ಹರಪನಹಳ್ಳಿ: ಪಟ್ಟಣದ ಭಾರತೀಯ ಜನತಾ ಪಕ್ಷ (ಬಿಜೆಪಿ) ನಮೋ ಕಾಯಕ ಭವನದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ, ಪದ್ಮಭೂಷಣ ಪುರಸ್ಕೃತೆ ಶ್ರೀಮತಿ ಎಸ್. ಜಾನಕಿ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಒಂದು ನಿಮಿಷ ಮೌನ ಆಚರಿಸಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಭಾರತೀಯ ಚಿತ್ರರಂಗಕ್ಕೆ ಎಸ್. ಜಾನಕಿ ಅವರು ನೀಡಿದ ಗಾಯನ ಸೇವೆ ಅಪಾರವಾಗಿದ್ದು, ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಸಾವಿರಾರು ಅಮರ ಗೀತೆಗಳನ್ನು ಹಾಡುವ ಮೂಲಕ ಸಂಗೀತ ಲೋಕದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರ ನಿಧನದಿಂದ ದೇಶದ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಮೈದೂರು ಮಲ್ಲಿಕಾರ್ಜುನ್, ರಾಜ್ಯ ಎಸ್ಸಿ ಮೋರ್ಚಾ ಡಾ.ರಮೇಶಕುಮಾರ್, ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಕಣವಿಹಳ್ಳಿ ಮಂಜುನಾಥ, ರಾಜ್ಯ ಸಹಕಾರ ಪ್ರಕೋಷ್ಟಕ ಓಂಕಾರಗೌಡ, ಮುಖಂಡರಾದ ವಕೀಲರಾದ ಲಿಂಗಾನಂದ, ದೇವರಾಜ್, ಸುರೇಶ್, ಅಂಜಿನಪ್ಪ ಹಾಗೂ ಕಾರ್ಯಕರ್ತರು ಮತ್ತು ಸಂಗೀತ ಕಲಾಭಿಮಾನಿಗಳು ಉಪಸ್ಥಿತರಿದ್ದರು.
Leave a comment