ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ಕೊನೆಗೂ ತೆರೆಬಿದ್ದಿದ್ದು, ಬಿಡುಗಡೆಯಾಗಿರುವ ಪಟ್ಟಿಯ ವಿವರಗಳು ಇಲ್ಲಿವೆ. ಕಾಂಗ್ರೆಸ್ ಹೈಕಮಾಂಡ್ 20 ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಇಂದು ಸಂಜೆ ರಾಜಭವನದ ಗಾಜಿನ ಮನೆಯಲ್ಲಿ ಅದ್ಧೂರಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಇದಕ್ಕಾಗಿ ರಾಜಭವನದಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜೂನ್ 3, 2026ರಂದು ಅಧಿಕಾರ ವಹಿಸಿಕೊಂಡ ಎರಡು ತಿಂಗಳ ಬಳಿಕ ಈ ಬಹುನಿರೀಕ್ಷಿತ ಸಂಪುಟ ವಿಸ್ತರಣೆ ನಡೆಯುತ್ತಿದೆ. ಡಿಕೆಶಿ ಸಂಪುಟ ಸೇರುವ ಅದೃಷ್ಟಶಾಲಿಗಳು ಯಾರು ಎಂಬ ಲೆಕ್ಕಾಚಾರಗಳಿಗೆ ಇಂದು ಸಂಜೆ ಅಧಿಕೃತವಾಗಿ ತೆರೆಬೀಳಲಿದೆ. ಕಳೆದ ಎರಡು ತಿಂಗಳಿಂದ ನಡೆದಿದ್ದ ಬಿರುಸಿನ ರಾಜಕೀಯ ಲೆಕ್ಕಾಚಾರ, ಲಾಬಿ ಹಾಗೂ ಸುದೀರ್ಘ ಕಸರತ್ತುಗಳ ಬಳಿಕ ಹೈಕಮಾಂಡ್ ಅಂತಿಮ ಪಟ್ಟಿಗೆ ಮುದ್ರೆ ಒತ್ತಿದೆ.
ಹೈಕಮಾಂಡ್ ಸಭೆಯಲ್ಲಿ ಅಂತಿಮಗೊಂಡ ಪಟ್ಟಿ
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹಿರಿಯ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಖಾಲಿಯಿರುವ 20 ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದ್ದು, ಜಾತಿ, ಧರ್ಮ, ಪ್ರಾದೇಶಿಕ ಅಸಮತೋಲನ ನಿವಾರಣೆ ಹಾಗೂ ಸಾಮಾಜಿಕ ನ್ಯಾಯದ ಸಮೀಕರಣಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ ಪಟ್ಟಿ ಸಿದ್ಧಪಡಿಸಲಾಗಿದೆ. ವಿಶೇಷವೆಂದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಆರು ಮಂದಿ ಹಿರಿಯ ನಾಯಕರಿಗೆ ಮರಳಿ ಅವಕಾಶ ಕಲ್ಪಿಸಲಾಗಿದೆ.
ಸಂಪುಟ ಸೇರಲಿರುವ 20 ನೂತನ ಸಚಿವರು
- ಪಿ.ಎಂ. ನರೇಂದ್ರಸ್ವಾಮಿ
- ಶಿವರಾಜ್ ತಂಗಡಗಿ
- ರುದ್ರಪ್ಪ ಲಮಾಣಿ
- ಕೆ.ಎಸ್. ಬಸವಂತಪ್ಪ
- ಬಿ. ನಾಗೇಂದ್ರ
- ಟಿ. ರಘುಮೂರ್ತಿ
- ಜಮೀರ್ ಅಹಮದ್ ಖಾನ್
- ರಿಜ್ವಾನ್ ಅರ್ಷದ್
- ಸಂತೋಷ್ ಲಾಡ್
- ಮಧು ಬಂಗಾರಪ್ಪ
- ಸಿ. ಪುಟ್ಟರಂಗಶೆಟ್ಟಿ
- ಎಸ್.ಎಸ್,ಮಲ್ಲಿಕಾರ್ಜುನ
- ಡಾ. ಅಜಯ್ ಸಿಂಗ್
- ಎನ್. ಚಲುವರಾಯಸ್ವಾಮಿ
- ಕೆ.ಎಂ. ಶಿವಲಿಂಗೇಗೌಡ
- ಎಚ್.ಸಿ. ಬಾಲಕೃಷ್ಣ
- ಗಾಯತ್ರಿ ಶಾಂತೇಗೌಡ
- ಬಸವರಾಜ ರಾಯರೆಡ್ಡಿ
- ವಿಜಯಾನಂದ ಕಾಶಪ್ಪನವರ್
- ಲಕ್ಷ್ಮಣ ಸವದಿ

ಸಚಿವರ ಪಟ್ಟಿ ಅಂತಿಮಗೊಂಡಿದ್ದರೂ, ಯಾರು ಯಾವ ಖಾತೆ ನಿಭಾಯಿಸಲಿದ್ದಾರೆ ಎಂಬ ಕುತೂಹಲ ಮಾತ್ರ ಇನ್ನೂ ಹಾಗೇ ಉಳಿದಿದೆ. ಇಂದು ಸಂಜೆ 4 ಗಂಟೆಗೆ ನಡೆಯಲಿರುವ ಸಮಾರಂಭದ ಬಳಿಕ ಖಾತೆ ಹಂಚಿಕೆಯ ಚಿತ್ರಣವೂ ಸ್ಪಷ್ಟವಾಗುವ ನಿರೀಕ್ಷೆಯಿದೆ.
Leave a comment