ಹರಪನಹಳ್ಳಿ: ಪ್ರಾಣಾಯಾಮವು ಉಸಿರಾಟವನ್ನು ನಿಯಂತ್ರಿಸುವುದರ ಜೊತೆಗೆ ದೇಹಕ್ಕೆ ಚೈತನ್ಯ ನೀಡುತ್ತದೆ. ಯೋಗವು ದೇಹ ಮತ್ತು ಮನಸ್ಸಿಗೆ ಸಮತೋಲನ ತರುತ್ತದೆ. ಧ್ಯಾನವು ವಿದ್ಯಾರ್ಥಿಗಳ ಏಕಾಗ್ರತೆ, ಜ್ಞಾನಾರ್ಜನೆ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಅತ್ಯಂತ ಸಹಕಾರಿಯಾಗಿದೆ ಎಂದು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ ಮುಖ್ಯ ಶಿಕ್ಷಕರಾದ ಅರ್ಜುನ್ ಪರಸಪ್ಪ ಹೇಳಿದರು. ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಆಯೋಜಿಸಿದ್ದ 15ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆಯಲ್ಲಿ ಪ್ರತಿನಿತ್ಯ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ವ್ಯಾಯಾಮ ಮಾಡಿಸಲಾಗುತ್ತಿದ್ದು, ಆರೋಗ್ಯಕರ ಜೀವನಶೈಲಿಯನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು. ಎಲ್‌ಐಸಿಯ ಮುಖ್ಯ ಜೀವ ವಿಮಾ ಸಲಹೆಗಾರ ಮತ್ತು ಜೀವಜಲ ಟ್ರಸ್ಟ್ ಅಧ್ಯಕ್ಷರಾದ ಹೇಮಣ್ಣ ಮೋರಿಗೇರಿ ಮಾತನಾಡಿ, ನಿತ್ಯ ನಿಯಮಿತವಾಗಿ ವ್ಯಾಯಾಮ, ಪ್ರಾಣಾಯಾಮ, ಯೋಗ ಹಾಗೂ ಧ್ಯಾನವನ್ನು ಅಳವಡಿಸಿಕೊಳ್ಳುವುದರಿಂದ ಅನಾರೋಗ್ಯದಿಂದ ದೂರವಿದ್ದು ಆರೋಗ್ಯವಂತ ಜೀವನವನ್ನು ನಡೆಸಬಹುದು ಎಂದರು.
ಯೋಗವನ್ನು ವಿಶ್ವದಾದ್ಯಂತ ಪರಿಚಯಿಸಿ ಪ್ರಚುರಪಡಿಸಿದ ಹೆಮ್ಮೆ ಭಾರತಕ್ಕೆ ಸಲ್ಲುತ್ತದೆ. ಇಂದು ಸುಮಾರು 190 ದೇಶಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಏಕಕಾಲದಲ್ಲಿ ಆಚರಿಸಲಾಗುತ್ತಿದೆ. ವ್ಯಾಯಾಮ, ಪ್ರಾಣಾಯಾಮ, ಯೋಗ ಹಾಗೂ ಧ್ಯಾನದ ಮಹತ್ವವನ್ನು ಕೇವಲ ಕೇಳುವುದರಿಂದ ಸಾಲದು; ಅವುಗಳನ್ನು ಪ್ರತಿನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವುಗಳ ನೈಜ ಪ್ರಯೋಜನವನ್ನು ಅನುಭವಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರಾದ ಸುರೇಶ್, ಪತಂಜಲಿ ಯೋಗ ಶಿಕ್ಷಕರಾದ ಬಿ. ಸುದರ್ಶನ್ ಹಾಗೂ ಹೇಮಣ್ಣ ಮೋರಿಗೇರಿ ಅವರು ವಿದ್ಯಾರ್ಥಿಗಳಿಗೆ ಪ್ರಾಣಾಯಾಮ ಮತ್ತು ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಶಿಕ್ಷಕರಾದ ಸಿ. ಗಂಗಾಧರ, ಮಹಾಲಿಂಗ ಗಾವಡೆ, ಎಂ. ರೇಣುಕಮ್ಮ, ಗೀತಾಬಾಯಿ,ಉಮಾದೇವಿ,ಆಶಾ ಮತ್ತು ವಿದ್ಯಾರ್ಥಿಗಳು ಉತ್ಸುಕತೆಯಿಂದ ಭಾಗವಹಿಸಿದ್ದರು.
Leave a comment