ವಿಜಯನಗರ : ಸಾರ್ವಜನಿಕರು ತಮ್ಮ ದಿನನಿತ್ಯದ ಸಮಸ್ಯೆಗಳು, ಬೇಡಿಕೆಗಳು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸಿ, ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಜಾಸೇವೆ ಆಂದೋಲನ ಆಯೋಜಿಸಲಾಗಿದೆ. ಅಧಿಕಾರಿಗಳು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು ಎಂದು ತಹಶೀಲ್ದಾರ್ ಶೃತಿ ಎಂ ಮಾಳಪ್ಪಗೌಡರ ಹೇಳಿದರು.
ಹೊಸಪೇಟೆ ತಾಲ್ಲೂಕಿನ ಕಮಲಾಪುರ ರೈತ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರವೇ ಜನರ ಬಳಿಗೆ ಹೋಗಿ ಅವರ ಸಮಸ್ಯೆಗಳ ಆಲಿಸಬೇಕು ಎನ್ನುವ ಐತಿಹಾಸಿಕ ತೀರ್ಮಾನದೊಂದಿಗೆ ಪ್ರಜಾಸೇವೆ ಆಂದೋಲನ ಆರಂಭಿಸಲಾಗಿದೆ.
ಈ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 15 ಅರ್ಜಿ, ಶಿಕ್ಷಣ ಇಲಾಖೆ 4, ಸರ್ವೇ ಇಲಾಖೆ 2, ಕಮಲಾಪುರ ಪುರಸಭೆಗೆ ಸಂಬಂಧಿಸಿದಂತೆ 19 ಹಾಗೂ ತಾಲ್ಲೂಕು ಪಂಚಾಯತ್ ಗೆ ಸಂಬಂಧಿಸಿದ 5 ಸೇರಿದಂತೆ ಒಟ್ಟು 52 ಅರ್ಜಿಗಳು ಸಲ್ಲಿಕೆಯಾಗಿವೆ ಎಂದ ಅವರು, ಸಾರ್ವಜನಿಕರು ಜಮೀನು, ಮೂಲಸೌಕರ್ಯ, ಪಿಂಚಣಿ ಹಾಗೂ ಇಲಾಖಾವಾರು ಸಮಸ್ಯೆಗಳ ಕುರಿತು ಸಲ್ಲಿಸಿರುವ ಪ್ರತಿಯೊಂದು ಅರ್ಜಿಯನ್ನು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ರವಾನಿಸಿ, ನಿರ್ದಿಷ್ಟ ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರಜಾಸೇವೆ ಆಂದೋಲನವು ಪ್ರಜೆಗಳಿಂದ, ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ರೂಪಿಸಲಾದ ಕಾರ್ಯಕ್ರಮ. ಪ್ರಜಾ ಸರ್ಕಾರಕ್ಕೆ ಅರ್ಥ ಬರುವ ರೀತಿಯಲ್ಲಿ ಸಾರ್ವಜನಿಕರ ಪ್ರತಿಯೊಂದು ಆಹವಾಲು ಸ್ವೀಕರಿಸಿ, ಕಾನೂನುಬದ್ಧವಾಗಿ ವಿಲೇವಾರಿ ಮಾಡಲು ತಾಲೂಕು ಆಡಳಿತ ಕಂಕಣ ಬದ್ಧವಾಗಿದೆ ಎಂದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಶೃತಿ ಅವರು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರು, ಅಹವಾಲು ಸ್ವೀಕರಿಸಿದರು. ಕಮಲಾಪುರ ಪುರಸಭೆ ವ್ಯಾಪ್ತಿಯ ರೈತರೊಬ್ಬರು ಕಳೆದ ಮೂರು ವರ್ಷಗಳಿಂದ ಪೋಡಿಗಾಗಿ ಅಲೆದಾಡುತ್ತಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಲ್ಲಿಸಲಾದ ಅಹವಾಲಿಗೆ ಸ್ಪಂದಿಸಿದ ಅವರು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದು, ಶೀಘ್ರವೇ ಪೋಡಿ ಪ್ರಕ್ರಿಯೆ ಪೂರ್ಣಗೊಳಿಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಸರ್ವೆ ನಂಬರ್ 901/2 ಜಮೀನಿಗೆ ಸರ್ಕಾರಿ ರಸ್ತೆ ಕಾಯ್ದಿರಿಸಿದ್ದರೂ ಖಾಸಗಿ ವ್ಯಕ್ತಿಯೊಬ್ಬರು ಅಡ್ಡಲಾಗಿ ತಡೆಗೋಡೆ ನಿರ್ಮಿಸಿ ರೈತರ ಸಂಚಾರಕ್ಕೆ ತೊಂದರೆ ನೀಡುತ್ತಿರುವ ಬಗ್ಗೆ ಮತ್ತೊಬ್ಬ ರೈತ ಮನವಿ ಸಲ್ಲಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿ ಸೆಪ್ಟೆಂಬರ್ 17ರಂದು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಕಾನೂನಾತ್ಮಕವಾಗಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನ ಮತ್ತು ವಿಶೇಷ ಚೇತನರಿಗೆ ನೀಡಲಾಗುವ ಪಿಂಚಣಿ ಆದೇಶ ಪತ್ರ ವಿತರಿಸಿದರು. ಸಭೆಯಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕಾಧಿಕಾರಿ ಆಲಂ ಪಾಷಾ, ಪುರಸಭೆ ಮುಖ್ಯಾಧಿಕಾರಿ ಡಿ.ಬಿ. ವೀರಣ್ಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ನಜೀಮಾ ಬಾನು ಸೇರಿದಂತೆ ವಿವಿಧ ಇಲಾಖೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು
Leave a comment