ಹರಪನಹಳ್ಳಿ: ತಾಲ್ಲೂಕಿನ ಗುಂಡಗತ್ತಿ ಗ್ರಾಮದ ಶ್ರೀ ವೆಂಕಟೇಶ್ವರ ಪ್ರೌಢಶಾಲೆಯ ಆಡಳಿತ ಮಂಡಳಿ ಅವರು ಶಾಲೆಯ ದೈಹಿಕ ಶಿಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರು ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಶಾಲೆಯ ದೈಹಿಕ ಶಿಕ್ಷಕ ಕುಮಾರ್ ಅವರು ಕೆಲವು ದಿನಗಳ ಕಾಲ ಶಾಲೆಗೆ ಗೈರು ಹಾಜರಾಗಿದ್ದರು. ಈ ವಿಚಾರವಾಗಿ ಶಾಲಾ ಕಾರ್ಯದರ್ಶಿ ಕಾಶಿನಾಥ್ ಅವರು ಶಿಕ್ಷಕ ಕುಮಾರ್ ಅವರನ್ನು ಅತ್ಯಂತ ಕೀಳುಮಟ್ಟದ ಪದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ಕೆಲಸದಿಂದ ಅಮಾನತು ಮಾಡುವುದಾಗಿ ಬೆದರಿಕೆ ಹಾಕಿದ್ದು, ಇದು ಶಿಕ್ಷಕ ವೃತ್ತಿಯ ಘನತೆಗೆ ತೀವ್ರ ಧಕ್ಕೆ ತಂದಿದೆ ಎಂದು ಡಿಎಸ್‌ಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಣಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಬೇಕು. ಹಾಗೂ, ಶಿಕ್ಷಕರಿಗೆ ಬೆದರಿಕೆ ಹಾಕಿರುವ ಆಡಳಿತ ಮಂಡಳಿ ಕಾರ್ಯದರ್ಶಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಡಿಎಸ್‌ಎಸ್ ತಾಲ್ಲೂಕು ಸಂಚಾಲಕ ವೈ. ಚಂದ್ರು ಗುಂಡಗತ್ತಿ , ಡಿಎಸ್‍ಎಸ್ ( ಭೀಮವಾದ) ತಾಲ್ಲೂಕು ಅಧ್ಯಕ್ಷ ಕೆ.ಸುಭಾಷ್, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಮ್ಮ, ಯಡಿಹಳ್ಳಿ ಅಂಜಿನಿ, ಶಶಿಕುಮಾರ, ಮಾರುತಿ, ಸುರೇಶ್, ದೇವರಾಜ್, ಸುನೀಲ ಮತ್ತಿಹಳ್ಳಿ, ಮಂಜುನಾಥ, ಪಕ್ಕೀರಪ್ಪ ಹುಲಿಕಟ್ಟೆ, ಬಸವರಾಜ್, ಉಚ್ಚೆಂಗೆಪ್ಪ, ಮಾರುತಿ, ಪ್ರಕಾಶ್ ಇತರರಿದ್ದರು.
Leave a comment