ಹೊಸಪೇಟೆ (ವಿಜಯನಗರ ಜಿಲ್ಲೆ ) : ಏಳು ವರ್ಷದ ಬಾಲಕನನ್ನು ಅಪಹರಿಸಿ ಕಾಲುವೆಗೆ ಎಸೆದು ಕೊಲೆ ಮಾಡಿದ್ದ ಆರೋಪಿಗೆ ವಿಜಯನಗರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ಹಾಗೂ ₹65,000 ದಂಡ ವಿಧಿಸಿ ತೀರ್ಪು ನೀಡಿದೆ.
ಕಮಲಾಪುರದ ಗೋಶಾಲೆ ಕೇರಿಯ ನಿವಾಸಿ ಬೋವಿ ಜನಾಂಗದ ಓಂಕಾರೇಶ (24) ಶಿಕ್ಷೆಗೆ ಗುರಿಯಾದ ಆರೋಪಿ. ಪ್ರಕರಣದ ವಿವರ: ದಿನಾಂಕ 22-10-2024 ರಂದು ಬೆಳಿಗ್ಗೆ 9.30ರ ಸುಮಾರಿಗೆ ‘ಅಭಿ’ ಎಂಬ 7 ವರ್ಷದ ಬಾಲಕನನ್ನು ಶಾಲೆಗೆ ಬಿಟ್ಟು ಬರುವುದಾಗಿ ನಂಬಿಸಿ ಆರೋಪಿ ಓಂಕಾರೇಶ ತನ್ನ ಸ್ಕೂಟಿಯಲ್ಲಿ ಕರೆದುಕೊಂಡು ಹೋಗಿದ್ದ. ಬ್ಯಾಗ್ ಶಾಲೆಯಲ್ಲೇ ಇಟ್ಟು ಬರುವಂತೆ ತಿಳಿಸಿ, ಮಗುವನ್ನು ಕಮಲಾಪುರದ ಗಾರೆಬಾವಿ ಆಂಜನೇಯ ದೇವಾಲಯದ ಮುಂಭಾಗದಲ್ಲಿದ್ದ ಕಾಲುವೆ ಸೇತುವೆ ಮೇಲಿಂದ ಹರಿಯುವ ನೀರಿಗೆ ಎಸೆದು ಕೊಲೆ ಮಾಡಿದ್ದ.
ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 80/2026 ರಲ್ಲಿ BNS 2023 ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಹಂಪಿ ವೃತ್ತದ ಸಿಪಿಐ ರಾಜೇಶ ಬಟಗುರ್ಕಿ ಹಾಗೂ ಅವರ ತನಿಖಾ ತಂಡವು ನಿಖರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಆರೋಪದ ಮೇಲಿನ ಸಾಕ್ಷ್ಯಾಧಾರಗಳು ಸಾಬೀತಾದ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶೇಖರಪ್ಪ (ಶಾಲಿಗನೂರು) ವಾದ ಮಂಡಿಸಿದ್ದರು. ಯಶಸ್ವಿ ತನಿಖೆ ನಡೆಸಿ ಸಾಕ್ಷಿಗಳನ್ನು ಸರಿಯಾದ ಸಮಯಕ್ಕೆ ಹಾಜರುಪಡಿಸಿದ ತನಿಖಾ ತಂಡ ಹಾಗೂ ಸಿಬ್ಬಂದಿಯ ಕಾರ್ಯವನ್ನು ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿದ್ದಾರೆ.
ಆರೋಪಿತನ ವಿರುದ್ದ ದೋಷಾರೋಪಣ ಪತ್ರವನ್ನು ಸಲ್ಲಿಸಿದ ತನಿಖಾಧಿಕಾರಿ ಸಿಪಿಐ ರಾಜೇಶ ಬಟಗುರ್ಕಿ, ಜಿ.ತಿಪ್ಪೆಸ್ವಾಮಿ, ಸಂತೋಷ ಡಬ್ಬಿನ್, ಕರಿಬಸಜ್ಜ, ಹೆಚ್.ಸಿ.ಉಮೇಶ, ಮಹಾಂತೇಶ, ಈರಣ್ಣ, ವಿವೇಕಾನಂದ, ಗುರುಬಸವರಾಜ, ಬಸವರಾಜ ಮೇಟಿ ಹಾಗೂ ಸಾಕ್ಷಿಗಳನ್ನು ಸರಿಯಾದ ಸಮಯಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಿದ ನ್ಯಾಯಾಲಯದ ಸಿಬ್ಬಂದಿಗಳಾದ ಮಹ್ಮದ್ ಜಮೀರ್, ವಿಜಯಕುಮಾರ ಅವರ ಕಾರ್ಯವನ್ನು ಎಸ್ಪಿ ಜಾಹ್ನವಿ ಎಸ್ ಅವರು ಪ್ರಶಂಸಿದ್ದಾರೆ
Leave a comment