ವಿಜಯನಗರ(ಹೊಸಪೇಟೆ) : ಕೆಂಪೇಗೌಡರು ಕೇವಲ ಬೆಂಗಳೂರಿನ ನಿರ್ಮಾತೃ ಮಾತ್ರವಲ್ಲ, ಉತ್ತಮ ಆಡಳಿತ, ಕೃಷಿ, ನೀರಾವರಿ ಹಾಗೂ ನಗರ ಯೋಜನೆಗೆ ಅಡಿಪಾಯ ಹಾಕಿದ ದೂರದೃಷ್ಟಿಯ ನಾಯಕ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸಾಗರಗೌಡ ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಬುಧವಾರ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಾಡ ಪ್ರಭು ಕೆಂಪೇಗೌಡ ಜಯಂತೋತ್ಸವ ಕಾರ್ಯಕ್ರಮದಲ್ಲಿ ಕೆಂಪೇಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಆಡಳಿತದಿಂದ ಬಂದ ತೆರಿಗೆಯನ್ನು ನಾಡು ಕಟ್ಟುವ ಮೂಲಕ ಅಭಿವೃದ್ಧಿಯನ್ನು ಸಾಧಿಸಿದವರು. ಸುಮಾರು 16ನೇ ಶತಮಾನದಲ್ಲಿ ಕೆಂಪೇಗೌಡರು ಬೆಂಗಳೂರನ್ನು ಯೋಜಿತ ನಗರವಾಗಿ ನಿರ್ಮಿಸಿ, ನಗರದ ನಾಲ್ಕು ದಿಕ್ಕುಗಳಲ್ಲಿ ಗೋಪುರಗಳನ್ನು ನಿರ್ಮಿಸಿ ನಗರದ ಗಡಿಯನ್ನು ಗುರುತಿಸಿದರು. ಕೆರೆಗಳು, ದೇವಾಲಯಗಳು, ರಸ್ತೆಗಳು ಹಾಗೂ ಮಾರುಕಟ್ಟೆಗಳ ನಿರ್ಮಾಣಕ್ಕೆ ವಿಶೇಷ ಆದ್ಯತೆ ನೀಡಿದ್ದರು. ಒಕ್ಕಲಿಗ ಸಮುದಾಯದ ಏಳಿಗೆಗೆ ಅಷ್ಟೇ ಸೀಮಿತವಾಗಿರದೇ ಸಮ ಸಮಾಜದ ಕನಸು ಕಂಡ ಧೀಮಂತ ನಾಯಕ ಕೆಂಪೇಗೌಡ. ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣ ದೇವರಾಯನ ಕಾಲದ ಆಡಳಿತದಿಂದ ಪ್ರಭಾವಿತರಾಗಿದ್ದ ಅವರ ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ಬೆಂಗಳೂರು ನಗರ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ದೂರದೃಷ್ಠಿಯ ನಾಯಕ ಕೆಂಪೇಗೌಡರು. ಅವರು ಇಂದು ಊಹೆಗೂ ಮೀರಿ ಬೆಳೆಯುತ್ತಿದೆ. ಅವರ ತತ್ವಾದರ್ಶ, ನಾಯಕತ್ವ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಕೊಂಡು ನಾಡಿನ ಪ್ರಗತಿ ಮತ್ತು ಸಮೃದ್ಧಿಗಾಗಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ, ಸಮುದಾಯದ ಮುಖಂಡರಾದನಾಗರಾಜ್ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.
Leave a comment