ಹೊಸಪೇಟೆ: ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ಶನಿವಾರ (ಮೇ 30) ಬೆಳಿಗ್ಗೆ 9.30ಕ್ಕೆ ಅಧಿಕಾರಿಗಳಿಗಾಗಿ ‘ಮಾಹಿತಿ ಹಕ್ಕು ಕಾಯ್ದೆ’ (ಆರ್‌ಟಿಐ) ಕುರಿತು ಬೃಹತ್ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟಸಿಂಗ್, ಬೆಂಗಳೂರು ಪೀಠದ ರಾಜ್ಯ ಮಾಹಿತಿ ಆಯುಕ್ತ ಕೆ. ಬದ್ರುದ್ದೀನ ಹಾಗೂ ಡಾ. ಹರೀಶಕುಮಾರ ಅವರು ಈ ಮಹತ್ವದ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದು, ಮಾಹಿತಿ ಹಕ್ಕು ಕಾಯ್ದೆಯ ಅನುಷ್ಠಾನ ಮತ್ತು ಸವಾಲುಗಳ ಕುರಿತು ಅಧಿಕಾರಿಗಳೊಂದಿಗೆ ನೇರ ಸಂವಾದ ನಡೆಸಲಿದ್ದಾರೆ.ಜಿಲ್ಲೆಯ ಎಲ್ಲ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರಪನಹಳ್ಳಿ : ನಾಟಿ ವೈದ್ಯರನ್ನು ಸರ್ಕಾರಿ ಆಯುಷ್ (AYUSH) ವಿಭಾಗದಡಿ ಸೇರಿಸಿ, ಅವರಿಗೆ ಅಧಿಕೃತ 'ರಾಷ್ಟ್ರೀಯ ನೋಂದಣಿ ಸಂಖ್ಯೆ' ಹಾಗೂ 'ಗುರುತಿನ ಚೀಟಿ' ನೀಡಬೇಕು ಎಂದು ಆಗ್ರಹಿಸಿ ಇಲ್ಲಿಯ ಪಾರಂಪರಿಕ ನಾಟಿ ವೈದ್ಯರ ಸಂಘ ಪ್ರಧಾನಿ ನರೇಂದ್ರಮೋದಿ ಅವರಿಗೆ ಪತ್ರ ಚಳವಳಿಗೆ ಶನಿವಾರ ಚಾಲನೆ ನೀಡಿದ್ದಾರೆ. ಕರ್ನಾಟಕದ ಸಾಂಪ್ರದಾಯಿಕ ನಾಟಿ ವೈದ್ಯರು ತಮಗೆ ಸರ್ಕಾರದಿಂದ ಅಧಿಕೃತ ಮಾನ್ಯತೆ ನೀಡುವಂತೆ ಆಗ್ರಹಿಸಿ ನೇರವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದಾರೆ. ಕರೋನಾ ಮಹಾಮಾರಿ ಇಡೀ ದೇಶವನ್ನೇ ಕಾಡಿದ ಸಂದರ್ಭದಲ್ಲಿ, ಹಳ್ಳಿಗಳಲ್ಲಿ ಉಚಿತವಾಗಿ ಕಷಾಯ ವಿತರಿಸುವ ಮೂಲಕ ರೋಗ ನಿಯಂತ್ರಣದಲ್ಲಿ ನಮ್ಮ ನಾಟಿ ವೈದ್ಯರು ಪ್ರಮುಖ ಪಾತ್ರ ವಹಿಸಿದ್ದರು. ಇಂದಿಗೂ ಅನೇಕ ದೀರ್ಘಕಾಲದ ಕಾಯಿಲೆಗಳಿಗೆ, ಮನುಷ್ಯರಿಗೆ ಮಾತ್ರವಲ್ಲದೆ ಜಾನುವಾರುಗಳಿಗೂ ಗಿಡಮೂಲಿಕೆಗಳ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ನಾಟಿ ವೈದ್ಯರಿಗೆ ಯಾವುದೇ ಸರ್ಕಾರಿ ಮಾನ್ಯತೆ ಇಲ್ಲದಿರುವುದರಿಂದ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಮ್ಮ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಸಂಶೋಧನೆ ಹಾಗೂ ಅಭಿವೃದ್ಧಿಗೆ ಸರ್ಕಾರವು ನೆರವು ನೀಡಬೇಕು. ನಾಟಿ ವೈದ್ಯಕೀಯದಲ್ಲಿ ಜ್ಞಾನ ಮತ್ತು ಅರ್ಹತೆ ಹೊಂದಿರುವ ವ್ಯಕ್ತಿಗಳಿಗೆ ಸರ್ಕಾರದಿಂದಲೇ ಅಧಿಕೃತ ಪ್ರಮಾಣಪತ್ರ (ಸರ್ಟಿಫಿಕೇಟ್) ನೀಡುವ ವ್ಯವಸ್ಥೆಯಾಗಬೇಕು....