೆ ಮತ್ತು ಮೇವು, ಗೋಣೆಪ್ಪ, ಮಾಗಳ್ದ ನಾಗರಾಜ್, ಜಿ.ಹನುಮಂತಪ್ಪ, ದುರುಗಪ್ಪ, ಸಿಳ್ಳೆಕ್ಯಾತರ ಈಶಪ್ಪ, ಹಾವೇರಿ ಕೆಂಚಮ್ಮ, ಹಲುವಾಗಲು ಗಂಗವ್ವ ಅವರ ಮನೆ ಸೇರಿ 50ಕ್ಕೂ ಅಧಿಕ ಮನೆಗಳ ಮೇಲ್ಚಾವಣಿಯ ತಗಡುಗಳು ಮುರಿದು ಬಿದ್ದಿವೆ. ಆರ್ ಸಿಸಿ ಮನೆಗಳಿಗೂ ಹಾನಿಯಾಗಿದೆ. ಮನೆಯೊಳಗೆ ನೀರು ನುಗ್ಗಿ ದವಸ ಧಾನ್ಯಗಳು, ಅಡುಗೆ ಸಾಮಾಗ್ರಿಗಳು ಜಲಾವೃತಗೊಂಡಿವೆ.ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
Leave a comment