ದಾವಣಗೆರೆ: ಆಸ್ತಿ ಪಾಲು ವಿಭಾಗದ ವಿಚಾರವಾಗಿ ಉಂಟಾದ ಮನಸ್ತಾಪದಿಂದ ಸಹೋದರನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಇಬ್ಬರು ಅಪರಾಧಿಗಳಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ₹25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಹರಿಹರ ನಗರದ ನಿವಾಸಿಗಳಾದ ರಾಜು ಕೆ. (25) ಮತ್ತು ಮಾರುತಿ ಜಿ.ಕೆ. ಶಿಕ್ಷೆಗೆ ಗುರಿಯಾದ ಅಪರಾಧಿಗಳು.
ಪ್ರಕರಣದ ಹಿನ್ನೆಲೆ: ಮೃತ ಕುಮಾರ್ ಕೆ.ಜಿ. ಹಾಗೂ ಅಪರಾಧಿಗಳಾದ ರಾಜು ಮತ್ತು ಮಾರುತಿ ಮಲಸಹೋದರರು. ಇವರ ತಂದೆ ಗುಡ್ಡಪ್ಪ ಅವರಿಗೆ ಇಬ್ಬರು ಪತ್ನಿಯರಿದ್ದು, ಮೊದಲ ಪತ್ನಿಯ ಮಗ ಕುಮಾರ್ ಮತ್ತು ಎರಡನೇ ಪತ್ನಿಯ ಮಕ್ಕಳಾದ ರಾಜು ಹಾಗೂ ಮಾರುತಿ ನಡುವೆ ಆಸ್ತಿ ಪಾಲು ಹಂಚಿಕೆ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು.
2023ರ ಮೇ 14ರಂದು ಇದೇ ವಿಚಾರಕ್ಕೆ ಜಗಳ ತೆಗೆದ ಆರೋಪಿಗಳು, ಕುಮಾರ್ ಅವರಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ಈ ಕುರಿತು ಮೃತರ ಪತ್ನಿ ಲಕ್ಷ್ಮಿ ಎಸ್. ಅಲಿಯಾಸ್ ರೇಖಾ ಅವರು ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಹರಿಹರ ನಗರ ಠಾಣೆಯ ಅಂದಿನ ಪೊಲೀಸ್ ನಿರೀಕ್ಷಕ ಎಸ್. ದೇವಾನಂದ್ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಲವರ್ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನವೆಂಬರ್ 25ರಂದು ಈ ತೀರ್ಪು ಪ್ರಕಟಿಸಿದ್ದಾರೆ.
ದಂಡದ ಮೊತ್ತ ₹25 ಸಾವಿರದಲ್ಲಿ ₹15 ಸಾವಿರವನ್ನು ಸಂತ್ರಸ್ತ ಕುಟುಂಬಕ್ಕೆ ಪರಿಹಾರವಾಗಿ ನೀಡಲು ಮತ್ತು ಉಳಿದ ₹10 ಸಾವಿರವನ್ನು ಸರ್ಕಾರಕ್ಕೆ ಜಮಾ ಮಾಡಲು ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸತೀಶ್ ಕೆ. ವಾದ ಮಂಡಿಸಿದ್ದರು. ಪ್ರಕರಣವನ್ನು ಸಮರ್ಥವಾಗಿ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸರ್ಕಾರಿ ವಕೀಲರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೇಖರ್ ಎಚ್.ಟಿ. ಶ್ಲಾಘಿಸಿದ್ದಾರೆ.
Leave a comment