ಹೊಸಪೇಟೆ (ವಿಜಯನಗರ) : ಹಂಪಿ ಉತ್ಸವದಲ್ಲಿ ಸ್ಥಳೀಯ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ಆಯೋಜಿಸಿದ್ದ ಸ್ಥಳೀಯ ಕಲಾವಿದರು ಮತ್ತು ಸಂಘ, ಸಂಸ್ಥೆಗಳೊಂದಿಗೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಹಿಂದೆ ಹಣ, ಮೂಲಭೂತ ಸೌಲಭ್ಯಗಳು ಕಡಿಮೆ, ಆದರೆ ಉತ್ಸವ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗುತ್ತಿತ್ತು. ಇಂದು ಎಲ್ಲವೂ ಇದ್ದರೂ ಕಟ್ಟುನಿಟ್ಟಾಗಿ ಆಯೋಜನೆ ಮಾಡಲಾಗುತ್ತಿಲ್ಲ. ಸಿನಿಮಾ ತಾರೆಯರಿಗೆ, ಖ್ಯಾತ ಕಲಾವಿದರಿಗೆ ಮಾತ್ರ ಮುಖ್ಯ ವೇದಿಕೆಗೆ ಅವಕಾಶ ನೀಡಲಾಗುತ್ತದೆ. ನಮ್ಮಂತಹ ಸ್ಥಳೀಯ ಕಲಾವಿದರಿಗೆ ಕಡೆಗಣಿಸಲಾಗುತ್ತದೆ. ಈ ರೀತಿ ಭೇದ-ಭಾವ ಧೋರಣೆ ಅನುಸರಿಸದೇ ಎಲ್ಲರನ್ನು ಸಮಾನತೆಯಿಂದ ಕಾಣುವುದರ ಜೊತೆಗೆ ಸಮಾನ ಅವಕಾಶ ಕಲ್ಪಿಸಬೇಕು ಎಂದು ಬೇಡಿಕೆ ಇಟ್ಟರು.
ಅಧ್ಯಕ್ಷತೆವಹಿಸಿದ್ದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಹಂಪಿ ಉತ್ಸವ ಫೆಬ್ರವರಿ 13 ರಿಂದ 15ರ ವರೆಗೆ ನಡೆಯುತ್ತಿದ್ದು ಸಂಗೀತ, ಸಾಂಸ್ಕೃತಿಕ, ಕಲೆ, ನಾಟಕ ಹೀಗೆ ವಿವಿಧ ರೀತಿಯ ಕಲಾವಿದರಿಗೆ ಕಾರ್ಯಕ್ರಮಗಳಲ್ಲಿ ಸಮಾನ ಅವಕಾಶ ನೀಡಲಾಗುವುದು ಎಂದರು.
ಉತ್ಸವ ಕಳೆದ ಬಾರಿಗಿಂತಲೂ ವಿಶೇಷ ಮತ್ತು ವಿನೂತನವಾಗಿ ಆಚರಿಸಲು ನಿರ್ಧರಿಸಲಾಗಿದೆ. ಅದರಂತೆ ಸಕಲ ಸಿದ್ದತೆ ಕೈಗೊಳ್ಳಲಾಗುತ್ತಿದೆ. ಆಗಾಗಿ ಎಲ್ಲಾ ಕಲಾವಿದರು, ಸಂಘ ಸಂಸ್ಥೆಗಳು ಸಾರ್ವಜನಿಕರು ಸಹಕಾರ ನೀಡಬೇಕು. ಹಂಪಿ ಉತ್ಸವ ಎಂದರೆ ಕಲಾವಿದರ ದಂಡೆ ಸೇರುತ್ತದೆ. ಆಗಾಗಿ ಇಲ್ಲಿನ ಸ್ಥಳೀಯ ಕಲಾವಿದರನ್ನ ಸಮಗ್ರವಾಗಿ ಪರಿಶೀಲಿಸಿ ಅರ್ಹ ಮತ್ತು ನೈಜ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ಇದಕ್ಕೆ ತಮ್ಮೆಲ್ಲರ ಸಹಕಾರವೂ ಅತ್ಯಗತ್ಯ ಎಂದರು.

ಸರ್ಕಾರಿ ಕಟ್ಟಡಗಳಿಗೆ ಪುಷ್ಪಾಲಂಕಾರ
ವಿಶ್ವ ವಿಖ್ಯಾತ ವಿಶ್ವಪಾರಂಪರಿಕ ತಾಣವಾದ ಹಂಪಿ ಉತ್ಸವದ ಅಂಗವಾಗಿ, ಜೋಳದ ಗುಡ್ಡ, ವಿರುಪಾಕ್ಷ ದೇವಾಲಯ ಸೇರಿದಂತೆ ನಗರದಲ್ಲಿನ ಎಲ್ಲಾ ಸರ್ಕಾರಿ ಕಟ್ಟಡ, ಪ್ರಮುಖ ವೃತ್ತಗಳಿಗೆ ದೀಪಾಲಂಕಾರ ಮಾಡಬೇಕು. ವೈದ್ಯಕೀಯ ಹಾಗೂ ನೈರ್ಮಲ್ಯತೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಸಂಘದ ಸದಸ್ಯರೊಬ್ಬರು ಆಗ್ರಹಿಸಿದರು.
ವಿಶೇಷ ಚೇತನರಿಗೂ ಅವಕಾಶ ನೀಡಿ
ಉತ್ಸವದಲ್ಲಿ ಅಂಧ, ವಿಕಲಾಂಗ, ವಿಶೇಷ ಚೇತನರಿಗೆ ಪಾರ್ಕಿಂಗ್ ವ್ಯವಸ್ಥೆಯೇ ಕಗ್ಗಂಟಾಗಿ ಪರಿಣಮಿಸಿದೆ. ಮುಖ್ಯ ವೇದಿಕೆಗೂ ಪಾರ್ಕಿಂಗ್ ಸ್ಥಳಕ್ಕೂ ಅಜಗಜಾಂತರ ದೂರವಿದ್ದು, ಸಾರಿಗೆ ಸೌಲಭ್ಯ, ಪಾಸ್ ವ್ಯವಸ್ಥೆಯಿಲ್ಲದೇ ಮುಖ್ಯ ವೇದಿಕೆ ಬಳಿ ತೆರಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ವಿಜಯನಗರ ಸಾಮ್ರಾಜ್ಯ ಗತವೈಭವ ಸಾರುವ ಹಂಪಿ ಉತ್ಸವ ನೋಡಲಾಗುತ್ತಿಲ್ಲ. ಕೇಳಲಾಗುತ್ತಿಲ್ಲ. ಇದನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ಅಂತಹವರಿಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಲ್ಲಲ್ಲಿ ಎಲ್ಇಡಿ ಪರದೆ ಅಳವಡಿಸಬೇಕು. ಹಾಗೆಯೇ ವಿಶೇಷ ಚೇತನ, ಮತ್ತು ಅಂಧ ಕಲಾವಿದರಿಗೂ ಹಂಪಿ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಬೇಕು.

ಕಲಾವಿದರಿಗೆ ಮುಂಗಡ ಹಣ ಪಾವತಿಸಲು ಒತ್ತಾಯ
ಸಭೆಯಲ್ಲಿ ಭಾಗವಹಿಸಿದ ಕಲಾವಿದರೊಬ್ಬರು ಮಾತನಾಡಿ, ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಯ್ಕೆಯಾದ ಕಲಾವಿದರಿಗೆ ಮುಂಗಡವಾಗಿ ಇಂತಿಷ್ಟು ಹಣ ಪಾವತಿಸಿದಲ್ಲಿ ಬಡ ಕಲಾವಿದರಿಗೆ ಸಹಾಯವಾಗಲಿದೆ ಎಂದು ಕೇಳಿಕೊಂಡರು, ಇದಕ್ಕೆ ಪ್ರತಿಕ್ರಿಯಸಿದ ಜಿಲ್ಲಾಧಿಕಾರಿ ಉತ್ಸವಕ್ಕಾಗಿ ಸರ್ಕಾರಕ್ಕೆ ರೂ. 22 ಕೋಟಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಅನುದಾನ ಕೊರೆತೆಯಿದೆ. ಆಗಾಗಿ ಕಲಾವಿದರಿಗೆ ಮುಂಗಡವಾಗಿ ಹಣ ಸಂದಾಯ ಮಾಡಲಾಗುವುದಿಲ್ಲ. ಸರ್ಕಾರದಿಂದ ಹಣ ಬಿಡುಗಡೆಯಾದ ನಂತರ ಸಂಪೂರ್ಣವಾಗಿ ಏಕ ಕಂತಿನಲ್ಲಿ ಸಂಭಾವನೆ ಪಾವತಿಸಲಾಗುವುದು ಎಂದು ತಿಳಿಸಿದರು.
ಮತ್ತೊಬ್ಬ ಕಲಾವಿದರು ಮಾತನಾಡಿ, ಹಂಪಿ ಉತ್ಸವ ಆರಂಭವಾದಗಿನಿಂದಲೂ ಎಲ್ಲಾ ರೀತಿಯ ಕಲೆ ಪ್ರದರ್ಶನಕ್ಕೆ ಅನುಮತಿ ನೀಡಲಾಗಿದೆ. ಆದರೆ ಇತ್ತೀಚೆಗೆ ನಮ್ಮ ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ನಶಿಸಿ ಹೋಗುತ್ತಿರುವ ತೊಗಲು ಗೊಂಬೆಯಾಟ, ಸೂತ್ರ ಗೊಂಬೆಯಾಟ ಹೀಗೆ ದೇಶಿಯ ಸಂಸ್ಕೃತಿ ಒಳಗೊಂಡ ಕಲೆಗಳಿಗೂ ಸಹ ಪ್ರತ್ಯೇಕ ವೇದಿಕೆ ಕಲ್ಪಿಸಬೇಕು. ಹಂಪಿ ಉತ್ಸವಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಸಾವಯವ ಕೃಷಿ, ದವಸ ಧಾನ್ಯ ಪ್ರದರ್ಶನ ಮಾಡಬೇಕು. ಅದಷ್ಟೇ ಅಲ್ಲದೇ ಈ ಕುರಿತು ವಿಶೇಷ ಉಪನ್ಯಾಸ ಆಯೋಜಿಸಬೇಕು.
ಹೀಗೆ ವಿವಿಧ ರೀತಿಯ ಬೇಡಿಕೆ, ಮನವಿಗಳನ್ನು ನೆರೆದಿದ್ದ ಕಲಾವಿದರು ಒಂದೊಂದು ರೀತಿಯಲ್ಲಿ ಅಧಿಕಾರಿಗಳ ಮುಂದೆ ಭಿನ್ನವಿಸಿಕೊಂಡರು. ಈ ಎಲ್ಲಾ ಅಂಶಗಳನ್ನು ಆಲಿಸಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಸರ್ಕಾರದ ನಿಯಮಾನುಸಾರ, ಪರಿಮಿತಿಯೊಳಗೆ ಉತ್ಸವ ನಡೆಸಲಾಗುವುದು. ಆದರೂ ಸಾಧ್ಯವಾದಷ್ಟು ತಮ್ಮ ಸಲಹೆ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಮತ್ತು ಸಕಲ ರೀತಿಯಲ್ಲೂ ಉತ್ತಮವಾಗಿ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಜಿ.ಪಂ. ಸಿಇಓ ನೋಂಗ್ಜಾಯ್ ಮಹಮದ್ ಅಲಿ ಅಕ್ರಂ ಷಾ, ಉಪವಿಭಾಗಾಧಿಕಾರಿ ವಿವೇಕಾನಂದ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
Leave a comment