ಹರಪನಹಳ್ಳಿ: ತಾಲ್ಲೂಕಿನಾದ್ಯಂತ ಗುರುವಾರ ಮಧ್ಯಾಹ್ನ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾದ ವರದಿಯಾಗಿದೆ.
ರಸ್ತೆ ತಡೆದ ಮರಗಳು: ಸಕಾಲಕ್ಕೆ ಸ್ಪಂದಿಸಿದ ಪೊಲೀಸ್
ಮಧ್ಯಾಹ್ನ 4:30ರ ಸುಮಾರಿಗೆ ಬೀಸಿದ ಭಾರಿ ಗಾಳಿಗೆ ನೀಲಗುಂದ ಕ್ರಾಸ್ ಬಳಿ ಎರಡು ಬೃಹತ್ ಮರದ ಕೊಂಬೆಗಳು ಮುರಿದು ಬಿದ್ದಿವೆ. ಇದರ ಪರಿಣಾಮವಾಗಿ ಪಕ್ಕದಲ್ಲಿದ್ದ ಎರಡು ವಿದ್ಯುತ್ ಕಂಬಗಳು ಜಖಂಗೊಂಡು, ತಂತಿಗಳು ರಸ್ತೆಗೆ ಹರಿದು ಬಿದ್ದಿದ್ದವು. ಇದರಿಂದಾಗಿ ಶಿವಮೊಗ್ಗ-ಹೊಸಪೇಟೆ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪಿಎಸ್ಐ ಶಂಭುಲಿಂಗ ಸಿ. ಹಿರೇಮಠ ಅವರು, ಜೆಸಿಬಿ ಹಾಗೂ ಸ್ಥಳೀಯರ ನೆರವಿನೊಂದಿಗೆ ಬಿದ್ದಿದ್ದ ಮರ ಮತ್ತು ಕಂಬಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ರೈತನ ಕಣ್ಣೀರು: 3 ಎಕರೆ ರಾಗಿ ಬೆಳೆ ನಾಶ
ಇತ್ತ ತಾಲ್ಲೂಕಿನ ಕಡತಿ ಗ್ರಾಮದಲ್ಲಿ ಬಿರುಗಾಳಿಯ ಆರ್ಭಟಕ್ಕೆ ರೈತ ಮಹೇಶಪ್ಪ ರಡ್ಡೇರ ಎಂಬುವವರಿಗೆ ಸೇರಿದ 3 ಎಕರೆ ರಾಗಿ ಬೆಳೆ ಸಂಪೂರ್ಣ ನೆಲಕಚ್ಚಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಕಷ್ಟಪಟ್ಟು ಬೆಳೆದ ಬೆಳೆ ಹಾನಿಯಾಗಿರುವುದರಿಂದ ರೈತ ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮಹೇಶಪ್ಪ ಮನವಿ ಮಾಡಿದ್ದಾರೆ.
Leave a comment