ಸಿರಿಸುದ್ದಿ.ಕಾಂ, ಹರಪನಹಳ್ಳಿ : 12ನೇ ಶತಮಾನದಲ್ಲಿ ಬಸವಣ್ಣ ನೇತೃತ್ವದಲ್ಲಿ ನಡೆದ ಸಮ ಸಮಾಜದ ಕ್ರಾಂತಿ ಮಾದರಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ , ಜಗಳೂರು ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗಾಂಧಿಸ್ಮೃತಿ, ಪಾನಮುಕ್ತ ಸಾಧಕರಿಗೆ ಅಭಿನಂದನಾ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ವೀರೇಂದ್ರ ಹೆಗ್ಗಡೆ ಅವರು ಸ್ವರಾಜ್ ಕ್ರಾಂತಿ ಶುರು ಮಾಡಿದ್ದಾರೆ. ಮಠ, ಸಂಘ ಸಂಸ್ಥೆಗಳು ಮಾಡದ ಕಾರ್ಯವನ್ನು ಧರ್ಮಸ್ಥಳಯೋಜನೆ ಮಾಡುತ್ತಿದೆ. ಆದರೆ ಕೆಲವೂ ಸಂಸ್ಥೆಗಳು ಈಗಲೂ ಬೋಗಸ್ ದಾಖಲೆ ಸೃಷ್ಟಿಸಿ ಸರ್ಕಾರದ ಸವಲತ್ತು ಪಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಮದ್ಯ ಕುಡಿಯುವುದು ಮನುಷ್ಯನ ದೇಹಕ್ಕೆ, ಸ್ವಸ್ಥ ಸಮಾಜ ಕಲುಷಿತಗೊಳಿಸುವುದು ಅಪಾಯಕಾರಿಯಾಗಿದೆ. ಇದನ್ನು ಮನಗಂಡಿದ್ದ ಬಸವಾದಿ ಶರಣರು ಸಮಾನತೆಗಾಗಿ ಹೋರಾಡಿದರು. ಸನ್ಯಾಸ ಧೀಕ್ಷೆಯಿಂದ ಶಾಂತಿ ಸಮಧಾನ, ನೆಮ್ಮದಿ ಸಿಗುತ್ತದೆ. ಜೀವನ ನೋಟ್ ಪುಸ್ತಕವಿದ್ದಂತೆ, ಅದರಲ್ಲಿ ಎಲ್ಲವೂ ದಾಖಲಾಗಿರುತ್ತವೆ ಎಂದರು. ನಿಷ್ಕ್ರಿಯ ವಾಗಿರದೇ, ಕ್ರಿಯಾಶೀಲವಾಗಿರಬೇಕು ಎಂದು ತಿಳಿಸಿದರು.
ಧರ್ಮಸ್ಥಳ ಯೋಜನೆ ಜಗಳೂರು ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ, ಮದ್ಯಪಾನ ಮುಕ್ತ ಗ್ರಾಮಗಳನ್ನಾಗಿ ಮಾಡಲು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪಣತೊಟ್ಟಿದೆ, ಇದು ಸಾಕಾರಗೊಳ್ಳಲು ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪಿ.ಎಸ್.ಅರವಿಂದನ್ ಮಾತನಾಡಿ, ಗಾಂಧೀಜಿ ಅವರ ಗ್ರಾಮ ಸ್ವರಾಜ್ ಆಶಯ ಸಾಕಾರಗೊಳಿಸವ ನಿಟ್ಟಿನಲ್ಲಿ ವೀರೇಂದ್ರ ಹೆಗ್ಗಡೆ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಗುಂಡಗತ್ತಿ ಬಿ.ಜಿ.ಮಂಜುನಾಥ, ಧರ್ಮಸ್ಥಳ ಯೋಜನೆ ಬಗ್ಗೆ ಅಪಪ್ರಚಾರ ಮಾಡುವವರ ಬಗ್ಗೆ ಜನರು ಜಾಗೃತರಾಗಿರಬೇಕು ಎಂದರು. ಮದ್ಯಪಾನ ಮುಕ್ತ ನವಜೀವನ ಸಮಿತಿ ಮದ್ಯಪಾನ ಮುಕ್ತ ಸಾಧಕರಿಗೆ ಸನ್ಮಾನಿಸಿದರು. ಸುಜ್ಞಾನ ನಿಧಿಯಡಿ 266 ವಿದ್ಯಾರ್ಥಿಗಳಿಗೆ ಮಾಸಿಕ ಶಿಷ್ಯವೇತನ ಪ್ರಮಾಣ ವಿತರಿಸಲಾಯಿತು. ಜನಜಾಗೃತಿ ಸಮಿತಿ ಸದಸ್ಯರಾದ ಜಿ.ಬಿ.ಸಿದ್ದಪ್ಪ, ಎಸ್.ಪಿ.ಲಿಂಬ್ಯನಾಯ್ಕ, ಶೈಲಜಾ, ತಿಪ್ಪೆಸ್ವಾಮಿ, ಯೋಜನಾಧಿಕಾರಿಗಳಾದ ಸುಬ್ರಹ್ಮಣ್ಯ, ಬಾಬು ಇತರರಿದ್ದರು.