ಹರಪನಹಳ್ಳಿ : ಬಿತ್ತನೆ ಮಾಡಿ ಎದೆಯುದ್ದ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗಾಗಿ ಅಲ್ಲಾನ (ದೇವರ) ಮೊರೆ ಹೋಗಿರುವ ನಗರದ ಐದು ಕೇರಿ ಮುಸ್ಲೀಂ ದೈವಸ್ಥರು ಭಾನುವಾರ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು. ನಗರದ ತೆಕ್ಕದಗರಡಿಕೇರಿ, ಗುಂಡಿನಕೇರಿ, ಗಾಜಿಕೇರಿ, ಇಸ್ಲಾಂಪುರ, ಖಾಜಾರ ಓಣಿ ಹಾಗೂ ಬಂಗಿ ಮೊಹಲ್ಲಾ ಬಡಾವಣೆಯ ಮುಸ್ಲಿಂ ಧರ್ಮದ ಮೌಲ್ವಿಗಳ ಸಮ್ಮುಖದಲ್ಲಿ ನಗರದ ರೈಲ್ವೆ ನಿಲ್ದಾಣ ಸಮೀಪವಿರುವ ಖಬರಸ್ತಾನ ಖಾಲಿ ಪ್ರದೇಶದಲ್ಲಿ ನೂರಾರು ಜನರು, ಒಂದು ತಾಸು ಮಳೆರಾಯನ ಕೃಪೆಗೆ ಪ್ರಾರ್ಥಿಸಿದರು.
ನಿತ್ಯ ಮಸೀದಿಯಲ್ಲಿ ಮಾಡುವ ಪ್ರಾರ್ಥನೆಗಿಂತ ಇದು ಭಿನ್ನವಾಗಿತ್ತು. ಸಲಾತ್ ಆಲ್ ಇಸ್ತಿಸ್ಕಾ ಎಂದು ಕರೆಯಿಸಿಕೊಳ್ಳುವ ಈ ನಮಾಜ್ ನಲ್ಲಿ, ಮುಸ್ಲಿಂರು ತಮ್ಮ ಎರಡು ಹಸ್ತಗಳನ್ನು ಭೂಮಿಯತ್ತ ತಿರುಗಿಸಿ ಅಲ್ಲಾ ರ ಬಳಿ ಕ್ಷಮೆಯಾಚಿಸಿದ್ದು ವಿಶೇಷವಾಗಿತ್ತು. ‘ನಮ್ಮ ತಪ್ಪುಗಳಿಂದ ದೇವರು ಮಳೆಯನ್ನು ತಡೆ ಹಿಡಿಯುತ್ತಾನೆ. ದೇವರಲ್ಲಿ ಕ್ಷಮೆಯಾಚಿಸಿದರೆ ದೇವರು ಕರುಣೆ ತೋರಿ ಮಳೆ ಸುರಿಸುತ್ತಾನೆ, ಸಮೃದ್ದಿ ತಂದುಕೊಡುತ್ತಾನೆ.
ಈ ನಂಬಿಕೆಯಲ್ಲಿ ನಾವೆಲ್ಲರೂ ನಮ್ಮ ತಪ್ಪುಗಳನ್ನು ಮನ್ನಿಸಲು, ಕ್ಷಮೆಯಾಚಿಸಿ, ಅಲ್ಲಾ ದೇವರಿಗೆ ಪ್ರಾರ್ಥನೆ ಸಲ್ಲಿಸಿರುವುದಾಗಿ’ ನೇತೃತ್ವ ವಹಿಸಿದ್ದ ಮಸೀದಿಯ ಮೌಲ್ವಿಗಳು ಮಾಹಿತಿ ನೀಡಿದರು. ಮೌಲ್ವಿಗಳಾದ ಹೈದರ್ ಅಲಿ, ಅಮ್ಜದ್ ಅಲಿ, ಅಬುಸಾಲೇಹ, ಹಾಫೀಜ್ ಶಹೀದ್, ಗುಲಾಂ ರಬ್ಬಾನಿ ಅವರು ಮಾತನಾಡಿದರು. ದೈವಸ್ಥರಾದ ಬಿ.ಮೆಹಬೂಬ್ ಸಾಬ್, ಹೆಚ್.ಜಿಲಾನ್, ಎಸ್.ಹತೀಕ್, ಕೆ.ಇಮಾಮ್ ಸಾಬ್, ಎಸ್.ನೂರುಲ್ಲಾ, ಎ.ಫಾಜಿಲ್ಲಾ, ಎಸ್.ಕೆ.ರಫೀಕ್, ಎಸ್.ಕೆ.ಮುಸ್ತಾಫ, ಕೆ.ರಿಜ್ವಾನ್, ವಿ.ಶೌಕತ್ ಅಲಿ, ರಫೀಕ್, ಬುಡೇನ್ ಸಾಬ್. ಕೆ.ಮೆಹಬೂಬ್ ಸಾಬ್, ಎ.ಜಬಿವುಲ್ಲಾ, ಎ.ಜಾವಿದ್, ಜೆ.ನೌಷದ್ ಇತರರಿದ್ದರು.
Leave a comment