Home ಕೃಷಿ ಕಾರ್ಮಿಕರ ಕೊರತೆಗೆ ಮುಕ್ತಿ: 
Homeಕೃಷಿ

ಕೃಷಿ ಕಾರ್ಮಿಕರ ಕೊರತೆಗೆ ಮುಕ್ತಿ: 

Share
Share

ಹರಪನಹಳ್ಳಿ: ಗ್ರಾಮೀಣ ಭಾಗದ ರೈತರು ವರ್ಷಗಳಿಂದ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಯಾದ ‘ಸಕಾಲಕ್ಕೆ ಕೃಷಿ ಕಾರ್ಮಿಕರು ಸಿಗದಿರುವ’ ಬವಣೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ ಎಂದು ಹರಪನಹಳ್ಳಿ ತಾ ಪಂ ನ ಸಹಾಯಕ ನಿರ್ದೇಶಕ(ಗ್ರಾ.ಉ.) ಸೋಮಶೇಖರ್ ಯು.ಎಚ್. ಅವರು ತಿಳಿಸಿದರು.ತಾಲೂಕಿನ ಕುಂಚೂರು ಗ್ರಾಮ ಪಂಚಾಯಿತಿಯಲ್ಲಿ ವಿಕಸಿತ ಭಾರತ-ಉದ್ಯೋಗ ಖಾತ್ರಿ ಹಾಗೂ ಆಜೀವಿಕ ಅಭಿಯಾನ(ಗ್ರಾಮೀಣ) ಯೋಜನೆಯಡಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ 2026-27ನೇ ಸಾಲಿನ “ವಿಬಿ-ಜಿ ರಾಮ್ ಜಿ” (Viksit Bharat – Guarantee for Rozgar and AJEEVIKA MISSION) ಯೋಜನೆಯನ್ನು ಜುಲೈ 1ರಿಂದ ಜಾರಿಗೊಳಿಸುವ ಮುನ್ನ ಸ್ಥಳೀಯ ಮಟ್ಟದಲ್ಲಿ ಕೃಷಿ ಕ್ಯಾಲೆಂಡರ್ ಸಿದ್ಧಪಡಿಸಲು ಸಭೆಯನ್ನು ಆಯೋಜಿಸಲಾಗಿದ್ದು, ರೈತರು, ಕೃಷಿ ಕಾರ್ಮಿಕರು, ಕಾಯಕಬಂಧುಗಳು, ಸ್ವಸಹಾಯ ಸಂಘದ ಸದಸ್ಯರು ಹಾಗೂ ಅಧಿಕಾರಿಗಳ ಸುದೀರ್ಘ ಚರ್ಚೆಯ ಬಳಿಕ, ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗದಂತೆ ಒಟ್ಟು 60 ದಿನಗಳನ್ನು ಸ್ಥಳೀಯ ಕೃಷಿ ಚಟುವಟಿಕೆಯ ಉತ್ತುಂಗದ ಅವಧಿ” (Peak Agricultural Season) ಎಂದು ಸರ್ವಾನುಮತದಿಂದ ಘೋಷಿಸಲಾಗಿದೆ.

ಈ 60 ದಿನಗಳ ಕೃಷಿ ಉತ್ತುಂಗ ಅವಧಿ ನಿಗದಿ ಗ್ರಾಮದ ಪ್ರಮುಖ ಬೆಳೆಗಳಾದ ಭತ್ತ, ಮೆಕ್ಕೆಜೋಳ, ಶೇಂಗಾ, ರಾಗಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಮತ್ತು ಕೊಯ್ಲಿನ ಸಮಯದಲ್ಲಿ ಕಾರ್ಮಿಕರ ಕೊರತೆಯಿಂದ ರೈತರು ತೀವ್ರ ನಷ್ಟ ಅನುಭವಿಸುತ್ತಿರುವುದನ್ನು ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಯಿತು. ಕಳೆದ 2-3  ವರ್ಷಗಳ ಕೃಷಿ ಅಂಕಿ-ಅಂಶಗಳು ಹಾಗೂ ಮಳೆಯ ಪ್ರಮಾಣವನ್ನು ವಿಶ್ಲೇಷಿಸಿ, ಸ್ಥಳೀಯ ರೈತರು ಮತ್ತು ಕಾಯಕ ಬಂಧುಗಳ ಒಪ್ಪಿಗೆಯ ಮೇರೆಗೆ ನಿರ್ದಿಷ್ಟವಾಗಿ 60 ದಿನಗಳನ್ನು ಕಾಯ್ದಿರಿಸಲಾಗಿದೆ.

ಸಭೆಯ ನಿರ್ಣಯದ ಪ್ರಕಾರ ಮುಂಗಾರು ಹಂಗಾಮಿನ ಬಿತ್ತನೆ ಹಾಗೂ ಭತ್ತದ ನಾಟಿ ಕಾರ್ಯವು ಭರದಿಂದ ಸಾಗುವ ಆಗಸ್ಟ್ 15 ರಿಂದ ಸೆಪ್ಟೆಂಬರ್ 14ರವರೆಗಿನ (30 ದಿನಗಳು) ಅವಧಿಯನ್ನು ಕೃಷಿ ಉತ್ತುಂಗದ ಮೊದಲ ಹಂತವಾಗಿ ಗುರುತಿಸಲಾಗಿದೆ. ಇನ್ನು ಬೆಳೆ ಕೊಯ್ಲು (ಕಟಾವು)ಗೆ ಬರುವ ಸಮಯದಲ್ಲಿ ಅತಿ ಹೆಚ್ಚು ಕಾರ್ಮಿಕರ ಅಗತ್ಯವಿರುವುದರಿಂದ ನವೆಂಬರ್ 15 ರಿಂದ ಡಿಸೆಂಬರ್ 14ರವರೆಗಿನ (30 ದಿನಗಳು)    ಅವಧಿಯನ್ನು ಕೃಷಿ ಉತ್ತುಂಗದ ಎರಡನೇ ಹಂತವಾಗಿ ನಿಗದಿಪಡಿಸಲಾಗಿದೆ ಎಂದು ಸಭೆಯಲ್ಲಿ‌ ಚರ್ಚಿಸಿ ಅಂತಿಮ ತೀರ್ಮಾನದ ನಡಾವಳಿಯನ್ನು ಓದಿ ತಿಳಿಸಿದರು.

ಕಾಮಗಾರಿಗಳಿಗೆ ಸಂಪೂರ್ಣ ತಡೆ:
ಸಭೆಯಲ್ಲಿನ ನಿರ್ಣಯದ ಅತ್ಯಂತ ಮಹತ್ವದ ಅಂಶವೆಂದರೆ, ಗ್ರಾಮಸಭೆಯಲ್ಲಿ ಅನುಮೋದನೆಗೊಂಡ ಈ ಒಟ್ಟು 60 ದಿನಗಳ ಅವಧಿಯಲ್ಲಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಯಾವುದೇ ಉದ್ಯೋಗ ಖಾತರಿ ಕೆಲಸಗಳನ್ನು ಪ್ರಗತಿಯಲ್ಲಿಡುವಂತಿಲ್ಲ. ಇದರಿಂದಾಗಿ, ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುವ ಎಲ್ಲಾ ಕೃಷಿ ಕಾರ್ಮಿಕರು ಅನಿವಾರ್ಯವಾಗಿ ಹಾಗೂ ಸುಲಭವಾಗಿ ಸ್ಥಳೀಯ ರೈತರ ಜಮೀನುಗಳಲ್ಲಿ ಬಿತ್ತನೆ ಮತ್ತು ಕಟಾವು ಕಾರ್ಯಗಳಿಗೆ ಲಭ್ಯವಾಗಲಿದ್ದಾರೆ. ಇದು ಕಾರ್ಮಿಕರಿಗೂ ನಿರಂತರ ಉದ್ಯೋಗ ಒದಗಿಸುವ ಜೊತೆಗೆ, ರೈತರ ಬೆಳೆಗೂ ಸಕಾಲದಲ್ಲಿ ರಕ್ಷಣೆ ನೀಡಲಿದೆ ಎಂದು ವಿವರಿಸಿದರು.

ಪಾರದರ್ಶಕ ಚರ್ಚೆ ಮತ್ತು ಅಧಿಕಾರಿಗಳ ಮಾರ್ಗದರ್ಶನ:

*ಗ್ರಾಮೀಣ ಉದ್ಯೋಗದ ಎಡಿ ಸೋಮಶೇಖರ್ ಅಭಿಮತ

*ವಿಬಿ ಜಿ ರಾಮ್ ಜಿ ಯೋಜನೆಯಡಿ ಕುಂಚೂರು ಗ್ರಾಮಸಭೆಯಲ್ಲಿ ತೀರ್ಮಾನ

*ಅನ್ನದಾತರಿಗೂ ನೀಗಲಿದೆ ಕೂಲಿಕಾರರ ಬರ

*ಉದ್ಯೋಗ ಖಾತ್ರಿ ಕೆಲಸ ಸ್ಥಗಿತಗೊಳಿಸಿ 60 ದಿನಗಳ ‘ಕೃಷಿ ಉತ್ತುಂಗ ಅವಧಿ’ ನಿಗದಿ

ಗ್ರಾಮಸಭೆಯು ಸಂಪೂರ್ಣ ಪ್ರಜಾಸತ್ತಾತ್ಮಕವಾಗಿ ಮತ್ತು ಪಾರದರ್ಶಕವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಿದ್ದ ಸಹಾಯಕ ನಿರ್ದೇಶಕರು (ಗ್ರಾ.ಉ.) ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, “ಸರ್ಕಾರದ ಈ ಹೊಸ ಯೋಜನೆಯು ಕೃಷಿ ಮತ್ತು ಕಾರ್ಮಿಕರ ನಡುವಿನ ಕೊಂಡಿಯನ್ನು ಮತ್ತಷ್ಟು ಭದ್ರಪಡಿಸಲಿದೆ. ರೈತರು ಸಕಾಲದಲ್ಲಿ ಕೃಷಿ ಕಾರ್ಯಗಳನ್ನು ಮುಗಿಸಲು ಇದು ಅತ್ಯುತ್ತಮ ವೇದಿಕೆಯಾಗಿದೆ.

ಕಾರ್ಮಿಕರಿಗೂ ಸ್ಥಳೀಯವಾಗಿಯೇ ಕೂಲಿ ಸಿಗುವುದರಿಂದ ವಲಸೆ ತಪ್ಪುತ್ತದೆ” ಎಂದು ಮಾರ್ಗದರ್ಶನ ನೀಡಿದರು. ಗ್ರಾಮಸ್ಥರು, ರೈತ ಮುಖಂಡರು ಮತ್ತು ಕೂಲಿ ಕಾರ್ಮಿಕರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅಂತಿಮವಾಗಿ ಸರ್ವರ ಸಮ್ಮತಿಯೊಂದಿಗೆ ನಿರ್ಣಯವನ್ನು ಅಂಗೀಕರಿಸಿ, ಸರ್ಕಾರಕ್ಕೆ ಕಳುಹಿಸಿಕೊಡಲು ಒಪ್ಪಿಗೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಕುಂಚೂರು ಪಿಡಿಒ ಟಿ.ಅಂಜಿನಪ್ಪ, ಟಿಐಇಸಿ ವಸಿಗೇರಪ್ಪ ಕೆ ಚಾಗನೂರು, ಕಾರ್ಯದರ್ಶಿ ಕೆಂಚಪ್ಪ, ಡಿಇಒ ಚಂದ್ರಶೇಖರ್, ಜಿಕೆಎಂ ಮಂಜುಳಾ, ಗ್ರಾಪಂ ಮಾಜಿ ಸದಸ್ಯ ಸಂಜೀವಪ್ಪ, ಸ್ಥಳೀಯ ಮುಖಂಡ ಚನ್ನಬಸವನಗೌಡ ಸೇರಿದಂತೆ, ರೈತ ಮುಖಂಡರು, ಕಾಯಕಬಂಧುಗಳು, ಸ್ವಸಹಾಯ ಸಂಘದ ‌ಸದಸ್ಯರು, ಕೂಲಿಕಾರರು ಹಾಗೂ ಗ್ರಾಪಂ ಸಿಬ್ಬಂದಿ ಹಾಜರಿದ್ದರು.

 

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹ: ತಹಸೀಲ್ದಾರರಿಗೆ ಬಿಜೆಪಿ ವತಿಯಿಂದ ಮನವಿ ಸಲ್ಲಿಕೆ

 ಹರಪನಹಳ್ಳಿ : ಇಂದು ಮಂಡಲ ಬಿಜೆಪಿ ವತಿಯಿಂದ ಬರಗಾಲದ ಕಾರಣದಿಂದ ಹರಪನಹಳ್ಳಿ ತಾಲೂಕನ್ನು ಬರಪೀಡಿತ ತಾಲೂಕನ್ನಾಗಿ...

Homeಸುದ್ದಿಗಳು

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ತಾಲೂಕಿನ ವಿವಿಧ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಖಾಲಿಯಿರುವ...

Homeಸುದ್ದಿಗಳು

ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ಹೊಸಪೇಟೆ ತಾಲೂಕಿನ ಸಮಗ್ರ ಗಣಿ ಪರಿಸರ ಪುನಶ್ಚೇತನ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ...

Homeಸುದ್ದಿಗಳು

ಲಾಕಪ್ ಡೆತ್ ಪ್ರಕರಣ ಸಿಬಿಐ ತನಿಖೆಗೆ ಆಗ್ರಹ

ಹರಪನಹಳ್ಳಿ: ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಯುವಕನ ಲಾಕಪ್ ಡೆತ್ ಪ್ರಕರಣವನ್ನು ತೀವ್ರವಾಗಿ ಖಂಡಿಸಿ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು  ಸಿಪಿಐ(ಎಂಎಲ್) ಹಾಗೂ ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘಗಳ ಮುಖಂಡರು ಆಗ್ರಹಿಸಿದ್ದಾರೆ. ಚಿತ್ತಾರಗೇರಿಯಲ್ಲಿರುವ  ಮೃತ ಖಲೀಲ್‌ ಅವರ ಮನೆಗೆ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.