ಹರಪನಹಳ್ಳಿ: ಯುಗಾದಿ ಹಬ್ಬದ ಪ್ರಯುಕ್ತ ನಗರದ ಹೃದಯ ಭಾಗದಲ್ಲಿರುವ ಶ್ರೀ ಗೋಕರ್ಣೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪಿ.ಎಲ್.ಡಿ. ಬ್ಯಾಂಕ್ ಉಪಾಧ್ಯಕ್ಷ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಗೊಂಗಡಿ ನಾಗರಾಜ್ ಕುಟುಂಬದ ವತಿಯಿಂದ ಬುಧವಾರ ಅನ್ನಸಂತರ್ಪಣೆ ಜರುಗಿತು.
ಬೆಳಿಗ್ಗೆ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ನೆರವೇರಿಸಿದ ಬಳಿಕ ಸಾವಿರಾರು ಜನರಿಗೆ ಅನ್ನದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗೊಂಗಡಿ ನಾಗರಾಜ್ ಮಾತನಾಡಿದರು.
‘ಅನ್ನಸಂತರ್ಪಣೆ ಎಂದರೆ ಹಸಿದವರಿಗೆ ಉಚಿತವಾಗಿ ಊಟ ನೀಡಿ ತೃಪ್ತಿಪಡಿಸುವ ಪವಿತ್ರ ಕಾರ್ಯ. ಇದು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿದ್ದು, ಆತ್ಮತೃಪ್ತಿ ಮತ್ತು ಪುಣ್ಯವನ್ನು ತರುತ್ತದೆ. ಈ ಹಿಂದೆಯೂ ಹಳೇ ಬಸ್ ನಿಲ್ದಾಣದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅನೇಕ ಬಾರಿ ಅನ್ನಸಂತರ್ಪಣೆ ಮಾಡಿಕೊಂಡು ಬರಲಾಗಿದೆ’ ಎಂದರು.
ಕಾಂಗ್ರೆಸ್ ಮುಖಂಡ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ‘ಅನ್ನದಾನವು ಕೇವಲ ಹೊಟ್ಟೆ ತುಂಬಿಸುವುದಲ್ಲ, ಬದಲಾಗಿ ಮಾನವೀಯತೆ, ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಮಾರ್ಗವಾಗಿದೆ. ಹಸಿದವರಿಗೆ, ಅನಾಥರಿಗೆ ಹಾಗೂ ಬಡವರಿಗೆ ಅನ್ನದಾನ ಮಾಡುವ ಮೂಲಕ ಸಾಮಾಜಿಕ ಸೇವೆ ಮಾಡುತ್ತಿರುವ ಗೊಂಗಡಿ ರಾಜಣ್ಣ ಅವರಿಗೆ ಇಂತಹ ಮತ್ತಷ್ಟು ಕಾರ್ಯಗಳನ್ನು ಮಾಡಲು ದೇವರು ಹೆಚ್ಚಿನ ಶಕ್ತಿ ಕರುಣಿಸಲಿ’ ಎಂದು ಹಾರೈಸಿದರು.
ಸಹನಾ ನಾಗರಾಜ್ ಮಾತನಾಡಿ, ‘ಯುಗಾದಿಯಂದು ಬಡವರಿಗೆ ಅಥವಾ ದೇವಾಲಯದಲ್ಲಿ ಅನ್ನದಾನ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ. ಈ ವಿಶೇಷ ಪ್ರಸಾದ ವಿತರಣೆಯು ಸಮಾಜದಲ್ಲಿ ಸಂತೋಷವನ್ನು ಹಂಚುತ್ತದೆ’ ಎಂದು ತಿಳಿಸಿದರು.
ಮಧ್ಯಾಹ್ನ 3.30ರವರೆಗೆ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಕ್ಕೂ ಹೆಚ್ಚು ಭಕ್ತರು ದೇವರ ಪ್ರಸಾದ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಸಂಯೋಜಕ ಜಯಪ್ರಕಾಶ್ ಸಾರಥಿ, ಸಹನಾ, ಐಶ್ವರ್ಯ ಗೊಂಗಡಿ, ರಕ್ಷಿತ್, ಗೀತಾ ಗೊಂಗಡಿ, ಹನುಮಂತ್ ಚಂದ್, ಮುದುಗಲ್ ಗುರುನಾಥ್, ಎಂ. ರಾಜಶೇಖರ್, ಎಲ್. ಪ್ರಕಾಶ್ ನಾಯ್ಕ್, ಪ್ರತೀಕ್, ವಕೀಲ ವಸಂತ, ಪ್ರಕಾಶ್, ನಗರಸಭೆ ವ್ಯವಸ್ಥಾಪಕ ಅಶೋಕ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Leave a comment