ಲಕ್ಷಾಂತರ ರೂಪಾಯಿ ಅವ್ಯವಹಾರ: ತನಿಖೆಗೆ ಒತ್ತಾಯ

newbietechy.blog@gmail.com
2 Min Read

ಹರಪನಹಳ್ಳಿ : ಇಲ್ಲಿಯ ಹಳೆ ಬಸ್ ನಿಲ್ದಾಣ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬಿಡಿಪಿ ಮತ್ತು ಕೃಷಿಯೇತರ ಸಾಲಗಳಲ್ಲಿ ನಡೆದಿರುವ ಲಕ್ಷಾಂತರ ರೂಪಾಯಿ ಅವ್ಯವಹಾರಗಳನ್ನು ಸಹಕಾರ ಸಂಘಗಳ ಕಾಯ್ದೆ ಕಲಂ 64ರ ಅಡಿ ವಿಚಾರಣೆಗೆ ಒಳಪಡಿಸಬೇಕು, ಶೀಘ್ರ ಆಡಳಿತಾಧಿಕಾರಿ ನೇಮಿಸಬೇಕು ಎಂದು ಬ್ಯಾಂಕ್ ಸದಸ್ಯರು ಒತ್ತಾಯಿಸಿದರು.

ನಗರದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗಿಗೆ ಮನವಿ ಸಲ್ಲಿಸಿ, ಬಳಿಕ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ, ಹಿರಿಯ ವಕೀಲರಾದ ತಿಮ್ಮಲಾಪುರ ರವಿಶಂಕರ್ ಮಾತನಾಡಿ, ಸಂಘವೂ 10 ಅಂಶಗಳಲ್ಲಿ ಸಹಕಾರ ಕಾಯ್ದೆ ಉಲ್ಲಂಘಿಸಿದೆ, ಅದರಲ್ಲಿ ಹಣದ ದುರುಪಯೋಗವಾಗಿದೆ ಎಂದು ಆರೋಪಿಸಿದರು. ಸಹಕಾರ ಸಂಘದಿಂದ 7 ಕೋಟಿಗೂ ಅಧಿಕ ಹಣ ಬೇಕಾಬಿಟ್ಟಿಯಾಗಿ ನೀಡಿದ್ದು, ವಸೂಲಾತಿಯಲ್ಲಿ ಅವ್ಯವಹಾರ ಎಸಗಿದ್ದಾರೆ. ಕಾಯಕ ಯೋಜನೆಯಡಿ ರೂ.7.52 ಲಕ್ಷ, ಸ್ವ ಸಹಾಯ ಗುಂಪುಗಳ ಸಾಲದಲ್ಲಿ 14.14 ಲಕ್ಷ, ಸಂಘದ ಬಂಡವಾಳದಿಂದ ಬಿಡಿಪಿ ಸಾಲ 6.98 ಕೋಟಿ ರೂಪಾಯಿ ವಸೂಲು ಮಾಡಿಲ್ಲ ಎಂದು ಅಪಾದಿಸಿದರು.

2020-21ನೇ ಸಾಲಿನಲ್ಲಿ ಸಂಘವು 1.04,604 ನಿವ್ವಳ ಲಾಭಗಳಿಸಿತ್ತು. ಆದರೆ 2021 ರಿಂದ 2025ರ ವರೆಗೆ ಒಟ್ಟು ರೂ.85.80 ಲಕ್ಷ ಕ್ರೋಢಿಕೃತ ನಷ್ಟ ತೋರಿಸಿದೆ. ಆದರೆ ಗೊಬ್ಬರ ಮಾರಾಟದ ಹಣ, ಇಸ್ಟಾಂಪ್, ಕಟ್ಟಡ ಬಾಡಿಗೆ ಹಣ ಎಲ್ಲಿಗೆ ಹೋಗಿದೆ ಎಂದು ಪ್ರಶ್ನಿಸಿದರು. 2025, ಮಾರ್ಚ್ 31ರ ಅಡಾವೆ ಪತ್ರಿಕೆ ಪ್ರಕಾರ ಠೇವಣಿ ರೂ.9.40 ಕೋಟಿ ಇದೆ. ಆ ಪೈಕಿ 7.36 ಕೋಟಿ ಕೈ ಸಾಲ ವಿತರಿಸಲಾಗಿದೆ, ಉಳಿಕೆ 2.03 ಕೋಟಿ ಹಣ ಖರ್ಚು ವೆಚ್ಚದಲ್ಲಿ ನಷ್ಟ ಮಾಡಿರುವುದು ಲೆಕ್ಕಪರಿಶೋಧನೆ ವರದಿಯಿಂದ ತಿಳಿಯುತ್ತದೆ.

ಲೆಕ್ಕಪರಿಶೋಧನೆಯಲ್ಲಿ ರೂ.19.64 ಲಕ್ಷ ಬಿಡಿಪಿ ಸಾಲದ ಬಗ್ಗೆ ಲೆಕ್ಕಪರಿಶೋಧಕರು ಆಕ್ಷೇಪಿಸಿದ್ದಾರೆ. ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ನಬಾರ್ಡ್‍ ರೂ.56.55 ಲಕ್ಷ ಹಣ ಮುಂಜೂರು ಮಾಡಿದೆ. ಇದರಲ್ಲಿ ರೂ.30.68 ಲಕ್ಷಗಳಿಗೆ ಟೆಂಡರ್ ಕರೆಯಲಾಗಿದೆ, ಬಾಕಿ ಉಳಿದ ರೂ.25.87 ಲಕ್ಷ ಎಲ್ಲಿದೆ ಎನ್ನುವುದನ್ನು ಅಡಾವೆ ಪತ್ರದಲ್ಲಿ ನಮೂದಿಸದೇ ಮರೆಮಾಚಲಾಗಿದೆ.

ನಿಯಮ ಉಲ್ಲಂಘಿಸಿ ಪಿಗ್ಮಿ ಕಮೀಷನ್ ಕೊಡಲಾಗುತ್ತಿದೆ. ಸಂಘವು ನೀಡಿರುವ ಬಿಡಿಪಿ ಸಾಲವು ಒಟ್ಟು ರೂ.6.98 ಕೋಟಿ ವಸೂಲಿ ಮಾಡದೇ ಆಡಳಿತ ಮಂಡಳಿ ನಿರ್ಲಕ್ಷ್ಯವಹಿಸಿದೆ. ಕಟ್ಟಡದ ಬಾಡಿಗೆ ಹಣ ರೂ.10 ಲಕ್ಷವಿದೆ, ಗೊಬ್ಬರ ಮಾರಾಟದಿಂದ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ. ಇಷ್ಟೆಲ್ಲಾ ಇದ್ದರೂ ಸಂಘವು ನಷ್ಟದಲ್ಲಿದೆ ಎಂದು ತೋರಿಸಲಾಗಿದೆ. ಸುಸ್ತಿ ಸಾಲ, ನಷ್ಟ ಮತ್ತು ಅನುತ್ಪಾದಕ ಆಸ್ತಿ ವಿಚಾರದ ಬಗ್ಗೆ ಪರಿಶೋಧಕರಾಗಲಿ, ಅಥವಾ ಇಲಾಖೆ ಅಧಿಕಾರಿಗಳಾಗಲೀ ಸಂಘಕ್ಕೆ ಬೇಟಿ ಕೊಟ್ಟು ಪರಿಶೀಲಿಸಿಲ್ಲ.

ಬೇಕಾಬಿಟ್ಟಿಯಾಗಿ ಸಾಲಕೊಟ್ಟು, ನಿಷ್ಠುರವಾಗಿ ಸಾಲ ವಸೂಲಾತಿ ಮಾಡದ ಪರಿಣಾಮ ರೂ.85.89 ಲಕ್ಷ ರೂಪಾಯಿ ನಷ್ಟವಾಗಿರುತ್ತದೆ. ಹಾಗಾಗಿ ಸಂಘವನ್ನು ತಕ್ಷಣದಿಂದ ರದ್ದುಗೊಳಿಸಿ, ಆಡಳಿತಾಧಿಕಾರಿ ನೇಮಿಸಬೇಕು. ತಪ್ಪಿತಸ್ಥ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.

ವಕೀಲರಾದ ಕೊಟ್ರೇಶ್, ಬ್ಯಾಂಕ್ ಸದಸ್ಯರಾದ ಬಾವಿಕಟ್ಟೆ ಭರಮಪ್ಪ, ಚಿಕ್ಕೇರಿ ವೆಂಕಟೇಶ್, ಪೂಜಾರ್ ನಾಗಪ್ಪ, ಜಿ.ಹನುಮಂತಪ್ಪ, ಜಿ.ವಿನಯಕುಮಾರ, ಟಿ.ಅಹಮದ್ ಹುಸೇನ್, ಜಿ.ಸುಜಾತ, ಗುಂಡಿ ಮಂಜಪ್ಪ, ಬಾರಿಕರ ರವಿ ಇತರರಿದ್ದರು.

Share This Article
Leave a Comment