ಹರಪನಹಳ್ಳಿ: ಕೇಂದ್ರ ಸರ್ಕಾರದ ಸಹಕಾರ ನೀತಿಯಂತೆ ದೇಶದ ಅಭಿವೃದ್ಧಿಯಲ್ಲಿ ಸಹಕಾರ
ಸಂಘಗಳ ಪಾತ್ರ ಮಹತ್ವದ್ದಾಗಿದ್ದು, ಸಹಕಾರದಿಂದ ಮಾತ್ರ ಸಮೃದ್ಧಿ ಹೊಂದಲು ಸಾಧ್ಯ ಎಂದು
ಅಟಲ್ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಓಂಕಾರಗೌಡ ಅಭಿಪ್ರಾಯಪಟ್ಟರು.
ನಗರದ ಎಚ್.ಪಿ.ಎಸ್. ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ
ಸಂಯುಕ್ತ ಸಹಕಾರಿ ನಿಯಮಿತ, ತಾಲ್ಲೂಕು ಸೌಹಾರ್ದ ಸಹಕಾರಿಗಳು ಹಾಗೂ ಎಚ್.ಪಿ.ಎಸ್.ಕಾಲೇಜ್, ಎನ್.ಎಸ್.ಎಸ್. ಘಟಕದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಹಕಾರ ಸಪ್ತಾಹ ಅಂಗವಾಗಿ ಯುವಜನ ಮತ್ತು ಸಹಕಾರ ಕುರಿತು ಸಂವಾದ, ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸರ್ಕಾರದ ಸಹಕಾರ ಸಚಿವಾಲಯ ಪ್ರಾರಂಭಗೊಂಡು ಐದು ವರ್ಷ ಪೂರ್ಣಗೊಳಿಸಿದೆ.
ದೇಶದಲ್ಲಿ ಸಹಕಾರ ಚಳವಳಿಗೆ ತನ್ನದೇ ಆದ ಇತಿಹಾಸವಿದೆ. ಈ ಮೊದಲು ಕೃಷಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದ್ದ ಸಹಕಾರ ಕ್ಷೇತ್ರಕ್ಕೆ 2021ರಲ್ಲಿ ಕೇಂದ್ರ ಸರ್ಕಾರ ಪ್ರತ್ಯೇಕ ಸಚಿವಾಲಯ ಒದಗಿಸುವ ಮೂಲಕ ಪೂರಕ ವಾತಾವರಣ ನಿರ್ಮಾಣ ಮಾಡಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪಿ. ಮಹಾಬಲೇಶ್ವರ ಗೌಡ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘಗಳು ರೈತರ ಜೀವಾಳವಾಗಿವೆ. ಶೂನ್ಯ ಬಡ್ಡಿ ದರದಲ್ಲಿ ದೊರೆಯುವ ಕೃಷಿ ಸಾಲಗಳ ಸದ್ಬಳಕೆ ಮಾಡಿಕೊಳ್ಳಬೇಕು ಸಲಹೆ ನೀಡಿದರು.
ಉಪನ್ಯಾಸಕ ಎಚ್. ಮಲ್ಲಿಕಾರ್ಜುನ ಸಹಕಾರ ಚಳವಳಿಯ ಕುರಿತು ವಿಶೇಷ ಉಪನ್ಯಾಸ ನೀಡಿದರು.ಹಿರಿಯ ಸಹಕಾರಿಗಳಾದ ಅಂಬ್ಲಿ ಮಂಜುನಾಥ್, ಆದರ್ಶ ಪಟ್ಟಣ ಬ್ಯಾಂಕ್ ನಿರ್ದೇಶಕ ಬಿ. ರವಿಕುಮಾರ್, ಪ್ರಾಚಾರ್ಯ ಪಿ. ಶಿವಗಂಗಮ್ಮ, ಸೌಹಾರ್ದ ಅಭಿವೃದ್ಧಿ ಅಧಿಕಾರಿ ವೀರಶೆಟ್ಟಿ, ಪೊಲೀಸ್ ಇಲಾಖೆಯ ಮಹಿಳಾ ಅಧಿಕಾರಿ ಶಿವಲೀಲಾ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಶಿವಾನಂದ, ಶಂಕ್ರಪ್ಪ, ಸಂತೋಷ್, ಅವಿನಾಶ್ ಮತ್ತು ಸಹಕಾರಿಗಳಾದ ಮುನೇಗೌಡ, ಸ್ವಪ್ನ ಮಲ್ಲಿಕಾರ್ಜುನ್, ಪ್ರಭಾಕರ, ರಾಜಕುಮಾರ, ಗಣೇಶ, ಬಸವರಾಜ, ಶರಣಬಸವ, ಕೆ. ರವೀಂದ್ರ, ಶಂಕ್ರಪ್ಪ ಇದ್ದರು.
Leave a comment