ಹರಪನಹಳ್ಳಿ : ಸಾರ್ವಜನಿಕ ಶಿಕ್ಷಣ ಉಳಿಸಿ ಎಂಬ ಘೋಷವಾಕ್ಯದೊಂದಿಗೆ, ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳೊಂದಿಗೆ ಜೋಡಿಸುವ ಮತ್ತು ವಿಲೀನಗೊಳಿಸುವ ರಾಜ್ಯ ಸರ್ಕಾರದ ನೀತಿ ವಿರುದ್ಧ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಪದಾಧಿಕಾರಿಗಳು ಗುರುವಾರ ಆಕ್ರೋಶ ವ್ಯಕ್ತಪಡಿಸಿದರು. ನಗರದ ವಿವಿಧ ಪಿಯು ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ, ಖಾಸಗೀಕರಣ ನೀತಿ ಕೈಬಿಡಲು ಆಗ್ರಹಿಸಿದರು.
ಎಸ್ಎಫ್ಐ ತಾಲೂಕು ಅಧ್ಯಕ್ಷ ಸಂಜನಾಯ್ಕ ಎಲ್.ಜಿ. ಮಾತನಾಡಿ, ರಾಜ್ಯ ಸರ್ಕಾರವು 2,000 ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಜೋಡಣೆ ಮಾಡುವ ಹಾಗೂ ಗ್ರಾಮ ಪಂಚಾಯಿತಿಗೊಂದು ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸುವ ಹೆಸರಿನಲ್ಲಿ ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು. 2014-15ರಲ್ಲಿ ರಾಜ್ಯದಲ್ಲಿ 75,812 ಸರ್ಕಾರಿ ಶಾಲೆಗಳಿದ್ದವು. ಆದರೆ 2026ರ ವೇಳೆಗೆ ಈ ಸಂಖ್ಯೆ 46,483ಕ್ಕೆ ಕುಸಿದಿದ್ದು, ಕಳೆದ 12 ವರ್ಷಗಳಲ್ಲಿ ಬರೋಬ್ಬರಿ 29,329 ಶಾಲೆಗಳು ಮುಚ್ಚಲ್ಪಟ್ಟಿವೆ.
ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಪಠ್ಯಪುಸ್ತಕ ವಿತರಣೆ ವಿಳಂಬ, ಸೈಕಲ್ ಯೋಜನೆ ಸ್ಥಗಿತ ಹಾಗೂ ಕಳಪೆ ಗುಣಮಟ್ಟದ ಸಮವಸ್ತ್ರ-ಶೂ ವಿತರಣೆಯಿಂದಾಗಿ 2015-16ರಲ್ಲಿ 47.1 ಲಕ್ಷದಷ್ಟಿದ್ದ ದಾಖಲಾತಿ 2025-26ರಲ್ಲಿ 38.2 ಲಕ್ಷಕ್ಕೆ (ಶೇ.19ರಷ್ಟು) ಇಳಿಕೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 79,694 ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ತಾಲೂಕು ಕಾರ್ಯದರ್ಶಿ ಕೆ. ಆಕಾಶ್, ಸಂಜುನಾಯ್ಕ, ಮಂಗಳಾ, ವಿದ್ಯಾರ್ಥಿಗಳಾದ ರೋಹಿತ್, ನಿಂಗರಾಜ್, ಪ್ರಶಾಂತ್, ಪೃಥ್ವಿರಾಜ್, ಅಂಕಿತಾ, ಕೀರ್ತಿ, ಸಿಂಚನ ಇದ್ದರು. ಹರಪನಹಳ್ಳಿ ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಪದಾಧಿಕಾರಿಗಳು ಗುರುವಾರ ತಹಶೀಲ್ದಾರ ನಟರಾಜ್ ಅವರಿಗೆ ಮನವಿ ಸಲ್ಲಿಸಿದರು.
Leave a comment