ಹರಪನಹಳ್ಳಿ : ಪ್ರಕೃತಿ, ಯೋಗ ಚಿಕಿತ್ಸೆ ಪ್ರಚಾರ ಪಡಿಸುವ ಸಲುವಾಗಿ ಆಯುರ್ವೇದ ಪದ್ದತಿ ಕುರಿತು ಪಠ್ಯದಲ್ಲಿ ಅಳವಡಿಸುವ ಅಗತ್ಯವಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ತಿಳಿಸಿದರು.
ತಾಲ್ಲೂಕಿನ ಕುಮಾರನಹಳ್ಳಿಯ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಇಂಗ್ಲೀಷ್ ಮೆಡಿಸನ್ ಮನುಷ್ಯರ ಆರೋಗ್ಯವನ್ನು ಹಾಳು ಮಾಡುತ್ತದೆ. ಜಗತ್ತು ಆವರಿಸಿರುವ ಇಂಗ್ಲೀಷ್ ಮೆಡಿಸನ್ ದೊಡ್ಡ ಮಾಫಿಯಾ, ಇದರ ಬಗ್ಗೆ ಜನರು ಜಾಗೃತರಾಗಬೇಕು. ಜನನಿ ಯೋಗ ಕೇಂದ್ರದಲ್ಲಿ ಒಂದು ವಾರ ಚಿಕಿತ್ಸೆ ಪಡೆದು, ಸಾಕಷ್ಟು ಉಪಯೋಗವಾಗಿದೆ. ಮದ್ಯಕರ್ನಾಟಕದಲ್ಲಿ ಆರಂಭವಾಗಿರುವ 100 ಹಾಸಿಗೆಯ ಆಸ್ಪತ್ರೆಯಲ್ಲಿ ಪ್ರತಿಯೊಬ್ಬರು ಇಂತಹ ಕೇಂದ್ರದಲ್ಲಿ ಚಿಕಿತ್ಸೆ ಪಡೆದರೆ, ಸದೃಢ ಆರೋಗ್ಯ ನಮ್ಮದಾಗಿಸಿಕೊಳ್ಳಬಹುದು ಎಂದು ತಿಳಿಸಿದರು.
ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರಲ್ಲಿ ಸರಳ ಆಹಾರ ಪದ್ದತಿ, ಯೋಗಾಭ್ಯಾಸ ಹಾಗೂ ಆಧುನಿಕ ಉಪಕರಣ ಜೊತೆ ದೈಹಿಕ ವ್ಯಾಯಾಮ ಇರುತ್ತದೆ. ಇಂತಹ ಆರೋಗ್ಯ ಪದ್ದತಿ ನಮ್ಮ ದೇಶದಲ್ಲಿ ಹೆಚ್ಚು ಪ್ರಚಾರ ಮಾಡುವ ಅಗತ್ಯವಿದೆ ಎಂದು ಹೇಳಿದರು. ಶ್ರೀರಾಮಸೇನೆ ದಕ್ಷಿಣ ಪ್ರಾಂತ ಸಂಚಾಲಕ ನರೆಗಲ್ ಸುದರ್ಶನ್, ಆಸ್ಪತ್ರೆ ಮಾಧ್ಯಮ ವಿಭಾಗದ ಮುಖ್ಯಸ್ಥ ಉದಯಶಂಕರ ಭಟ್, ಪ್ರಾಂಶುಪಾಲ ಡಾ.ರಾಜೇಶ ಪಾದೆಕಲ್ ಉಪಸ್ಥಿತರಿದ್ದರು.
Leave a comment