ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತೀವ್ರ ನಿಧಾನಗತಿ ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಸ್ವಲ್ಪ ಪ್ರಮಾಣದ ಗಣತಿ ಬಾಕಿ ಇರುವುದರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಗಡುವನ್ನು ಅಕ್ಟೋಬರ್ 31ರ ವರೆಗೆ ವಿಸ್ತರಿಸಲಾಗಿದೆ. ಆದರೆ, ಹಬ್ಬದ ಬಳಿಕ ಶಾಲೆಗಳು ಆರಂಭ ಆಗಲಿರುವುದರಿಂದ ಈ ಕಾರ್ಯದಿಂದ ಶಿಕ್ಷಕರಿಗೆ ವಿನಾಯಿತಿ ನೀಡಲಾಗಿದೆ.
ಬಾಕಿ ಉಳಿದಿರುವ ಗಣತಿ ಕಾರ್ಯವನ್ನು ನಾನಾ ಇಲಾಖೆಗಳ ನೌಕರರನ್ನು ಬಳಸಿಕೊಂಡು ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ.
ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಗಡುವು ಶನಿವಾರವೇ (ಅ.18) ಅಂತ್ಯಗೊಂಡಿತ್ತು. ಆದರೆ, ಸಮೀಕ್ಷಾ ಕಾರ್ಯ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಸಭೆ ನಡೆಸಿ ಪರಿಶೀಲನೆ ನಡೆಸಿದರು. ಸಮೀಕ್ಷೆ ಅಂತಿಮ ಹಂತದಲ್ಲಿದ್ದು, ನಿರೀಕ್ಷಿತ ಗುರಿ ತಲುಪಲು ಸಮಯಾವಕಾಶ ಬೇಕು ಎಂಬ ಅಭಿಪ್ರಾಯ ಬಂದದ್ದರಿಂದ ಗಡುವು ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಯಿತು.
ಸಮೀಕ್ಷಾ ಕಾರ್ಯದಿಂದ ಶಿಕ್ಷಕರಿಗೆ ಬಿಡುಗಡೆ ನೀಡಬೇಕು. ನಿಗದಿಯಂತೆ ಶಾಲಾ, ಕಾಲೇಜುಗಳನ್ನು ಪ್ರಾರಂಭಿಸಿ ಪಾಠ, ಪ್ರವಚನ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಸಮೀಕ್ಷೆಗೆ ಬೇರೆ ಸಿಬ್ಬಂದಿ ನಿಯೋಜಿಸಿಕೊಳ್ಳಬೇಕು ಎಂದು ಸಿಎಂ ಸೂಚಿಸಿದರು.
‘‘ರಾಜ್ಯದಲ್ಲಿ ಕೈಗೊಳ್ಳುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಗಡುವನ್ನು ಅ.31ರ ವರೆಗೆ ವಿಸ್ತರಿಸಲು ಸಿಎಂ ಅಧ್ಯಕ್ಷತೆಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಾಜ್ಯಾದ್ಯಂತ ಶಾಲೆಗಳು ಪ್ರಾರಂಭ ಆಗಿರುವುದರಿಂದ ಇನ್ನೂ 9 ದಿನಗಳ ಕಾಲ ನಡೆಯುವ ಸಮೀಕ್ಷೆಯಲ್ಲಿ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳದಿರಲು ನಿರ್ಧರಿಸಲಾಗಿದೆ,’’ ಎಂದು ಸಭೆ ಬಳಿಕ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಶಾಸಕರಿಂದ ಜಾಗೃತಿ: ವಿಶೇಷವಾಗಿ ಬೆಂಗಳೂರಿನಲ್ಲಿ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಶಾಸಕರು ಮಾಡಬೇಕು ಎಂದು ಸಿಎಂ ಸೂಚಿಸಿದ್ದಾರೆ. ಅದರಂತೆ ಸಿಎಂ ಕಚೇರಿಯಿಂದ ಶಾಸಕರುಗಳಿಗೆ ಸಂದೇಶವೂ ರವಾನೆಯಾಗಲಿದೆ.