Home ಸುದ್ದಿಗಳು  ಅನಧಿಕೃತ ಕಲ್ಲು ಗಣಿ ಮತ್ತು ಮರಳು ಸಾಗಣೆ 16 ಪ್ರಕರಣ ದಾಖಲು
ಸುದ್ದಿಗಳು

 ಅನಧಿಕೃತ ಕಲ್ಲು ಗಣಿ ಮತ್ತು ಮರಳು ಸಾಗಣೆ 16 ಪ್ರಕರಣ ದಾಖಲು

Share
ವಿಜಯನಗರ (Vijayanagara), ಹೊಸಪೇಟೆ (Hospet), ಅಕ್ರಮ ಗಣಿಗಾರಿಕೆ (Illegal Mining), ಮರಳು ಸಾಗಾಣಿಕೆ (Sand Smuggling), ಕವಿತಾ ಮನ್ನಿಕೇರಿ (Kavita Mannikeri), ಜಿಲ್ಲಾಧಿಕಾರಿ (District Collector), ದಂಡ (Fine), ಕರ್ನಾಟಕ ಸುದ್ದಿ (Karnataka News).
Share

ವಿಜಯನಗರ (ಹೊಸಪೇಟೆ)  :ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ, ಮರಳು ಸಾಗಣಿ ಹಾಗೂ ಮಣ್ಣು ಸಾಗಣೆ ಸೇರಿದಂತೆ  ವಿವಿಧ ರೀತಿಯ ಒಟ್ಟು 16 ಪ್ರಕರಣ ದಾಖಲಿಸಿ ರೂ.4.45 ಲಕ್ಷ ದಂಡ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾಹಿತಿ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಉಪಖನಿಜ ಕಟ್ಟಡ ಕಲ್ಲು ಅನಧಿಕೃತ ಸಾಗಾಣಿಕೆಗೆ ಸಂಬಂಧಿಸಿದಂತೆ 9 ಪ್ರಕರಣ ದಾಖಲಾಗಿದ್ದು, ರೂ. 3.9 ಲಕ್ಷ ದಂಡ ವಿಧಿಸಲಾಗಿದೆ. ಅಕ್ರಮ ಮರಳು ಸಾಗಣೆಗೆ ಸಂಬಂಧಿಸಿದ 6 ಪ್ರಕರಣ ದಾಖಲಾಗಿದ್ದು, ರೂ 1.2 ಲಕ್ಷ ದಂಡ ಮತ್ತು ಅನಧಿಕೃತ ಮಣ್ಣು ಸಾಗಣೆಗೆ ಸಂಬಂಧಿಸಿದ 1 ಪ್ರಕರಣ ಸೇರಿ ಜಿಲ್ಲೆಯಲ್ಲಿ ಒಟ್ಟು 16 ಪ್ರಕರಣಕ್ಕೆ ಒಟ್ಟು 4.45 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಅನಧಿಕೃತ ಗಣಿಗಾರಿಕೆ ಮತ್ತು ಅಕ್ರಮ ಮರಳು ಮಾರಾಟ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶಗಳಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ನಿರಂತರವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಗಣಿಗಾರಿಕೆ, ಮರಳು ಸಾಗಾಟ ನಡೆಸುತ್ತಿರುವುದು ಕಂಡುಬಂದಲ್ಲಿ ಅಂತಹ ಪರವಾನಗಿಗಳನ್ನು ತಕ್ಷಣವೇ ರದ್ದುಗೊಳಿಸುವುದರ ಜೊತೆಗೆ ಭಾರೀ ದಂಡ ವಿಧಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯ ನದಿ ಪಾತ್ರಗಳಲ್ಲಿ ಹಾಗೂ ಹಳ್ಳ-ಕೊಳ್ಳಗಳಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಮರಳು ದಂಧೆಯನ್ನು ತಡೆಯಲು ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕು. ಅಕ್ರಮವಾಗಿ ಮರಳು ಸಾಗಿಸುವ ವಾಹನಗಳನ್ನು ವಶಪಡಿಸಿಕೊಂಡು, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದರು. ಸರ್ಕಾರದ ನೂತನ ಮರಳು ನೀತಿಯನ್ವಯ ಸಾರ್ವಜನಿಕರಿಗೆ ಮತ್ತು ಸರ್ಕಾರಿ ಕಾಮಗಾರಿಗಳಿಗೆ ಸಕಾಲದಲ್ಲಿ ಮರಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಮರಳು ವಿತರಣಾ ಕೇಂದ್ರಗಳಲ್ಲಿ ಪಾರದರ್ಶಕತೆ ಕಾಪಾಡಬೇಕು ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯ ಗಡಿಭಾಗದ ಚೆಕ್ ಪೋಸ್ಟ್ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, 24/7 ನಿಗಾ ಇರಿಸಬೇಕು. ರಾತ್ರಿ ವೇಳೆ ನಡೆಯುವ ಅಕ್ರಮ ಗಣಿ ಮತ್ತು ಮರಳು ಸಾಗಾಣಿ ತಡೆಯಲು ರಾತ್ರಿ ಗಸ್ತು ಪಡೆಯನ್ನು ಬಲಪಡಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ ಅವರು, ಪರಿಸರ ಸಮತೋಲನ ಕಾಯ್ದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ನೈಸರ್ಗಿಕ ಸಂಪನ್ಮೂಲಗಳ ಲೂಟಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಹೊಸದಾಗಿ ಗುರುತಿಸಲಾದ ಮರಳು ಬ್ಲಾಕ್‌ಗಳಲ್ಲಿ ಗಣಿಗಾರಿಕೆ ಪ್ರಾರಂಭಿಸುವ ಮುನ್ನ ರಾಜ್ಯ ಪರಿಸರ ಪರಿಣಾಮ ಅಂದಾಜು ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು.
2018 -19ನೇ ಸಾಲಿನಲ್ಲಿ ಹೂವಿನಹಡಗಲಿ ತಾಲ್ಲೂಕಿನ ಹಕ್ಕುಂಡಿ ಗ್ರಾಮ ವ್ಯಾಪ್ತಿಯಲ್ಲಿ ಮರಳು ಪರವಾನಗಿ ನೀಡಲಾಗಿದೆ. ಅದರಂತೆ 30746.08 ಮೆಟ್ರಿಕ್ ಟನ್ ಮರಳು ದಾಸ್ತಾನಿದ್ದು, ಅದರಲ್ಲಿ ಕೇವಲ 2 ಸಾವಿರ ಮೆಟ್ರಿಕ್ ಟನ್ ಮರಳು ಬಳಸಲಾಗಿದೆ. ಉಳಿದಂತೆ 30,546 ಮೆಟ್ರಿಕ್ ಟನ್ ಮರಳು ಜಲ್ಲಿ ಕಲ್ಲು ಹೆಚ್ಚಾಗಿ ಕಂಡು ಬರುತ್ತಿದ್ದು ಬಳಕೆಗೆ ಯೋಗ್ಯವಲ್ಲ ಎಂಬ ಕಾರಣದಿಂದ ಹಾಗೆ ಉಳಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಿದರು. ಸಾಗಾಣಿಕೆ ವೇಳೆ ಮರಳು ಮತ್ತು ಕಲ್ಲುಗಳು ಪುನಃ ಮಿಶ್ರಣವಾಗದಂತೆ ಎಚ್ಚರಿಕೆ ವಹಿಸಬೇಕು ಮತ್ತು ರಾಯಲ್ಟಿ ಪಾವತಿಸಿದ ನಂತರವಷ್ಟೇ ವಿಲೇವಾರಿಗೆ ಅವಕಾಶ ನೀಡಬೇಕು ಎಂದು ತಾಕೀತು ಮಾಡಿದರು.
ಕೂಡ್ಲಿಗಿ ತಾಲ್ಲೂಕಿನ ಹಾಲಸಾಗರ ಗ್ರಾಮದ ಕೈಲಾಶ್ ಸ್ಟೋನ್ ಕ್ರಷರ್ ಘಟಕದ ಪರವಾನಗಿ ಮುಕ್ತಾಯವಾಗಿದ್ದು, ನವೀಕರಣಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ. ಹಾಗೆಯೇ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವರದಾಪುರ ಗ್ರಾಮದಲ್ಲಿ ಹೊಸದಾಗಿ ಸ್ಟೋನ್ ಕ್ರಷರ್ ಸ್ಥಾಪಿಸಲು ಸಲ್ಲಿಕೆಯಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ರಿಯಾಜ್ ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಆಯಾ ಪ್ರದೇಶಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ನಿಯಮಾನುಸಾರ ಅನುಮತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
 ಪ್ರಸ್ತುತ ಬಿರು ಬೇಸಿಗೆ ಇರುವ ಕಾರಣ ಮಕ್ಕಳು ಕೆರೆ, ಬಾವಿಗಳಿಗೆ ಈಜಲು ಹೋಗಿ ಸಾಕಷ್ಟು ಸಾವು ನೋವು ಸಂಭವಿಸುತ್ತಿವೆ. ಆದ್ದರಿಂದ ಇದಕ್ಕೆ ಕಡಿವಾಣ ಹಾಕಲು ಆಯಾಕಟ್ಟಿನ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಸೂಚನಾ ಫಲಕ ಅಳವಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಅವರು ಸಕರಾತ್ಮಕವಾಗಿ ಸ್ಪಂದಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ ಇ ಓ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಅರಣ್ಯ ಇಲಾಖೆ ಉಪಸಂರಕ್ಷಾಣಾಧಿಕಾರಿ ಅನುಪಮ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ರಿಯಾಜ್, ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಹೇಮರಾಜ್ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರಸ್ತೆ ನಿರ್ಮಾಣಕ್ಕೆ ಜಾಗ ತ್ಯಾಗ ಮಾಡಿದ ಗ್ರಾಮಸ್ಥರ ಋಣ ತೀರಿಸಲಾಗದು: ಶಾಸಕ ಹೆಚ್.ಆರ್. ಗವಿಯಪ್ಪ

ವಿಜಯನಗರ (ಹೊಸಪೇಟೆ) : ಊರಿನ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ತಮ್ಮ ಜಾಗ...

Homeಸುದ್ದಿಗಳು

ಕೊಪ್ಪಳ : ಪ್ರತಿಭಾ ಪುರಸ್ಕಾರಕ್ಕೆ ಬನ್ನಿ

ಹರಪನಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲೂಕು ಘಟಕದ ವತಿಯಿಂದ 2026-27ನೇ ಸಾಲಿನ...

Homeಸುದ್ದಿಗಳು

ಜಿಲ್ಲೆಯ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಶೇ.100 ಇ-ಫಾರ್ಮ್ ವಿತರಣೆ ಪೂರ್ಣ

ವಿಜಯನಗರ (ಹೊಸಪೇಟೆ)  : ಜಿಲ್ಲೆಯ ಐದು ತಾಲೂಕಿನಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ...

Homeಸುದ್ದಿಗಳು

ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ಆಯ್ಕೆಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : 2026ನೇ ಸಾಲಿಗೆ ಜಿಲ್ಲೆಯಲ್ಲಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟು ಜಿಲ್ಲಾ ಮಟ್ಟದ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.