ವಿಜಯನಗರ ಹಂಪಿ :ಜನರ ಭಾವನೆಗಳೊಂದಿಗೆ ಬೆರೆತಿರುವ ಹಂಪಿ ಉತ್ಸವವು ಉತ್ಸವವಾಗಿ ಉಳಿಯದೇ ಜನೋತ್ಸವವಾಗಿ ಮಾರ್ಪಟ್ಟಿದೆ ಎಂದು ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಹೇಳಿದರು.
ಭಾನುವಾರ ಎಂ.ಪಿ ಪ್ರಕಾಶ್ ವೇದಿಕೆಯಲ್ಲಿ ಹಂಪಿ ಉತ್ಸವ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರು ದಸರಾದಂತೆ ಹಂಪಿಯಲ್ಲೂ ವಿಜಯನಗರ ಸಾಮ್ರಾಜ್ಯದ ವೈಭವ ಮರುಕಳಿಸಬೇಕು ಎಂಬುದು ಎಂ.ಪಿ. ಪ್ರಕಾಶ್ ಅವರ ಆಸೆಯಾಗಿತ್ತು. ಅಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಅವರು ಹಂಪಿ ಉತ್ಸವಕ್ಕೆ ಆಚರಣೆಗೆ ಹೊಸ ರೂಪುರೇಷೆ ನೀಡಿದರು ಎಂದು ಸ್ಮರಿಸಿದರು.
ಕಳೆದ 39 ವರ್ಷಗಳಿಂದ ಹಂಪಿ ಉತ್ಸವ ನಡೆದುಕೊಂಡು ಬರುತ್ತಿದ್ದು, ತಾಂತ್ರಿಕ ಕಾರಣಗಳಿಂದ ಕೆಲ ವರ್ಷಗಳು ಹಂಪಿ ಉತ್ಸವ ಆಚರಿಸಲು ಆಗಲಿಲ್ಲ. ಪ್ರತಿ ವರ್ಷವೂ ಸಂಪ್ರದಾಯದAತೆ ಹಂಪಿ ಉತ್ಸವ ಯಶಸ್ವಿಯಾಗಿ ಸಾಗಿ ಬರುತ್ತಿದೆ. ದೇಶ ವಿದೇಶಗಳ ಕಲಾವಿದರ ಜೊತೆಗೆ ಸ್ಥಳೀಯ ಕಲಾವಿದರಿಗೂ ಉತ್ಸವದಲ್ಲಿ ವೇದಿಕೆ ಕಲ್ಪಿಸಲಾಗುತ್ತಿದೆ. ಇಂದು ಹಂಪಿ ಸಾಂಸ್ಕೃತಿಕ ಕೇಂದ್ರವಾಗಿದೆ. ಹಂಪಿ ಉತ್ಸವಕ್ಕೆ ಆಗಮಿಸುವ ಜನರಿಗೆ ನಮ್ಮ ತಂದೆ ಎಂ.ಪಿ.ಪ್ರಕಾಶ್ ಅನ್ನದಾನ ವ್ಯವಸ್ಥೆ ಸಹ ಮಾಡಿದ್ದರು. ಸದ್ಯ ಶಾಸಕ ಗವಿಯಪ್ಪ ಅವರು ಸಹ ಅನ್ನ ದಾಸೋಹ ಮುಂದುವರಿಸಿರುವುದು ಶ್ಲಾಘನೀಯ ಎಂದರು.
ಹಂಪಿ ಉತ್ಸವದಿಂದಾಗಿ ರಾಜ್ಯಾದ್ಯಂತ ನಮ್ಮ ತಂದೆಯನ್ನು ‘ಹಂಪಿ ಪ್ರಕಾಶ್’ ಎಂದು ಕರೆಯಲಾಗುತ್ತಿತ್ತು. ಹಂಪಿಯಲ್ಲಿರುವ ಪ್ರತಿಯೊಂದು ಕಲ್ಲು ಮತ್ತು ಬಂಡೆಗಳು ಇತಿಹಾಸ ಸಾರುತ್ತವೆ. ಹಂಪಿ ಉತ್ಸವದಲ್ಲಿನ ಜನರ ಉತ್ಸಾಹ ಇಂದು ಈ ಕಲ್ಲು ಬಂಡೆಗಳಿAದ ಪ್ರತಿಧ್ವನಿಸುತ್ತಿದೆ. ನಮ್ಮ ತಂದೆಯವರ ಕನಸು ಇಂದು ಬೃಹದಾಕಾರವಾಗಿ ಬೆಳದಿದೆ ಎಂದು ಲತಾ ಮಲ್ಲಿಕಾರ್ಜುನ್ ಭಾವುಕರಾಗಿ ನುಡಿದರು.
ಹೊಸಪೇಟೆ ಶಾಸಕ ಹೆಚ್.ಆರ್. ಗವಿಯಪ್ಪ ಮಾತನಾಡಿ, ಕಳೆದ ಒಂದುವರೆ ತಿಂಗಳಿನಿAದ ಹಂಪಿ ಉತ್ಸವದ ಯಶಸ್ಸಿಗಾಗಿ ಜಿಲ್ಲಾಡಳಿತ ಹಗಲಿರುಳು ಶ್ರಮಿಸಿದೆ. ಅಧಿಕಾರಿಗಳ ಶ್ರಮದಿಂದಾಗಿ ಉತ್ಸವವು ವ್ಯವಸ್ಥಿತವಾಗಿ ನಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಹಂಪಿ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಪ್ರವಾಸಿ ತಾಣಗಳಾದ ಲೋಟಸ್ ಮಹಲ್ ಸೇರಿದಂತೆ ವಿವಿಧೆಡೆ ತಲಾ 1 ಕೋಟಿ ರೂ. ವೆಚ್ಚದಲ್ಲಿ ಒಟ್ಟು 20 ‘ಟ್ರಾವೆಲರ್ಸ್ ನೋಟ್ಸ್’ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇಲ್ಲಿ ವಾಶ್ರೂಮ್ ಮತ್ತು ಕೆಫೆಟೇರಿಯಾ ಸೌಲಭ್ಯಗಳು ಲಭ್ಯವಿರಲಿವೆ ಎಂದರು.
ಕಮಲಾಪುರದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಫುಡ್ ಕೋರ್ಟ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು, ಪ್ರಸ್ತುತ ಟೆಂಡರ್ ಹಂತದಲ್ಲಿದೆ. ಕಮಲಾಪುರ ಕೆರೆಯ ಸುತ್ತ ಸುಮಾರು 2.5 ರಿಂದ 3 ಕಿ.ಮೀ ಉದ್ದದ ರಿಂಗ್ ರೋಡ್ ನಿರ್ಮಿಸಿ, ಆ ಪ್ರದೇಶವನ್ನು ಪ್ರವಾಸಿ ಆಕರ್ಷಣೀಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ ಇದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹಂಪಿ ಉತ್ಸವ-2026 ಯಶಸ್ವಿಗೆ ಶ್ರಮಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಅಧ್ಯಕ್ಷ ಕೆ.ಶಿವಮೂರ್ತಿ, ಹೊಸಪೇಟೆ ನಗರಸಭೆ ಅಧ್ಯಕ್ಷ ರೂಪೇಶ್ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಓ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ ಬಾಲಕೃಷ್ಣ, ಉಪವಿಭಾಗಧಿಕಾರಿ ವಿವೇಕಾನಂದ, ಹೊಸಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಇಮಾಮ್ ನಿಯಾಜ್ ಉಪಸ್ಥಿತರಿದ್ದರು.
Leave a comment