ಹರಪನಹಳ್ಳಿ : ಇಲ್ಲಿಯ ತರಳಬಾಳು ಕಲ್ಯಾಣಮಂಟಪದಲ್ಲಿ ಜರುಗಿದ ಹಿಂದೂ ಸಮ್ಮೇಳನ ಸದಸ್ಯರ ಸಭೆಯಲ್ಲಿ ಜನವರಿ ಕೊನೆ ವಾರ ಹಿಂದೂ ಜಾಗೃತಿ ಸಮ್ಮೇಳನ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಆರ್.ಎಸ್.ಎಸ್. ದಕ್ಷಿಣ ಪ್ರಾಂತ ಬೌದ್ದಿಕ್ ಪಿ.ದುರ್ಗಣ್ಣ ಮಾತನಾಡಿ, ವೇದ ಉಪನಿಷತ್ತು, ಪುರಾಣಗಳಲ್ಲಿ ವೈಚಾರಿಕ ಕ್ರಾಂತಿ ಅಡಗಿದೆ. ಇದರಡಿ ಋಷಿಮುನಿಗಳು ಸರ್ವೆ ಜನ ಸುಖಿನೊ ಭವಂತು, ವಸುದೈವ ಕುಟುಂಬಕಂ ಎನ್ನುವ ತತ್ವಗಳನ್ನು ಪ್ರಚುರಪಡಿಸಿದರು. ಅಸಮಾನತೆ ಅಸ್ತ್ರವಾಗಿಸಿಕೊಂಡ ಬ್ರಿಟೀಷರು ದೇಶವನ್ನು ಆಕ್ರಮಿಸಿ 200 ವರ್ಷ ಆಳ್ವಿಕೆ ಮಾಡಿದರು. ಅಖಂಡ ಹಿಂದೂಗಳಲ್ಲಿ ಒಗ್ಗಟ್ಟಿನ ಕೊರತೆ ಕಾರಣ ಅನಿಷ್ಠ ಪದ್ದತಿಗಳಾದ ಮೌಢ್ಯಾಚರಣೆಗಳನ್ನು ತೊಲಗಿಸಲು ಆಗುತ್ತಿಲ್ಲ. ಸಮಾನತೆಯು ಸಾಧ್ಯವಾಗುತ್ತಿಲ್ಲ ಎಂದರು.
ಅಖಂಡ ಹಿಂದೂಗಳಲ್ಲಿ ಒಗ್ಗಟ್ಟು ಗಳಿಸುವ ಉದ್ದೇಶದಿಂದ ಹಿಂದೂ ಜಾಗೃತಿ ಸಮ್ಮೇಳನ ಜರುಗುತ್ತಿವೆ. ಇವುಗಳ ಮೂಲಕ ಎಲ್ಲರನ್ನೂ ಒಂದೆಡೆ ಸೇರಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು. ಸುದೀರ್ಘ ಚರ್ಚೆ ಬಳಿಕ ಹಿಂದೂ ಸಮ್ಮೇಳನ ಸಮಿತಿ ರಚಿಸಲಾಯಿತು. ಹಿಂದೂ ಸಮ್ಮೇಳನ ಸಮಿತಿಗೆ ವಕೀಲರಾದ ಬೆಣ್ಣಿಹಳ್ಳಿ ರಾಮನಗೌಡ (ಅಧ್ಯಕ್ಷ), ಕೆ.ಸಿ.ಗಂಗಾಧರ, ಎಚ್.ಎ.ಸುರೇಂದ್ರ ಬಾಬು (ಕಾರ್ಯದರ್ಶಿ), ಎಸ್.ಎನ್.ಸುಬ್ರಹ್ಮಣ್ಯ (ಖಜಾಂಚಿ) ಅವರು ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಕಿರಣ್ ಶಾನಬೋಗ, ರವಿನಾಯ್ಕ, ಓಂಕಾರಗೌಡ, ಪಶುಪತಿ, ಎಚ್.ಎಂ.ಅಶೋಕ, ಕೃಷ್ಣಮೂರ್ತಿ, ದೇವರಾಜ, ಸಪ್ನ ಮಲ್ಲಿಕಾರ್ಜುನ, ಕುಸುಮ ಜಗದೀಶ್ ಇದ್ದರು.
Leave a comment