ಹರಪನಹಳ್ಳಿ : ತಾಲ್ಲೂಕಿನ ಅರಸೀಕೆರೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಪವಿತ್ರ ‘ಮೊಹರಂ’ ಹಬ್ಬವನ್ನು ಭಕ್ತಿ, ಸಡಗರ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಆಚರಿಸಲಾಯಿತು.ಯಾವುದೇ ಜಾತಿ, ಮತ ಹಾಗೂ ಧರ್ಮದ ಭೇದಭಾವವಿಲ್ಲದೆ ಸರ್ವ ಧರ್ಮದವರೂ ಒಟ್ಟಾಗಿ ಸೇರಿ ಹಬ್ಬ ಆಚರಿಸಿ ಸೌಹಾರ್ದತೆಯ ಸಂದೇಶ ಸಾರಿದರು.
ಕನಕನಬಸಾಪುರ ಗ್ರಾಮದಿಂದ ಪೀರಲು ದೇವರನ್ನು ಅರಸೀಕೆರೆಗೆ ಭಕ್ತಿಯಿಂದ ಕರೆತರಲಾಯಿತು. ಇಲ್ಲಿನ ಪೀರಲು ದೇವರು ಹಾಗೂ ಕನಕನಬಸಾಪುರದ ಪೀರಲು ದೇವರನ್ನು ಒಟ್ಟಿಗೆ ಕೂರಿಸಿ, ದೇವರ ಕುರಿತು ಸಾಂಪ್ರದಾಯಿಕ ಪದಗಳನ್ನು ಹಾಡಿ ಅಲ್ಲಾಹುವಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಭಕ್ತಾದಿಗಳು ಪೀರಲು ದೇವರಿಗೆ ಸಕ್ಕರೆ, ಹಣ್ಣು, ಕಾಯಿ, ಹೂವು, ಉತ್ತತ್ತಿ ಹಾಗೂ ಚವಂಗಿಯನ್ನು ಅರ್ಪಿಸಿ ಧನ್ಯತೆ ಮೆರೆದರು.
ಊರಿನ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಮೇಳದೊಂದಿಗೆ ಪೀರಲು ದೇವರ ಭವ್ಯ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಕಲಾ ಪ್ರದರ್ಶನ ನೀಡಿದ ಹುಲಿವೇಷಧಾರಿಗಳ ಕುಣಿತವು ನೆರೆದಿದ್ದ ಸಾರ್ವಜನಿಕರ ಗಮನ ಸೆಳೆಯಿತು. ಜಾಮಿಯಾ ಮಸೀದಿ ಅಧ್ಯಕ್ಷ ಅಬೀಬ್ ಸಾಹೇಬ್, ಕಾರ್ಯದರ್ಶಿ ಖಾಜಿ ಮಹಮ್ಮದ್ ಸಾಹೇಬ್, ಪ್ರಮುಖರಾದ ವೈ.ಟಿ. ಕೊಟ್ರೇಶ್, ಹಸೇನ್ ಸಾಹೇಬ್, ಲಕ್ಷ್ಮೀದೇವಿ ಅಣ್ಣಪ್ಪ, ಫಯಾಜ್, ಭರ್ಕತ್, ಹುಸೇನ್ ಸಾಹೇಬ್, ಜಾಫರ್ ಸೇರಿದಂತೆ ಇದ್ದರು.
Leave a comment