ವಿಜಯನಗರ : ಧೀನ ದಲಿತರ, ಹಿಂದುಳಿವದ ವರ್ಗ ಹಾಗೂ ಗ್ರಾಮೀಣ ಭಾಗದ ಜನರ ನೈಜ ಸಮಸ್ಯೆಗಳನ್ನು ಹತ್ತಿರದಿಂದ ಕಂಡು ಬೆಳೆದ ದಿವಂಗತ ಡಿ. ದೇವರಾಜ ಅರಸು ಅವರು ರಾಜ್ಯ ರಾಜಕೀಯ ಇತಿಹಾಸದಲ್ಲಿ ಸಾಮಾಜಿಕ ನ್ಯಾಯದ ಹರಿಕಾರರಾಗಿ ಗುರುತಿಸಿಕೊಂಡಿದ್ದಾರೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಫ್.ಟಿ.ಹಳ್ಳಿಕೇರಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಡಿ.ದೇವರಾಜ ಅರಸು ಅವರು ಕೇವಲ ರಾಜಕಾರಣಿಯಾಗಿರಲಿಲ್ಲ. ಬದಲಾಗಿ ಬಡವರು, ರೈತರು, ದಲಿತರು, ಹಿಂದುಳಿದವರು ಮತ್ತು ಅವಕಾಶ ವಂಚಿತರ ಬದುಕಿನಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ ಜನಪರ ನಾಯಕರಾಗಿದ್ದರು. ಹಿಂದುಳಿದ ವರ್ಗಗಳು, ರೈತರು ಹಾಗೂ ಅವಕಾಶ ವಂಚಿತ ಸಮುದಾಯಗಳ ಏಳಿಗೆಯನ್ನು ತಮ್ಮ ರಾಜಕೀಯ ಜೀವನದ ಪ್ರಮುಖ ಉದ್ದೇಶವನ್ನಾಗಿಸಿಕೊಂಡ ಅವರು, 1952ರಲ್ಲಿ ಹುಣಸೂರು ಕ್ಷೇತ್ರದಿಂದ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ದೇವರಾಜ ಅರಸು ಅವರು ಸಕ್ರಿಯ ರಾಜಕೀಯ ಪ್ರವೇಶ ಮಾಡಿದರು. 1972ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಿಗೆ ನಾಂದಿ ಹಾಡಿದರು.
ದೇವರಾಜ ಅರಸು ಅವರು ದೀನದಲಿತರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ವಿಶೇಷ ಆದ್ಯತೆ ಹಾಗೂ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಿದ್ಯಾರ್ಥಿ ನಿಲಯ, ವಸತಿ, ಊಟ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನೀತಿಗಳಿಗೆ ಉತ್ತೇಜನ ನೀಡಿದವರು. 1973ರ ನವೆಂಬರ್ 1ರಂದು ಮೈಸೂರು ರಾಜ್ಯವನ್ನು ಅಧಿಕೃತವಾಗಿ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಅದಲ್ಲದೇ ಉಳುವವನೇ ಭೂಮಿ ಒಡೆಯ ಎಂಬ ಭೂ ಸುಧಾರಣಾ ಕಾಯ್ದೆ ಜಾರಿಗೊಳಿಸಿ ರಾಜ್ಯದಲ್ಲಿ ಸುಮಾರು 4ಲಕ್ಷ ಗೇಣಿದಾರರಿಗೆ ಭೂ ಒಡೆತನ ನೀಡಿದ ಧೀಮಂತ ನಾಯಕ ಎಂದರು.
ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಮಾತನಾಡಿ, ದಿವಂಗತ ದೇವರಾಜ ಅರಸು ಅವರು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಶೋಷಿತ ವರ್ಗಗಳ ಧ್ವನಿಗೆ ಆಡಳಿತದಲ್ಲಿ ಹೊಸ ಶಕ್ತಿ ನೀಡಿದ ದೂರದೃಷ್ಟಿಯ ನಾಯಕರು. ಅವರ ಜನಪರ ಚಿಂತನೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳು ಇಂದಿಗೂ ನಮಗೆ ದಾರಿದೀಪವಾಗಿವೆ ಎಂದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಕೆ.ಶಿವಮೂರ್ತಿ ಮಾತನಾಡಿ, ಸಾಮಾಜಿಕ ನ್ಯಾಯ, ಸಮ ಸಮಾಜ ನಿರ್ಮಾಣದ ಕನಸು ಕಂಡ ಧೀಮಂತ ವ್ಯಕ್ತಿ ಡಿ.ದೇವರಾಜ ಅರಸು. ಹಿಂದುಳಿದ ವರ್ಗಗಳ ಹಾಗೂ ಬಡವರ ಕಲ್ಯಾಣಕ್ಕೆ ಶ್ರಮಿಸಿದ ಮಹಾನ್ ನಾಯಕ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷಗಳಲ್ಲಿ ಜಿಲ್ಲೆಗೆ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಿ.ಶಶಿಕಲಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಇದ್ದರು.
Leave a comment