ಬಳ್ಳಾರಿ : ಮಿಂಚೇರಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ 11 ಕಾಡು ಮೊಲಗಳನ್ನು ಬೇಟೆಯಾಡಿದ ಆರೋಪದ ಮೇರೆಗೆ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಕೋನಾಪುರ ಗ್ರಾಮದ ಬಿ.ಟಿ. ಆಂಜನೇಯ (33), ನಿಂಗಣ್ಣ (31) ಹಾಗೂ ಗಂಗಾಧರ (27) ಬಂಧಿತ ಆರೋಪಿಗಳು. ಬಳ್ಳಾರಿ ಪ್ರಾದೇಶಿಕ ಅರಣ್ಯ ವಲಯದ ಮಿಂಚೇರಿ ಗ್ರಾಮದ ಸರ್ವೆ ನಂಬರ್ 65ರ ಬಸಪ್ಪನ ಕೊಳ್ಳದ ಸಮೀಪ ಗುರುವಾರ ಬೆಳಗಿನ ಜಾವ 4ರ ಸುಮಾರಿಗೆ ಆರೋಪಿಗಳು ಕಾಡು ಮೊಲಗಳನ್ನು ಬೇಟೆಯಾಡಿದ್ದರು.
ಮಾಹಿತಿ ತಿಳಿದು ದಾಳಿ ನಡೆಸಿದ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ, ನಗರದ 3ನೇ ಹೆಚ್ಚುವರಿ ಪ್ರಥಮ ದರ್ಜೆ ಸಿವಿಲ್ನ್ಯಾ ಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ‘ಅರಣ್ಯ ಪ್ರದೇಶದಲ್ಲಿ ಅಕ್ರಮ ಬೇಟೆ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ವನ್ಯಜೀವಿಗಳ ಸಂರಕ್ಷಣೆಗೆ ಸಾರ್ವಜನಿಕರು ಸಹಕರಿಸಬೇಕು’ ಎಂದು ಬಳ್ಳಾರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
Leave a comment