ಹರಪನಹಳ್ಳಿ: ತಾಲ್ಲೂಕಿನ ಅತೀ ದೊಡ್ಡ ಹೋಬಳಿಯಾದ ಅರಸೀಕೆರೆಯು ಮೂಲಭೂತ ಸೌಕರ್ಯಗಳಿಂದ ಸಂಪೂರ್ಣವಾಗಿ ವಂಚಿತವಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಭಾಗವನ್ನು ನಿರ್ಲಕ್ಷಿಸಿದ್ದಾರೆ ಎಂದು ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಕೆರೆಗುಡಿಹಳ್ಳಿ ಹಾಲೇಶ್ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಅರಸೀಕೆರೆ ಗ್ರಾಮದಲ್ಲಿ ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಎಐಎಸ್‌ಎಫ್ ಹಾಗೂ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ರ‍್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಶಾಸಕರ ವಿರುದ್ಧ ಆಕ್ರೋಶ:
“ನಿರಂತರ ಹೋರಾಟ ಮಾಡುತ್ತಾ ಬಂದರೂ ಜನಪ್ರತಿನಿಧಿಗಳು ಈ ಕಡೆ ಗಮನಹರಿಸಿಲ್ಲ. ನಮ್ಮ ಶಾಸಕರಾದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪನವರು ಕೂಡ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಶಾಸಕರು ಈ ಭಾಗಕ್ಕೆ ಭೇಟಿ ನೀಡಿದರೆ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟಿಸಲಾಗುವುದು. ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಾರದಿರುವುದು ಈ ಭಾಗದ ಜನರ ಬಗ್ಗೆ ಅವರಿಗಿರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ” ಎಂದು ಎಚ್ಚರಿಸಿದರು.
ಸಮಸ್ಯೆಗಳ ಮಹಾಪೂರ:
ರೈತ ಮುಖಂಡ ಬೂದಿಹಾಳು ಸಿದ್ದೇಶ್ ಮಾತನಾಡಿ, “ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ, ಕೂಡಲೇ ರಾಗಿ ಖರೀದಿ ಕೇಂದ್ರ ತೆರೆಯಬೇಕು. ಜಲ ಜೀವನ್ ಮಿಷನ್ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅರಸೀಕೆರೆಯಿಂದ ಉಚ್ಚಂಗಿದುರ್ಗದವರೆಗಿನ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಮೆಡಿಸಿನ್ ಕೊರತೆಯಿದ್ದು, ರಾತ್ರಿ ವೇಳೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ” ಎಂದು ದೂರಿದರು.
ದಲಿತ ಸಂಘರ್ಷ ಸಮಿತಿಯ ಕಬ್ಬಳ್ಳಿ ಮೈಲಪ್ಪ ಮಾತನಾಡಿ, “ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ವ್ಯವಸ್ಥೆಯಿಲ್ಲ ಹಾಗೂ ಹಾಸ್ಟೆಲ್ ಸೌಲಭ್ಯವಿಲ್ಲದೆ ಶೈಕ್ಷಣಿಕವಾಗಿ ಹಿಂದುಳಿಯುವಂತಾಗಿದೆ” ಎಂದರು.
ಅಧಿಕಾರಿಗಳ ಭರವಸೆ:
ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೈ.ಹೆಚ್. ಚಂದ್ರಶೇಖರ್ ಮಾತನಾಡಿ, “ವಸತಿ ರಹಿತರ ಬಗ್ಗೆ ಈಗಾಗಲೇ ಶಾಸಕರ ಗಮನಕ್ಕೆ ತರಲಾಗಿದೆ. 2024-25ನೇ ಸಾಲಿನಲ್ಲಿ 121 ಮನೆಗಳು ಮಂಜೂರಾಗಿದ್ದು, ಬಜೆಟ್ ಘೋಷಣೆಯಂತೆ ಹೆಚ್ಚಿನ ಮನೆಗಳು ಬರುವ ನಿರೀಕ್ಷೆಯಿದೆ. ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಯಿಂದ ಬಸ್ ನಿಲ್ದಾಣದವರೆಗೆ ಸುಡು ಬಿಸಿಲಿನಲ್ಲಿ ಭ್ರಷ್ಟ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ನಿಚ್ಚವ್ವನಹಳ್ಳಿ ಭೀಮಪ್ಪ, ಪುಣಭಘಟ್ಟ ಮಂಜು, ಡಿ.ಎಸ್.ಎಸ್. ಮುಖಂಡ ದೊಡ್ಡ ಬಸವರಾಜ್, ಎಐಎಸ್‌ಎಫ್ ಮುಖಂಡರಾದ ಡಿ.ಹೆಚ್. ಅರುಣ, ಆಕಾಶ್ ಗುರುಬಸವರಾಜ, ನಾಗರಾಜ್ ಗೌಡ, ಮಲ್ಲನಗೌಡ, ಸತ್ತೂರು ಮಹಾದೇವಪ್ಪ, ಹೆಚ್.ಹಾಲಪ್ಪ, ಅರಸಾಪುರದ ಕಾಳಪ್ಪ, ನಿರ್ಮಲ, ಪ್ರೇಮಾ, ವಿಶಾಲಮ್ಮ, ಹರಿಯಮ್ಮನಹಳ್ಳಿ ಬಸವರಾಜ್, ರಾಮಣ್ಣ, ಶಿವರಾಮ್, ರಂಗಪ್ಪ, ಕಾರ್ಯನಿರ್ವಾಹಣಾಧಿಕಾರಿ ವೈ. ಹೆಚ್. ಚಂದ್ರಶೇಖರ್, ಆರೋಗ್ಯ ಇಲಾಖೆಯ ಅಧಿಕಾರಿ ಪೃಥ್ವಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗಂಗಪ್ಪ, ಸಹಾಯಕ ಕಾರ್ಯ ಅಧೀಕ್ಷಕರು ಜಗದೀಶ್ ನಾಯಕ್,ರಾಘವೇಂದ್ರ, ಏಳು ಗ್ರಾಮ ಪಂಚಾಯಿತಿಗಳ ರೈತ ಮುಖಂಡರು, ಪ್ರಗತಿಪರ ಸಂಘಟನೆಕಾರರು, ಮಹಿಳೆಯರು ಹಾಗೂ ಕಾಲೇಜ್ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Leave a comment