ದಾವಣಗೆರೆ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಎಸ್.ಐ.ಆರ್. ಪ್ರಕ್ರಿಯೆ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳು ಮತದಾರರ ಮನೆಗೆ ಕಡ್ಡಾಯವಾಗಿ ಭೇಟಿ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ; ಶಮ್ಲಾ ಇಕ್ಬಾಲ್ ಸೂಚನೆ ನೀಡಿದರು.
ಶುಕ್ರವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತಂತೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಪ್ರತಿಯೊಬ್ಬ ಮತಗಟ್ಟೆ ಅಧಿಕಾರಿಗಳು ಪ್ರತಿ ಮತದಾರರ ಮನೆಗೂ ಭೇಟಿ ನೀಡಲೇಬೇಕು, ಯಾವುದೇ ಕಾರಣಕ್ಕೂ ನೀವಿದ್ದ ಬಳಿ ಮತದಾರರನ್ನು ಕರೆಸಿಕೊಳ್ಳಬಾರದು ಎಂದು ಸೂಚನೆ ನೀಡಿ ಈ ಬಗ್ಗೆ ಬಿ.ಎಲ್.ಓ. ಮೇಲ್ವಿಚಾರಕರು ಮತ್ತು ನೋಡಲ್ ಅಧಿಕಾರಿಗಳು ಈ ಬಗ್ಗೆ ಗಮನವಹಿಸಲು ಸೂಚನೆ ನೀಡಿದರು.
ಕರಡು ಪಟ್ಟಿಯನ್ವಯ ಜಿಲ್ಲೆಯಲ್ಲಿ 1499282 ಮತದಾರರಿದ್ದು 1760 ಮತಗಟ್ಟೆಗಳಿವೆ. ಇದರಲ್ಲಿ 1452504 ಮತದಾರರನ್ನು ಮ್ಯಾಪಿಂಗ್ ಮಾಡಲಾಗಿದೆ. ಇದರಲ್ಲಿ ಬಿಎಲ್‍ಓಗಳು ಸ್ವಯಂ ಗಣತಿ ನಮೂನೆಗಳನ್ನು ವಿತರಣೆ ಮಾಡಲಾಗಿದ್ದು ಬಿಎಲ್‍ಓಗಳು ಪಡೆದುಕೊಳ್ಳಲಾದ 13737 ಸ್ವಯಂ ಗಣತಿ ನಮೂನೆಗಳನ್ನು ಗಣಕೀಕರಣ ಮಾಡಲಾಗಿದೆ. ಈ ವೇಳೆ ವಲಸೆ, ಮರಣ, ದ್ವಿಪ್ರತಿ ಮತ್ತು ಇತರೆ ಸೇರಿ ಒಟ್ಟು 159 ಮತದಾರರನ್ನು ಗುರುತಿಸಲಾಗಿದೆ.
ಮುಂದಿನ 4 ದಿನಗಳಲ್ಲಿ ಜಿಲ್ಲೆಯ ಎಲ್ಲಾ ಮತದಾರರ ಮನೆಗೂ ಸ್ವಯಂ ಗಣತಿ ನಮೂನೆಗಳನ್ನು ಕಡ್ಡಾಯವಾಗಿ ವಿತರಣೆ ಮಾಡುವುದನ್ನು ಪೂರ್ಣಗೊಳಿಸಬೇಕು ಎಂದು ನೋಡಲ್ ಅಧಿಕಾರಿಗಳಿಗೆ ಕಾರ್ಯದರ್ಶಿಗಳು ಸೂಚನೆ ನೀಡಿದರು.
ಸ್ವಯಂ ಗಣತಿ ನಮೂನೆಗಳನ್ನು ವಿತರಣೆ ಮಾಡಿದ ಕ್ಷೇತ್ರಗಳಲ್ಲಿ ಚನ್ನಗಿರಿ ಮೊದಲ ಸ್ಥಾನದಲ್ಲಿದ್ದು ಇದೇ ರೀತಿ ಎಲ್ಲಾ ತಾಲ್ಲೂಕುಗಳಲ್ಲಿ ಎಸ್.ಐ.ಆರ್. ಕೆಲಸವನ್ನು ಆದ್ಯತೆ ಮೇಲೆ ನಿರ್ವಹಿಸಲು ಸೂಚನೆ ನೀಡಿದರು.
ಕಾರ್ಯದರ್ಶಿಯವರು ಜಗಳೂರು ಪಟ್ಟಣದ ಮತಗಟ್ಟೆ ಮತ್ತು ದಾವಣಗೆರೆ ಆಜಾದ್ ನಗರದ ಮತಗಟ್ಟೆಗಳಿಗೆ ಭೇಟಿ ನೀಡಿ ಎಸ್.ಐ.ಆರ್.
ಪ್ರಕ್ರಿಯೆ ನಡೆಸುತ್ತಿರುವ ಬಗ್ಗೆ ಮತಗಟ್ಟೆ ಅಧಿಕಾರಿಗಳೊಂದಿಗೆ ಮತದಾರರನ್ನು ಭೇಟಿ ಮಾಡಿ ಸ್ವಯಂ ಗಣತಿ ನಮೂನೆಗಳನ್ನು ಸ್ವೀಕರಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.
Leave a comment