ಹರಪನಹಳ್ಳಿ: ತಾಲೂಕಿನ ಬಂಜಾರರು ವರದಕ್ಷಿಣೆ ಹಠಾವೋ-ತಾಂಡ ಬಚಾವೋ ಧ್ಯೇಯಗೆ ಒಗ್ಗೂಡಲು ಸಮುದಾಯದ ಮುಖಂಡರು ಕರೆ ನೀಡಿದರು. ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದ ಹಾಲಮ್ಮ ತೋಪಿನ ಆಂಜನೇಯ ದೇವಸ್ಥಾನ ಆವರಣದಲ್ಲಿ ಸೋಮವಾರ ಗೋರ್ ಸಿಕ್ವಾಡಿ ಸಮಿತಿ ಹಮ್ಮಿಕೊಂಡಿದ್ದ ಬಂಜಾರ ವರದಕ್ಷಿಣೆ ಹಾಗೂ ಸಾಮಾಜಿಕ ಸಮಸ್ಯೆಗಳ ಜಾಗೃತಿ ಸಭೆಯಲ್ಲಿ ಕರೆ ನೀಡಿದರು.
ಮುಖಂಡ ಡಿಳ್ಯಾನಾಯ್ಕ ಮಾತನಾಡಿ ಲಂಬಾಣಿ ಸಮುದಾಯ ಇಂದಿಗೂ ಆರ್ಥಿಕವಾಗಿ ಜರ್ಜರಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವರದಕ್ಷಿಣೆ ಪೀಡಿಗು ಅನೇಕ ಕುಟುಂಬಗಳನ್ನು ಬೀದಿಗೆ ತಳ್ಳಿದೆ. ಪಿಡಗನ್ನು ಸಂಪೂರ್ಣ ನಿಷೇಧಿಸಲು ವರದಕ್ಷಿಣೆ ಕೊಡುವುದು ಮತ್ತು ಪಡೆಯುವುದು ನಿಲ್ಲಿಸಲು ಕಂಕಣಬದ್ಧರಾಗಬೇಕು ಎಂದರು.
ವರದಕ್ಷಿಣೆ ಪಿಡುಗು ಕೊನೆಗಾಣಿಸಲು ಅರಸೀಕೆರೆ, ಹಲುವಾಗಲು, ಚಿಗಟೇರಿ, ಕಸಬಾ ಹೋಬಳಿಯ ಎಲ್ಲಾ ತಾಂಡಗಳಿಗೆ ಭೇಟಿ ನೀಡಿ, ಜನ ಜಾಗೃತಿ ಸಭೆ ನಡೆಸಲಾಗಿದೆ. ಎಲ್ಲಾ ತಾಂಡದ ಹಿರಿಯರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ವರದಕ್ಷಿಣೆ ಮುಕ್ತ ಬಂಜಾರರು ಎಂಬ ಹಿರಿಮೆಗೆ ಪಾತ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖಂಡ ಮಹಾಂತೇಶ್ ನಾಯ್ಕ ಮಾತನಾಡಿ, ‘ಸಮಾಜದ ಅಸ್ತಿತ್ವ ಉಳಿವಿಗೆ ಹೋರಾಟ ಅನಿವಾರ್ಯವಾಗಿದೆ. ಸರ್ಕಾರ ಕೈಗೊಂಡಿರುವ ಮೀಸಲಾತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ ಅವರು, ‘ ಸಮುದಾಯದ ಪ್ರತಿಯೊಬ್ಬರು ಪಕ್ಷಭೇದ ಮರೆತು, ಮೀಸಲಾತಿ ವಿರುದ್ಧ ಧ್ವನಿ ಎತ್ತಬೇಕು. ವರದಕ್ಷಿಣೆ ಬಂಜಾರ ಸಂಸ್ಕೃತಿ ಅಲ್ಲ. ಹಿಂದೆ ಸಮಾಜದಲ್ಲಿ ವರದಕ್ಷಿಣೆ ಇರಲಿಲ್ಲ. ಅನ್ಯ ಸಮಾಜದ ಪ್ರಭಾವದಿಂದ ಪಿಡುಗು ಸಮಾಜವನ್ನು ಬಾಧಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಹನುಮಂತನಾಯ್ಕ, ನಂದಿಕಂಬ ಚಂದ್ರನಾಯ್ಕ, ಶಿವಾಜಿನಾಯ್ಕ್, ಯಶೋಧರ ನಾಯ್ಕ, ಶಂಕರ ನಾಯ್ಕ, ಕುಬೇರ ನಾಯ್ಕ, ಶೆಟ್ಟಿನಾಯ್ಕ, ವೆಂಕಟೇಶ್ ನಾಯ್ಕ, ಹನುಮಂತ ನಾಯ್ಕ, ಸಂತೋಷ ನಾಯ್ಕ, ಸುರೇಶ್, ಭೋಜ್ಯನಾಯ್ಕ, ದಿದ್ಗಿ ಚಂದ್ರನಾಯ್ಕ, ಸೇರಿದಂತೆ ಜಾಗೃತ ಪಂಚಾಯತಿಯಲ್ಲಿ ಅರಸೀಕೆರೆ ಹೋಬಳಿಯ ವಿವಿಧ ತಾಂಡಾಗಳಿಂದ ಬಂಜಾರ ಸಮಾಜದ ಜನರು ಪಾಲ್ಗೊಂಡಿದ್ದರು.
Leave a comment