ಹರಪನಹಳ್ಳಿ : ತಾಲ್ಲೂಕಿನ ಅರಸೀಕೆರೆ ದಂಡಿನ ದುರುಗಮ್ಮ ದೇವಿ ಜಾತ್ರೆಯ ಖರ್ಚಿಗಾಗಿ ತಮ್ಮ ಖಾತೆಯಿಂದ ಹಣ ಪಡೆಯಲು ಬರುವ ಗ್ರಾಹಕರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಕಾಲಕ್ಕೆ ಒದಗಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಹತ್ತು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ 15 ಸಾವಿರ ಖಾತೆದಾರರನ್ನು ಹೊಂದಿದೆ. ಇದರ ವ್ಯಾಪ್ತಿಗೆ 4 ಗ್ರಾಮ ಪಂಚಾಯಿತಿಗಳು ಒಳಪಟ್ಟಿವೆ. ಉದ್ಯೋಗ ಖಾತ್ರಿ ಫಲಾನುಭವಿಗಳು, ಖಾತೆದಾರರು, ಬ್ಯಾಂಕಿನಲ್ಲಿ ಸಾಲ ಪಡೆಯುವ ರೈತರು, ಗ್ರಾಹಕರು, ಬಂಗಾರ ಅಡವಿಡುವ ಗ್ರಾಹಕರು ಬ್ಯಾಂಕ್ ಗೆ ಬರುತ್ತಾರೆ. ಆದರೆ ಸಕಾಲಕ್ಕೆ ಅಧಿಕಾರಿಗಳು ಹಣ ಒದಗಿಸುತ್ತಿಲ್ಲ. ದಿನವೊಂದಕ್ಕೆ ಕೇವಲ 50 ಲಕ್ಷ ವ್ಯವಹರಿಸಿ, ವಹಿವಾಟು ನಿಲ್ಲಿಸಿ ಬಿಡುತ್ತಾರೆ. ಬ್ಯಾಂಕ್ ವ್ಯಾಪ್ತಿಗೆ 40 ಹಳ್ಳಿಗಳು ಒಳಪಡುತ್ತವೆ. ನಿತ್ಯ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹಣವಿಲ್ಲದೇ ನಿರಾಸೆಯಿಂದ ವಾಪಾಸು ಹೋಗುತ್ತಿದ್ದಾರೆ. ಬ್ಯಾಂಕ್ ನಲ್ಲಿ ಹೆಚ್ಚುವರಿ ಕೌಂಟರ್ ತೆರೆಯಬೇಕು ಇಲ್ಲದಿದ್ದರೆ ಬ್ಯಾಂಕ್ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಕೆರೆಗುಡಿಹಳ್ಳಿ ಹಾಲೇಶ್ ಎಚ್ಚರಿಸಿದ್ದಾರೆ. ಗ್ರಾಹಕರಾದ ಹನುಮಂತಪ್ಪ, ರತ್ನಮ್ಮ, ಮಲ್ಲಪ್ಪ,ಮಹೇಶ್ ಇತರರಿದ್ದರು.
Leave a comment