ಹರಪನಹಳ್ಳಿ : ಹೊಸದಾಗಿ ಜಾರಿಗೆ ತಂದಿರುವ ವಿಬಿಜಿ ರಾಮ್‍ಜಿ ಕಾಯ್ದೆಯಡಿ ಹಳೆಯ ನರೇಗಾ ಮಾದರಿ ಕಾಮಗಾರಿಗಳನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೋಸ್) ನೇತೃತ್ವದಲ್ಲಿ ವಿವಿಧ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಬಹಿರಂಗ ಸಭೆ ನಡೆಸಿದ ಕಾರ್ಮಿಕರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ವೈ.ಎಚ್.ಅವರಿಗೆ ಮನವಿ ಸಲ್ಲಿಸಿದರು.
ಹೊಸ ಕಾನೂನಿನಿಂದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಹೊಸ ಯೋಜನೆಯಲ್ಲಿರುವ 318 ಕಾಮಗಾರಿಗಳ ಪೈಕಿ ಮುಕ್ಕಾಲು ಪಾಲು ಯಂತ್ರಾಧಾರಿತವಾಗಿವೆ. ಸಾಮೂಹಿಕ ಕೂಲಿ ಕೆಲಸ ಮಾಡುವ ಕಾಮಗಾರಿಗೆ ಇದರಲ್ಲಿ ಅವಕಾಶವಿಲ್ಲ. ಇದರಿಂದಾಗಿ ಭೂಮಿ ಇಲ್ಲದ ಬಡ ಕೂಲಿ ಕಾರ್ಮಿಕರು ಅನಿವಾರ್ಯವಾಗಿ ಗುಳೆ ಹೋಗುವ (ವಲಸೆ) ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಈ ಹಿಂದೆ ನರೇಗಾ ಯೋಜನೆಯು ಗ್ರಾಮೀಣ ಕಾರ್ಮಿಕರಿಗೆ ವರದಾನವಾಗಿತ್ತು. ಆದರೆ, ಪ್ರಸ್ತುತ ತಾಲ್ಲೂಕಿನಲ್ಲಿ ಮಳೆ ಕೈಕೊಟ್ಟಿದ್ದು, ತೀವ್ರ ಬರಗಾಲ ಆವರಿಸಿದೆ. ಈ ಸಂಕಷ್ಟದ ಸಮಯದಲ್ಲಿ ಕಾರ್ಮಿಕರಿಗೆ ನಿರಂತರ ಕೆಲಸ ನೀಡುವಲ್ಲಿ ಹೊಸ ಕಾನೂನು ವಿಫಲವಾಗಿದೆ. ರಾಜ್ಯ ಸರ್ಕಾರವು ಕೂಡಲೇ ಕೇಂದ್ರದೊಂದಿಗೆ ಮಾತುಕತೆ ನಡೆಸಿ, ಕಾರ್ಮಿಕರಿಗೆ ಅನುಕೂಲವಾಗುವಂತಹ ಉದ್ಯೋಗಗಳನ್ನು ಸೃಷ್ಟಿಸಬೇಕು ಎಂದು ಅವರು ಆಗ್ರಹಿಸಿದರು.
ದನದ ಕೊಟ್ಟಿಗೆ, ಹಳ್ಳಕೊಳ್ಳ, ಗೋಕಟ್ಟೆ, ಚೆಕ್ ಡ್ಯಾಂ ನಿರ್ಮಾಣ ಹಾಗೂ ಹೂಳೆತ್ತುವಂತಹ ಶ್ರಮದಾಯಕ ಕಾಮಗಾರಿಗಳನ್ನು ಮರುಜಾರಿಗೊಳಿಸಬೇಕು. ಕೆಲಸದ ಸ್ಥಳದಲ್ಲಿ ಆಕಸ್ಮಿಕವಾಗಿ ಮೃತಪಡುವ ಕಾರ್ಮಿಕರಿಗೆ ನೀಡುವ ಪರಿಹಾರ ಮೊತ್ತ ಹೆಚ್ಚಿಸಬೇಕು.
ಪ್ರಸ್ತುತ ವಿಬಿ-ಜಿ ರಾಮ್ ಜಿ ಯೋಜನೆಯಡಿಯಿರುವ 125 ಮಾನವ ದಿನಗಳ ಬದಲಾಗಿ, ಉದ್ಯೋಗದ ದಿನಗಳನ್ನು 200 ದಿನಗಳಿಗೆ ಏರಿಕೆ ಮಾಡಬೇಕು. ರಾಜ್ಯ ಸಂಚಾಲಕರಾದ ಮಲ್ಲೇಶ್ ಕೋಗಳಿ, ಜಿಲ್ಲಾ ಸಂಚಾಲಕಿ ಅಕ್ಕಮಹಾದೇವಿ, ಅರಸನಾಳು ಮಾರುತಿ, ಚಂದ್ರಮ್ಮ, ಸಿದ್ದಮ್ಮ ನವಲಿ, ರೇಖಾ, ಸವಿತಾ, ಪಾಂಡು, ಹನುಮಂತ, ಶರಣಪ್ಪ, ಜ್ಯೋತಿ, ಲಕ್ಷ್ಮಿ ಇದ್ದರು.
- Drought
- Drought Demand
- EO Appeal
- GRAKOS
- Harapanahalli
- Karnataka News
- Labour Rights
- Labour Union
- MGNREGA
- MGNREGA Demand
- MGNREGA Protest
- rural employment
- Rural Workers
- VBG Ramji Scheme
- VIJAYANAGARA
- Vijayanagara News
- Worker Rights
- ಕರ್ನಾಟಕ ಸುದ್ದಿ
- ಕಾರ್ಮಿಕರ ಪ್ರತಿಭಟನೆ
- ಕಾರ್ಮಿಕರ ಹಕ್ಕೋತ್ತಾಯ
- ಗ್ರಾಕೋಸ್
- ಗ್ರಾಮೀಣ ಉದ್ಯೋಗ
- ತಾಲೂಕು ಪಂಚಾಯಿತಿ
- ನರೇಗಾ
- ನರೇಗಾ ಕಾಮಗಾರಿ
- ನರೇಗಾ ಪ್ರತಿಭಟನೆ
- ಬರಗಾಲ
- ವಲಸೆ
- ವಲಸೆ ತಡೆ
- ವಿಜಯನಗರ ಸುದ್ದಿ
- ವಿಬಿಜಿ ರಾಮ್‍ಜಿ
Leave a comment