ಹರಪನಹಳ್ಳಿ: “ಸರ್ಕಾರಿ ನೌಕರರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಲು ರಾಜ್ಯ ನೌಕರರ ಸಂಘ ಹಾಗೂ ತಾಲೂಕು ಘಟಕವು ಸದಾ ನಿಮ್ಮ ಬೆನ್ನೆಲುಬಾಗಿ ನಿಲ್ಲಲಿದೆ” ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಎನ್.ಜಿ. ಮನೋಹರ ಅವರು ಭರವಸೆ ನೀಡಿದರು.
ಇಲ್ಲಿನ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಭಾನುವಾರ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ವಿವಿಧ ಇಲಾಖೆಗಳ ನಿವೃತ್ತ ನೌಕರರು, ನಿವೃತ್ತ ಶಿಕ್ಷಕರು ಹಾಗೂ ಬಡ್ತಿ ಹೊಂದಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಶಿಕ್ಷಕರು ವೃತ್ತಿಯಿಂದ ನಿವೃತ್ತರಾಗುತ್ತಿದ್ದಾರೆಯೇ ವಿನಃ ಅವರ ಅನುಭವದಿಂದಲ್ಲ. ನಿವೃತ್ತಿಯ ನಂತರವೂ ನಾವು ಮತ್ತು ನಿವೃತ್ತ ನೌಕರರ ಸಂಘ ಸದಾ ನಿಮ್ಮ ಜೊತೆಗಿರುತ್ತೇವೆ. ನಿವೃತ್ತ ಜೀವನದಲ್ಲಿ ಪ್ರತಿಯೊಬ್ಬರೂ ಪ್ರತಿದಿನ ವ್ಯಾಯಾಮ, ಪುಸ್ತಕ ಓದುವುದು, ತೋಟಗಾರಿಕೆ, ಸಂಗೀತ, ಕಲೆ, ಯೋಗ ಅಥವಾ ವಾಕಿಂಗ್ ಮಾಡುವ ಮೂಲಕ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು” ಎಂದು ಮನೋಹರ ಅವರು ಕಿವಿಮಾತು ಹೇಳಿದರು.
ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಲತಾ ಟಿ.ಎಚ್.ಎಂ ಮಾತನಾಡಿ, “ಮಹಿಳಾ ನೌಕರರಿಗೆ ಋತುಚಕ್ರದ ರಜೆ ಘೋಷಿಸುವಂತೆ ಸರ್ಕಾರಕ್ಕೆ ನಮ್ಮ ಸಂಘಟನೆಯು ಮೊದಲೇ ಧ್ವನಿಗೂಡಿಸಿ ಒತ್ತಾಯಿಸಿತ್ತು. ಹರಪನಹಳ್ಳಿ ತಾಲೂಕಿನಲ್ಲಿ ಈ ಹಿಂದೆ ನೌಕರರ ಪರವಾಗಿ ಇಂತಹ ಸಕ್ರಿಯ ಕಾರ್ಯಕ್ರಮಗಳು ನಡೆದಿರಲಿಲ್ಲ. ಆದರೆ ಪ್ರಸ್ತುತ ಅಧ್ಯಕ್ಷರಾದ ಮನೋಹರ್ ಅವರು ಹತ್ತಾರು ಜನಪರ ಕಾರ್ಯಕ್ರಮಗಳ ಮೂಲಕ ತಾಲೂಕು ಸಂಘಟನೆಯನ್ನು ಇಡೀ ರಾಜ್ಯಕ್ಕೆ ಮಾದರಿಯಾಗಿಸಿದ್ದಾರೆ. ಸಂಘಟನೆಗಳು ವೃತ್ತಿಯ ಜೊತೆಗೆ ಪ್ರವೃತ್ತಿಯಾಗಬೇಕೇ ಹೊರತು, ಸಂಘಟನೆಯೇ ವೃತ್ತಿಯಾಗಬಾರದು. ನಾವೆಲ್ಲರೂ ಸೇರಿ ತಾಲೂಕಿನ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸೋಣ” ಎಂದರು.
ಮಂಜುನಾಥ ಪೂಜಾರ್ ಅವರು ಮಾತನಾಡಿ, “ಶಾಲೆಗಳಲ್ಲಿ ೩೦ ವರ್ಷಗಳಿಗೂ ಹೆಚ್ಚು ಕಾಲ ಸುದೀರ್ಘ ಸೇವೆ ಸಲ್ಲಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವ ಶಿಕ್ಷಕರ ಸಮಯಪಾಲನೆ, ಕರ್ತವ್ಯ ನಿಷ್ಠೆ ಮತ್ತು ಮಕ್ಕಳೊಂದಿಗಿನ ಮಧುರ ಬಾಂಧವ್ಯ ನಿಜಕ್ಕೂ ಶ್ಲಾಘನೀಯ. ಇವರ ನಿವೃತ್ತ ಜೀವನ ಸುಖಕರವಾಗಿರಲಿ” ಎಂದು ಹಾರೈಸಿದರು.
ಬಿಇಒ ಕಚೇರಿಯ ಇಸಿಒ ವೀರೇಶ್ ಮಾತನಾಡಿ, ನಿವೃತ್ತ ಹಾಗೂ ಬಡ್ತಿ ಪಡೆದ ಮುಖ್ಯ ಶಿಕ್ಷಕರನ್ನು ಕರೆಸಿ ಗೌರವಿಸುತ್ತಿರುವ ನೌಕರರ ಸಂಘದ ಕಾರ್ಯ ಸ್ತುತ್ಯರ್ಹ ಎಂದರು. ಶಿಕ್ಷಕ ಬಿ. ಆಂಜನೇಯ ಅವರೂ ಸಹ ವೇದಿಕೆಯಲ್ಲಿ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ವೇಳೆ ನಿವೃತ್ತ ಶಿಕ್ಷಕ ಸಲಾಂ ಅವರು “ಪ್ರೀತಿಯ ಗಾಳಿ ಬೀಸುತ್ತಿದೆ…” ಎಂಬ ಗೀತೆಯನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಷರೀಪ್ ಮಕರಬ್ಬಿ, ಸಂಘದ ಪ್ರಧಾನ ಕಾರ್ಯದರ್ಶಿ ಸೂರ್ಯನಾಯ್ಕ, ಗೌರವಾಧ್ಯಕ್ಷ ಎನ್.ಟಿ.ಸೋಮಪ್ಪ, ಜಿಲ್ಲಾ ಉಪಾಧ್ಯಕ್ಷ ಕೆ.ಅಂಜಿನಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಡಿ.ಗುರುಮೂರ್ತಿ, ಶಾಲಾ ಶಿಕ್ಷಣ ಇಲಾಖೆ ಅಧ್ಯಕ್ಷ ಎಲ್.ಎಚ್.ಗಿರಿರಾಜ್, ಬಡ್ತಿ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಪಿ.ಸುಬ್ಬಣ್ಣ, ಶಿಕ್ಷಣ ಸಂಯೋಜಕ ವೀರೇಶ ಮಾತನಾಡಿದರು. ಶಿಕ್ಷಕರಾದ ಎಸ್. ಮಕಬುಲ್ ಬಾಷ, ಪಿ. ಬಸವರಾಜ್, ಬಣಕಾರ್ ಮಂಜುನಾಥ, ಕರಿಬಸಪ್ಪ, ವೀರಪ್ಪ, ಜಯಲಕ್ಷ್ಮೀ, ಸವಿತ, ಶಿಲ್ಪ, ಕುಸುಮಾ, ಜಮಾಲುದ್ದೀನ್, ಚಂದ್ರಪ್ಪ, ಉಷಾ, ಮಂಜ್ಯಾನಾಯ್ಕ ಸೇರಿದಂತೆ ನೂರಾರು ಶಿಕ್ಷಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Leave a comment