ಹರಪನಹಳ್ಳಿ : ಕೃಷಿ ಇಲಾಖೆ ಯೋಜನೆಯ ಉಪಕರಣಗಳನ್ನು ಅರ್ಹ ರೈತ ಫಲಾನುಭವಿಗಳಿಗೆ ಕಲ್ಪಿಸಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಕಾರ್ಯಕರ್ತರು ಶನಿವಾರ ನಗರ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸಹಾಯಕ ಕೃಷಿ ನಿರ್ದೇಶಕ ವಿ.ಸಿ.ಉಮೇಶ್ ಅವರಿಗೆ ಮನವಿ ಸಲ್ಲಿಸಿದರು. ಅಖಿತ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್, ಸಿಪಿಐ ತಾಲ್ಲೂಕು ಕಾರ್ಯದರ್ಶಿ ರಮೇಶ್ ನಾಯ್ಕ, ತಾಲ್ಲೂಕು ಉಪಾಧ್ಯಕ್ಷ ಹನುಮಂತ ನಾಯ್ಕ, ಹರಿಯಮ್ಮನಹಳ್ಳಿ ಬಸವರಾಜ್, ಹಗರಿ ಗುಡಿಹಳ್ಳಿ ಶಿವರಾಮ್, ಕೆರೆಗುಡಿಹಳ್ಳಿ ದುರ್ಗಪ್ಪ, ಬಳಿಗನೂರು ಮಲ್ಲೇಶ್, ಮತ್ತಿಹಳ್ಳಿ ಭರಮಪ್ಪ, ಮಲ್ಲೇಶಪ್ಪ, ಎಲ್.ತಿಂದಪ್ಪ ಇದ್ದರು.
ರಾಜ್ಯ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಸೌಲಭ್ಯ ನೀಡಲಾಗುತ್ತಿದೆ. ಕೃಷಿ ಉಪಕರಣಕ್ಕಾಗಿ ಅರ್ಜಿ ಸಲ್ಲಿಸಿದ ಅರ್ಹ ರೈತರನ್ನು ಆಯ್ಕೆ ಮಾಡಲಾಗುತ್ತಿಲ್ಲ. ಟ್ರಾಕ್ಟರ್ ಚಾಲಿತ ಉಪಕರಣ, ಒಕ್ಕಣೆ ಯಂತ್ರ, ಸಸ್ಯ ಸಂರಕ್ಷಣಾ ಉಪಕರಣಗಳನ್ನು ಒಮ್ಮೆ ಪಡೆಯುವ ರೈತ, ಪುನಃ 7 ವರ್ಷದ ನಂತರ ಪಡೆಯುವ ನಿಬಂಧನೆ ಇರಿಸಲಾಗಿದೆ. ಪರಿಶಿಷ್ಟ ಪಂಗಡದ ರೈತರಿಗೆ 5 ವರ್ಷ, ಪರಿಶಿಷ್ಟ ಜಾತಿಯವರಿಗೆ 3 ವರ್ಷ ಅವಕಾಶ ನೀಡಲಾಗಿದೆ. ತಾಡಪಾಲುಗಳನ್ನು ಎಲ್ಲ ವರ್ಗದ ರೈತರಿಗೆ 3 ವರ್ಷ ನಿರ್ಬಂಧ ವಿಧಿಸಲಾಗಿದೆ. ಇದರಿಂದ ರೈತರಿಗೆ ತೊಂದರೆ ಆಗುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.