ಹರಪನಹಳ್ಳಿ : ತಾವು ಸಂಪಾದಿಸಿದ ಆದಾಯದಲ್ಲಿ ಸ್ವಲ್ಪ ಹಣ ಕನ್ನಡ ಸೇವೆಗಾಗಿ ಮೀಸಲಿಟ್ಟು ಕೆಲಸ ಮಾಡುತ್ತಿರುವ ದಂಪತಿ ಕಾರ್ಯ ಶ್ಲಾಘನೀಯ ಎಂದು ಜೆಸಿಐ ಅಲುಮ್ನಿ ಕ್ಲಬ್ ವಲಯ 24ರ ಅಧ್ಯಕ್ಷ ಎನ್.ಮಹಾಬಲೇಶ್ವರ ದಿವಾಕರ ಅಭಿಪ್ರಾಯಪಟ್ಟರು.
ನಗರದ ಬಸಮ್ಮ ಕಲಾಮಂದಿರದಲ್ಲಿ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ, ಜೆಸಿಐ ಅಲುಮ್ನಿ ಕ್ಲಬ್ ಭಾನುವಾರ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕನ್ನಡ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹಣವಿದ್ದವರು ಹೆಚ್ಚು ಜನ ಇದ್ದಾರೆ, ಕನ್ನಡಕ್ಕಾಗಿ ಕೆಲಸ ಮಾಡುವವರ ಸಂಖ್ಯೆ ವಿರಳ. ಇಂತಹ ಸಂದರ್ಭದಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಶ್ರಮಿಸುವ ಸಂಘಗಳನ್ನು ಪ್ರತಿಯೊಬ್ಬರು ಬೆಂಬಲಿಸುವ ಅಗತ್ಯವಿದೆ, ಸರ್ಕಾರವೂ ಇಂತಹ ಸಂಸ್ಥೆ ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದರು.
ಕನ್ನಡ ಉಪನ್ಯಾಸಕ ಎಚ್.ಮಲ್ಲಿಕಾರ್ಜುನ ಮಾತನಾಡಿ, ಸರ್ಕಾರದಿಂದ ಯಾವುದೇ ಅನುದಾನ ಪಡೆಯದೇ 27 ವರ್ಷಗಳಿಂದ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಇಂತಹ ಅನೇಕ ಕನ್ನಡ ಪರವಾದ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆ ಏರ್ಪಡಿಸುತ್ತಿದೆ. ವಿದ್ಯಾರ್ಥಿಗಳು, ಪೋಷಕರು ಇದನ್ನು ಸದ್ವಿನಿಯೋಗ ಮಾಡಿಕೊಳ್ಳಿ ಎಂದು ಹೇಳಿದರು.
ಪತ್ರಕರ್ತ ಡಿ. ವಿಶ್ವನಾಥ ಮಾತನಾಡಿ, ಸಮಾಜಕ್ಕೆ ಮಾದರಿಯಾಗುವಂತಹ ಹತ್ತು-ಹಲವು ಜನಪರ ಕಾರ್ಯಗಳು ಈ ವೇದಿಕೆಯಿಂದ ನಿರಂತರವಾಗಿ ನಡೆಯುತ್ತಾ ಬಂದಿವೆ. ಸಂಸ್ಥೆಯ ಈ ಸತ್ಕಾರ್ಯಗಳು ಮುಂದಿನ ದಿನಗಳಲ್ಲೂ ಯಶಸ್ವಿಯಾಗಿ ಸಾಗಲಿ ಎಂದು ಹೇಳಿದರು.
ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಡಿ.ಅರ್ಚನಾ, ಸಂಗೀತ, ಸಂಗೀತಾ, ಶೀಗನಹಳ್ಳಿ ಬಿಂದು, ಕೆ.ಜಿ.ಪ್ರತಿಭಾ, ಜಿ.ಸುಶೀಲಾ, ನಿಕೇತನ, ಭಾರ್ಗವಿ, ಎಸ್.ಎಂ.ರಕ್ಷಿತಾ, ಜಿ.ಸುಶೀಲಾ ಅವರಿಗೆ ರಾಜ್ಯಮಟ್ಟದ ‘ಕನ್ನಡ ರತ್ನ ಪ್ರಶಸ್ತಿ’, ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಒಟ್ಟು 300 ಜನ ವಿದ್ಯಾರ್ಥಿಗಳಿಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನವಜ್ಯೋತಿ ಸಂಸ್ಥೆ ಅಧ್ಯಕ್ಷೆ ಸಪ್ನ ಮಲ್ಲಿಕಾರ್ಜುನ ಅಧ್ಯಕ್ಷತೆವಹಿಸಿದ್ದರು. ಮುಖಂಡರಾದ ಎ.ಎಚ್.ಪಂಪಣ್ಣ, ಗುಂಡಗತ್ತಿ ಕೊಟ್ರಪ್ಪ , ನೂರುದ್ದಿನ್, ಇರ್ಷಾದ್ ಭಾಷ ಮಾತನಾಡಿದರು. ಕೆ.ಪ್ರಭಾಕರ, ಪಿ.ಟಿ.ನಾಗರಾಜ್, ತಿಲಕ್ ಇತರರಿದ್ದರು.
Leave a comment