ಹರಪನಹಳ್ಳಿ : ವಿಜಯನಗರ ಜಿಲ್ಲೆ ಕೊಟ್ಟೂರು ಗುರುಬಸವೇಶ್ವರ ರಥೋತ್ಸವಕ್ಕೆ ತೆರಳು ಆಗಮಿಸುವ ಕಾಲ್ನಡಿಗೆ ಪಾದಯಾತ್ರಿಗಳ ನೋವಿಗೆ ಇಲ್ಲಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ನಿಸ್ವಾರ್ಥ ಸೇವೆ ಸಲ್ಲಿಸಿದರು.
ವಾಸವಿ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದ ಭಕ್ತರು ಕಾಲು ನೋವಿನಿಂದ ಬಳಲುತ್ತಿದ್ದರು. ಇದಕ್ಕೆ ಅವರ ಪಾದಗಳಿಗೆ ಎಣ್ಣೆ ಹಾಕಿ ಮಸಾಜ್ ಮಾಡುವುದು, ರಕ್ತದ ಗಾಯಗಳಿಗೆ ನೋವು ನಿವಾರಕ ಔಷಧಿ ಹಚ್ಚಿ ಬ್ಯಾಂಡೆಜ್ ಕಟ್ಟುವ ಸೇವೆಯಲ್ಲಿ ಎಸ್.ಸಿ.ಎಸ್. ಔಷದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೇವೆ ಸಲ್ಲಿಸಿದರು. ಜೊತೆಗೆ ಆರ್ಯ ವೈಶ್ಯ ಮಂಡಳಿ ಸಮಾಜದಿಂದ 8ನೇ ವರ್ಷಗಳಿಂದ ಕಲ್ಯಾಣ ಮಂಟಪ ಆವರಣದಲ್ಲಿ ವಿಶ್ರಾಂತಿ, ಮಲಗಲು ವ್ಯವಸ್ಥೆ, ಊಟ ಹಾಗೂ ತಂಪು ಪಾನೀಯ ವಿತರಣೆ ಮಾಡಿದರು.
ಕೆಎಚ್‌ಬಿ ಬಡಾವಣೆಯ ಬಿಎಸ್‌ಎನ್‌ಎಲ್ ನಿವೃತ್ತ ವ್ಯವಸ್ಥಾಪಕ ಸುಧಾಕರ ಮತ್ತು ಅವರ ಕುಟುಂಬ 19ನೇ ವರ್ಷದ ಅನ್ನ ಸಂತರ್ಪಣೆ ಹಮ್ಮಿಕೊಂಡಿತ್ತು. ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಚಾಲನೆ ನೀಡಿ, ಆಧುನಿಕತೆ ಭರಾಟಯಲ್ಲಿ ಜನರು, ಭಕ್ತಿ, ಧ್ಯಾನಗಳಿಂದ ದೂರವಾಗುತ್ತಿದ್ದಾರೆ. ಪಾದಯಾತ್ರೆಯಿಂದ ಮನಸ್ಸು ಮತ್ತು ದೇಹ ಸದೃಢತೆ ಪಡೆಯುತ್ತದೆ ಎಂದರು. ಇಲ್ಲಿಗೆ ಸವಣೂರು, ಅತ್ತಿಗೇರಿ, ಬೆಲಮೂರಿ, ಹೊಸರತ್ತಿ, ಮನ್ನೂರು ಹಾಗೂ ಹಾವೇರಿ ಜಿಲ್ಲೆಯ ವಿವಿಧ ಭಾಗದ ಸಾವಿರಾರು ಭಕ್ತರು ಆಗಮಿಸಿದ್ದರು.
ಬೆಳಿಗ್ಗೆ ಮತ್ತು ಸಂಜೆಯ ತಂಪು ವಾತಾವರಣದಲ್ಲಿ ರಸ್ತೆಯಲ್ಲಿ ಹೆಚ್ಚಿನ ಪಾದಯಾತ್ರೆ ತೆರಳಿದರು. ಹಗಲು ತಾಪಮಾನ ಇದ್ದ ಕಾರಣ ತೆಗ್ಗಿನಮಠ, ಕೆಂಪಯ್ಯನ ಮಠ ಸೇರಿದಂತೆ ಅಲ್ಲಲ್ಲಿ ನಿರ್ಮಿಸಿದ್ದ ಟೆಂಟ್ ಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಹರಪನಹಳ್ಳಿ ನಗರದ ಜನತೆ ಸಂಜೆ 6.30ರಿಂದ ರತ್ರಿ 11 ಗಂಟೆ ತನಕ ಕೊಟ್ಟೂರಿನತ್ತ ಕಾಲ್ನಡಿಗೆ ತೆಳಲು ಸಿದ್ಧತೆ ನಡೆಸುತ್ತಿದ್ದರು.
ಹರಪನಹಳ್ಳಿಗೆ ನಂಟು-ಗುರುಬಸವೇಶ್ವರ ಜಾತ್ರೆ
15-16ನೇ ಶತಮಾನದಲ್ಲಿ ಲೋಕ ಕಲ್ಯಾಣಾರ್ಥ ಆಗಮಿಸಿದ ಪಂಚಗಣಾಧೀಶ್ವರರು ಐದು ಜನ ಸಹೋದರರು. ಪಂಚಗಣಾಧೀಶ್ವರರಾದ ಕೂಲಹಳ್ಳಿಯಲ್ಲಿ ಮದ್ದಾನೇಶ್ವರ, ಹರಪನಹಳ್ಳಿಯಲ್ಲಿ ಕೆಂಪೇಶ್ವರ, ಅರಸೀಕೆರೆಯಲ್ಲಿ ಕೋಲಶಾಂತೇಶ್ವರ ಒಟ್ಟು 3 ಜನ ಒಂದೇ ತಾಲ್ಲೂಕಿನಲ್ಲಿ ನೆಲೆಸಿದ್ದಾರೆ. ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿಯಲ್ಲಿ ತಿಪ್ಪೆರುದ್ರಸ್ವಾಮಿ, ಕೊಟ್ಟೂರಿನಲ್ಲಿ ಗುರುಬಸವೇಶ್ವರ ನೆಲೆಸಿ, ಅಪಾರ ಸಂಖ್ಯೆಯ ಭಕ್ತ ಸಮೂಹ ಹೊಂದಿದ್ದಾರೆ.
ಹರಪನಹಳ್ಳಿ ವಾಸವಿ ಕಲ್ಯಾಣ ಮಂಟಪದ ಆವರಣದಲ್ಲಿ ಔಷಧ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಾಲ್ನಡಿಗೆ ಭಕ್ತರಿಗೆ ಸೇವೆ ಮಾಡಿದರು.
Leave a comment