Home ವಿಜಯನಗರ ಜಿಲ್ಲೆಯಲ್ಲಿ ಭೀಕರ ಮುಂಗಾರು ಅಭಾವ ಹಾಗೂ ಶೇ.60 ರಷ್ಟು ಮಳೆ ಕೊರತೆ: 
Homeಸುದ್ದಿಗಳು

ವಿಜಯನಗರ ಜಿಲ್ಲೆಯಲ್ಲಿ ಭೀಕರ ಮುಂಗಾರು ಅಭಾವ ಹಾಗೂ ಶೇ.60 ರಷ್ಟು ಮಳೆ ಕೊರತೆ: 

Share
Share
ವಿಜಯನಗರ : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಜಯನಗರ ಜಿಲ್ಲೆಯಾದ್ಯಂತ ತೀವ್ರ ಮಳೆ ಕೊರತೆ ಎದುರಾಗಿದ್ದು, ಜಿಲ್ಲೆಯನ್ನು ಭೀಕರ ಬರ ಪರಿಸ್ಥಿತಿ ಆವರಿಸಿದೆ. ಜೂನ್ 1 ರಿಂದ ಆಗಸ್ಟ್ 6 ರವರೆಗಿನ ಅವಧಿಯಲ್ಲಿ ವಾಡಿಕೆ ಮಳೆಯಾದ 188.7 ಮಿ.ಮೀ.ಗೆ ಪ್ರತಿಯಾಗಿ ಕೇವಲ 76.0 ಮಿ.ಮೀ. ಮಳೆಯಾಗಿದ್ದು, ಶೇಕಡಾ 60 ರಷ್ಟು ಮಳೆ ಅಭಾವ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ರೈತರ ನೆರವಿಗೆ ಸರ್ಕಾರ ಮುಂದಾಗಿದೆ ಎಂದು ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್‌ ಖಾನ್‌ ಅವರು   ತಿಳಿಸಿದರು.

ಅವರು ಶುಕ್ರವಾರ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಸರ್ಕಾರದ ಸೂಚನೆಯಂತೆ ರಾಜ್ಯಾದ್ಯಂತ ಬರ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ಪ್ರವಾಸ ಕೈಗೊಳ್ಳಲಾಗಿದೆ. ರೈತರ ಸಾಲಕ್ಕೆ ಬ್ಯಾಂಕ್ ಗಳಿಂದ ನೋಟಿಸ್ ನೀಡಲಾಗುತ್ತಿದೆ ಎಂದು ರೈತರು ತಿಳಿಸಿದ್ದು ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುತ್ತದೆ, ಜಿಲ್ಲಾ ಹಂತದಲ್ಲಿ ಬ್ಯಾಂಕರ್ಸ್ ಗಳ ಸಭೆ ನಡೆಸಿ ನಿರ್ದೇಶನ ನೀಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಜಲಾಶಯದಲ್ಲಿ ನೀರು ಲಭ್ಯವಿದ್ದು ಕುಡಿಯುವ ನೀರಿಗೆ ಸಮಸ್ಯೆ ಇರುವುದಿಲ್ಲ. ಗ್ರಾಮೀಣ ಭಾಗದಲ್ಲಿ 56 ಖಾಸಗಿ ಬೋರ್ ವೆಲ್ ಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ, ಇದನ್ನು ಹೊರತುಪಡಿಸಿ ಬೇರೆ ಸಮಸ್ಯೆ ಇಲ್ಲ, ಮುಂದಿನ ದಿನಗಳಲ್ಲೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕೆಂದರು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯು ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ.

ತಾಲ್ಲೂಕುವಾರು ಮಳೆ ಕೊರತೆಯ ವಿವರ:
ಹೊಸಪೇಟೆ: 47.2 ಮಿ.ಮೀ ಮಳೆ ಶೇ 77% ಅತ್ಯಧಿಕ ಕೊರತೆ,ಹಗರಿಬೊಮ್ಮನಹಳ್ಳಿ 69.3 ಮಿ.ಮೀ ಮಳೆ 63% ಅತ್ಯಧಿಕ ಕೊರತೆ, ಹೂವಿನಹಡಗಲಿ: 67.5 ಮಿ.ಮೀ ಮಳೆ 59% ಕೊರತೆ, ಹರಪನಹಳ್ಳಿ: 91.5 ಮಿ.ಮೀ ಮಳೆ 57% ಕೊರತೆ, ಕೂಡ್ಲಿಗಿ: 83.1 ಮಿ.ಮೀ ಮಳೆ 47% ಕೊರತೆ, ಕೊಟ್ಟೂರು: 83.1 ಮಿ.ಮೀ ಮಳೆ 44% ಕೊರತೆಯಾಗಿದೆ.

ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ:
ಬಿತ್ತನೆ ಹಿನ್ನಡೆ ಒಟ್ಟು 2,97,633 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಕೇವಲ 1,93,670 ಹೆಕ್ಟೇರ್ (ಶೇ. 65.07) ಮಾತ್ರ ಬಿತ್ತನೆಯಾಗಿದೆ. ಮಳೆಯಾಶ್ರಿತ ಪ್ರದೇಶದ 1,43,063 ಹೆಕ್ಟೇರ್ ಪೈಕಿ 1,25,717 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ (ಶೇ. 87 ಕ್ಕೂ ಹೆಚ್ಚು) ಬೆಳೆಗಳು ತೇವಾಂಶ ಕೊರತೆಯಿಂದ ಬಾಡಿ ಒಣಗುತ್ತಿವೆ. ಬೆಳೆಗಳ ಸ್ಥಿತಿ: ಜೋಳ, ಮೆಕ್ಕೆಜೋಳ, ಸೂರ್ಯಕಾಂತಿ ಹಾಗೂ ಸಿರಿಧಾನ್ಯ ಬೆಳೆಗಳು ಶೇ. 40 ರಿಂದ ಶೇ. 90 ರಷ್ಟು ಒಣಗಿ ಕುಂಠಿತಗೊಂಡಿವೆ.

ತೋಟಗಾರಿಕೆ ಬೆಳೆಗಳು: ಈರುಳ್ಳಿ, ಟೊಮಾಟೊ ಮತ್ತು ಮೆಣಸಿನಕಾಯಿ ಬೆಳೆಗಳಲ್ಲಿ ಸುಮಾರು 1,289 ಹೆಕ್ಟೇರ್ ಪ್ರದೇಶ ತೀವ್ರ ಹಾನಿಗೊಳಗಾಗಿದೆ.

ತುಂಗಭದ್ರಾ ಜಲಾಶಯ ಹಾಗೂ ಕುಡಿಯುವ ನೀರು: ತುಂಗಭದ್ರಾ ಜಲಾಶಯ ಒಟ್ಟು 105.78 ಟಿಎಂಸಿ ಸಾಮರ್ಥ್ಯದಲ್ಲಿ ಪ್ರಸ್ತುತ 64.81 ಟಿಎಂಸಿ ನೀರು ಲಭ್ಯವಿದೆ. ರಾಷ್ಟ್ರೀಯ ಮತ್ತು ರಾಜ್ಯ ಜಲನೀತಿಯನ್ವಯ ಜಲಾಶಯದಲ್ಲಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಪ್ರಥಮ ಆದ್ಯತೆಯ ಮೇಲೆ ಕಾಯ್ದಿರಿಸಲಾಗಿದೆ. ರೈತರು ಕೃಷಿಗಾಗಿ ಈ ನೀರನ್ನು ನಂಬದೆ ಪರ್ಯಾಯ ಬೆಳೆಗಳನ್ನು ಆಶ್ರಯಿಸಲು ರೈತರಿಗೆ ಮನವರಿಕೆ ಮಾಡಲು ತಿಳಿಸಲಾಯಿತು.

ಕುಡಿಯುವ ನೀರು: ಗ್ರಾಮೀಣ ಪ್ರದೇಶಗಳಲ್ಲಿ 32 ಗ್ರಾಮಗಳಿಗೆ 44 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ.

ಮೇವು ಲಭ್ಯತೆ ಮತ್ತು ಅನುದಾನ:
ಮೇವು ಸಂಗ್ರಹ: ಜಿಲ್ಲೆಯಲ್ಲಿ ಪ್ರಸ್ತುತ 7,61,571 ಟನ್ ಮೇವು ಲಭ್ಯವಿದ್ದು, ಮುಂದಿನ 50 ವಾರಗಳಿಗೆ ಜಾನುವಾರುಗಳಿಗೆ ಮೇವಿನ ಅಭಾವವಿರುವುದಿಲ್ಲ. ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಖಾತೆಗಳಲ್ಲಿ ಒಟ್ಟು ₹916.09 ಲಕ್ಷ ಅನುದಾನ ಲಭ್ಯವಿದೆ.

ಸಭೆಗಳು: ಪರಿಸ್ಥಿತಿ ನಿರ್ವಹಣೆಗೆ 8 ಜಿಲ್ಲಾ ವಿಪತ್ತು ನಿರ್ವಹಣಾ ಹಾಗೂ 16 ತಾಲ್ಲೂಕು ಟಾಸ್ಕ್ ಫೋರ್ಸ್ ಸಭೆಗಳನ್ನು ನಡೆಸಲಾಗಿದೆ.

ಪರ್ಯಾಯ ಬೆಳೆ ಯೋಜನೆ: ಕಡಿಮೆ ನೀರು ಬೇಡುವ ಸಿರಿಧಾನ್ಯಗಳು (ನವಣೆ, ಸಜ್ಜೆ), ರಾಗಿ (ಉPU-28) ಹಾಗೂ ಸಾಲು ಬೆಳೆ ಅಂತರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.

ತೇವಾಂಶ ಸಂರಕ್ಷಣೆ: ಬೆಳೆಗಳ ಮೇಲೆ ಶೇ. 5 ರಷ್ಟು ಕಾಯೋಲಿನ್ ದ್ರಾವಣ ಸಿಂಪಡಿಸುವುದು ಮತ್ತು ಮಲ್ಚಿಂಗ್ ಮೂಲಕ ತೇವಾಂಶ ಉಳಿಸಿಕೊಳ್ಳಬೇಕು.

ಬೆಳೆ ವಿಮೆ: ನಷ್ಟ ಪರಿಹಾರ ಪಡೆಯಲು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಲು ತಿಳಿಸಿದರು. ಬೆಳೆ ಹಾನಿ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ಕ್ಷೇತ್ರ ವೀಕ್ಷಣೆ ನಡೆಸಿದ್ದು, ವಾಸ್ತವ ವರದಿಯನ್ನು ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.ಈ ವೇಳೆ ಹರಪನಹಳ್ಳಿ ಶಾಸಕರಾದ ಲತಾ ಮಲ್ಲಿಕಾರ್ಜುನ್, ಹಡಗಲಿ ಶಾಸಕರಾದ ಕೃಷ್ಣ ನಾಯ್ಕ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿ.ಪಂ. ಸಿಇಓ ನೊಂಗ್ಜಾಯ್ ಮಹಮದ್ ಅಲಿ ಅಕ್ರಂ ಷಾ, ಎಸ್.ಪಿ.ಜಾಹ್ನವಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಸಿಲಿಂಡರ್ ಪಡೆಯಲು ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯ

ದಾವಣಗೆರೆ  : ಜಿಲ್ಲೆಯ ಎಲ್ಲಾ ಬಿಪಿಸಿಎಲ್, ಹೆಚ್‍ಪಿಸಿಎಲ್ ಹಾಗೂ   ಐಓಸಿಎಲ್ ಅನಿಲ ಗ್ರಾಹಕರ ತಮ್ಮ...

Homeಸುದ್ದಿಗಳು

ರಾಂಚಿಯಲ್ಲಿ ಎಐಎಸ್ಎ ಅಧ್ಯಕ್ಷೆ ಮೇಲಿನ ದಾಳಿ: ಸಂಘಿ ಗೂಂಡಾಗಳ ಬಂಧನಕ್ಕೆ ಗಂಗಾವತಿಯಲ್ಲಿ ಆಗ್ರಹ

ಗಂಗಾವತಿ : ಜಾರ್ಖಂಡ್‌ನ ರಾಂಚಿಯಲ್ಲಿ ನೇಮಕಾತಿ ಹಗರಣಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗಳ ವಿರುದ್ಧ ಹೋರಾಟ ನಡೆಸುತ್ತಿರುವ...

Homeಸುದ್ದಿಗಳು

ಸಚಿವ ಸ್ಥಾನಕ್ಕೆ ಮನವಿ ಮಾಡಿರುವೆ : ಎಂ.ಪಿ.ಲತಾ

ಹರಪನಹಳ್ಳಿ : ಹಿರಿಯ ನಾಯಕರ ಸಲಹೆಯಂತೆ ಮಹಿಳಾ ಕೋಟಾದಡಿ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಗೆ...

Homeಸುದ್ದಿಗಳು

ರಜಾ ದಿನಗಳಲ್ಲಿ ಗ್ರಂಥಾಲಯ ಸೇವೆ ಲಭ್ಯ

ವಿಜಯನಗರ : ನಗರದ ಜಿಲ್ಲಾ ಕ್ರೀಡಾಂಗಣ ಹತ್ತಿರವಿರುವ ಮುಖ್ಯ ನಗರ ಕೇಂದ್ರ ಗ್ರಂಥಾಲಯ ಪ್ರತಿ ಸೋಮವಾರ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.