ಹರಪನಹಳ್ಳಿ : ಹಿಂದೆ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಭರವಸೆಯಿಲ್ಲದೆ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಇತ್ತು. ಇದನ್ನು ಮನಗಂಡು ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಜಾಸೇವೆ’ ಇಲಾಖೆ ಸ್ಥಾಪನೆ ಮಾಡಿ ಜಾರಿಗೊಳಿಸಲಾಗಿದೆ. ಇಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸಕಾಲದಲ್ಲಿ ಇತ್ಯರ್ಥವಾಗಬೇಕು ಎಂದು ಮುಜರಾಯಿ, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ ಹೇಳಿದರು.
ಸಾರ್ವಜನಿಕರು ಸಲ್ಲಿಸುವ ಅರ್ಜಿಗಳು ಸ್ಥಳದಲ್ಲಿಯೇ ಪರಿಹರಿಸಬಹುದಾದ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣವೇ ಪರಿಹಾರ ನೀಡಲಾಗುವುದು. ಕಾನೂನಿನ ತೊಡಕುಗಳು ಅಥವಾ ಇತರೆ ನ್ಯೂನತೆಗಳಿದ್ದರೆ, ಅವುಗಳನ್ನು ಸರಿಪಡಿಸಲು ಸೂಕ್ತ ಸಮಯಾವಕಾಶ ನೀಡಿ ಪರಿಹಾರ ಕಲ್ಪಿಸಬೇಕು. ತಕ್ಷಣ ಪರಿಹರಿಸಲು ಸಾಧ್ಯವಾಗದ ಪ್ರಕರಣಗಳಲ್ಲಿ ಸೂಕ್ತ ಸಲಹೆ, ಮಾರ್ಗದರ್ಶನ ಹಾಗೂ ಮುಂದಿನ ಕ್ರಮದ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದರು.
ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವ ಅಥವಾ ಅರ್ಜಿಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ನೊಂದ ಜನರಿಗೆ ತಮ್ಮ ಸಮಸ್ಯೆಗೆ ಪರಿಹಾರ ದೊರೆತಿದೆ ಎಂಬ ಸಕಾರಾತ್ಮಕ ಸಂದೇಶ ಕಾರ್ಯಕ್ರಮದ ಮೂಲಕ ರವಾನೆಯಾಗಬೇಕು. ರೈತರು, ಬಡವರು ಹಾಗೂ ಕೂಲಿ ಕಾರ್ಮಿಕರು ತಮ್ಮ ಸಮಸ್ಯೆಗಳಿಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಸರ್ಕಾರವೇ ಜನರ ಮನೆಬಾಗಿಲಿಗೆ ತೆರಳಿ ಸಮಸ್ಯೆ ಆಲಿಸಿ, ಪರಿಹಾರ ಕಲ್ಪಿಸುವ ವಾತಾವರಣ ನಿರ್ಮಿಸುವುದು, ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಸ್ಥಳದಲ್ಲೇ ಹಲವು ಅಹವಾಲುಗಳಿಗೆ ಸ್ಪಂದನೆ : ಕಾರ್ಯಕ್ರಮದಲ್ಲಿ ಸಾರ್ವಜನಿಕರು ವಿವಿಧ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ಮನೆಯ ಪಕ್ಕದಲ್ಲೇ ವಿದ್ಯುತ್ ಪರಿವರ್ತಕ ಅಳವಡಿಸಿರುವುದರಿಂದ ತೊಂದರೆಯಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಮನವಿ ಸಲ್ಲಿಸಿದಾಗ, ಅದನ್ನು ಪರಿಶೀಲಿಸಿ ತೆರವುಗೊಳಿಸಲು ಸಚಿವರು ಸೂಚಿಸಿದರು.
ಹಿರಿಯರು ತಮಗಾಗಿ ವಿಲ್ ಬರೆದಿಡಲಾಗಿದೆ. ಅದರನ್ವಯ ಆಸ್ತಿ ಪರಭಾರೆ ಮಾಡಿ ಕೊಡದೇ ಕೆಲವು ವ್ಯಕ್ತಿಗಳ ಒತ್ತಡಕ್ಕೆ ಮಣಿದು ನಕಲು ಮಾಡಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ, ಹಾಗೂ ಆಸ್ತಿಯನ್ನು ಪರಭಾರೆ ಮಾಡಿಕೊಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಮತ್ತೊಂದು ಅಹವಾಲು ಸಲ್ಲಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ತ್ವರಿತವಾಗಿ ಪರಿಶೀಲಿಸಿ ಕಾನೂನು ಬದ್ದವಾಗಿದ್ದಲ್ಲಿ ಶೀಘ್ರವೇ ಸಮಸ್ಯೆ ಬಗೆಹರಿಸಬೇಕು. ಇಲ್ಲಾವಾದಲ್ಲಿ ಸೂಕ್ತ ಕಾರಣ ತಿಳಿಸಿ ಹಿಂಬರಹ ನೀಡಬೇಕು ಎಂದು ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿದರು.
ಬೆಣ್ಣಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷಚೇತನ ವ್ಯಕ್ತಿಯೊಬ್ಬರಿಗೆ ಪಿಂಚಣಿ ನೀಡಲಾಗುತ್ತಿತ್ತು. ಆದರೆ ಅಧಿಕಾರಿಗಳ ಎಡವಟ್ಟಿನಿಂದ ಬದುಕಿದ್ದರೂ ಮರಣ ಹೊಂದಿದ್ದಾರೆ ಎಂದು ತಮ್ಮ ಆನ್‌ಲೈನ್ ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಆದ್ದರಿಂದ ಅಂಗವಿಕಲರಾಗಿದ್ದರೂ ಪಿಂಚಣಿ ಬರುತ್ತಿಲ್ಲ ಎಂದು ಫಲಾನುಭವಿಯೊಬ್ಬರು ಅಳಲು ತೋಡಿಕೊಂಡರು. ಈ ಪ್ರಕರಣದಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು. ಇದೇ ವೇಳೆ, ತಮ್ಮ ಪೂರ್ವಜರ ಕಾಲದಿಂದ ಸುಮಾರು 70–80 ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಜಮೀನನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ ಎಂದು ರೈತರು ಅಹವಾಲು ಸಲ್ಲಿಸಿ, ಜಮೀನಿನ ಹಕ್ಕು ಹಾಗೂ ಸಮಸ್ಯೆಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ: ಹರಪನಹಳ್ಳಿ ತಾಲೂಕು ಮಟ್ಟದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಕಂದಾಯ, ತೋಟಗಾರಿಕೆ, ಕೃಷಿ, ಪಂಚಾಯತ ರಾಜ್ಯ ಮತ್ತು ಗ್ರಾಮೀಣಾಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಅರ್ಹ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ವಿತರಿಸಿದರು.
ಸಹಾಯ ಸಂಘಗಳ ಕರಕುಶಲ ವಸ್ತುಗಳ ಪ್ರದರ್ಶನ: ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮ ಸ್ಥಳದಲ್ಲಿ ಹರಪನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳ ಮಹಿಳಾ ಸ್ವ-ಸಹಾಯ ಸಂಘಗಳು ತಯಾರಿಸಿದ್ದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿತ್ತು. ಅನೇಕ ಮಹಿಳಾ ಸ್ವ-ಸಹಾಯ ಸಂಘಗಳು, ಸ್ತ್ರೀ ಶಕ್ತಿ ಗುಂಪುಗಳು ಭಾಗವಹಿಸಿದ್ದವು. ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರು ಸ್ವಾಗತಿಸಿದರು. ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿ, ಸ್ವೀಕೃತಿ ಪಡೆಯಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವರ್, ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಅನುಪಮ, ಉಪವಿಭಾಗಾಧಿಕಾರಿ ಟಿ.ಸುರೇಶ ಕುಮಾರ, ಹರಪನಹಳ್ಳಿ ತಹಶೀಲ್ದಾರ್ ಗಿರೀಶ ಬಾಬು, ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಕುಮಾರ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
- District Incharge Minister
- Gram Panchayat
- Harapanahalli
- Kavitha Mannikeri
- KS Basavantappa
- MP Latha Mallikarjun
- Prajaseva Andolana
- Public Grievance
- Revenue Department
- VIJAYANAGARA
- ಎಂ.ಪಿ.ಲತಾ ಮಲ್ಲಿಕಾರ್ಜುನ
- ಕಂದಾಯ ಇಲಾಖೆ
- ಕವಿತಾ ಮನ್ನಿಕೇರಿ
- ಕೆ ಎಸ್ ಬಸವಂತಪ್ಪ
- ಗ್ರಾಮ ಪಂಚಾಯತಿ
- ಜಿಲ್ಲಾ ಉಸ್ತುವಾರಿ ಸಚಿವರು
- ಪ್ರಜಾಸೇವ ಆಂದೋಲನ
- ವಿಜಯನಗರ
- ಸಾರ್ವಜನಿಕ ಅಹವಾಲು
- ಹರಪನಹಳ್ಳಿ
Leave a comment