ಕೂಡ್ಲಿಗಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಜಾಸೇವೆ’ ಅಭಿಯಾನಕ್ಕೆ ಸೆಪ್ಟೆಂಬರ್ 5 ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಅಧಿಕೃತವಾಗಿ ಚಾಲನೆ ದೊರೆಯಲಿದೆ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ ತಿಳಿಸಿದರು. ಸೆಪ್ಟೆಂಬರ್ 01ರಂದು ಕೂಡ್ಲಿಗಿಯಲ್ಲಿ ನಡೆದ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸರ್ಕಾರವೇ ಜನರ ಮನೆ ಬಾಗಿಲಿಗೆ : ಪ್ರಜಾಸೇವೆಯು ಕೇವಲ ಪ್ರಚಾರಕ್ಕಾಗಿ ಮಾಡುವ ಕೆಲಸವಲ್ಲ. ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯೇ ಜನರ ಮನೆ ಬಾಗಿಲಿಗೆ ತೆರಳಿ ಸೌಲಭ್ಯಗಳನ್ನು ಒದಗಿಸುವ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ವಿನೂತನ ವ್ಯವಸ್ಥೆಯಾಗಿದೆ.
ಪ್ರತ್ಯೇಕ ಆಡಳಿತ ವ್ಯವಸ್ಥೆ : ಈ ಯೋಜನೆಯ ಅನುಷ್ಠಾನಕ್ಕಾಗಿ ಪ್ರಧಾನ ಕಾರ್ಯದರ್ಶಿಗಳಿಂದ ಹಿಡಿದು, ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದವರೆಗೆ ಪ್ರತ್ಯೇಕ ಕಾರ್ಯವ್ಯವಸ್ಥೆ ಮತ್ತು ಸಚಿವಾಲಯವನ್ನು ರೂಪಿಸಲಾಗಿದೆ ಎಂದರು.
ಕೂಡ್ಲಿಗಿಯಲ್ಲಿ ನಡೆಯುವ ಈ ಐತಿಹಾಸಿಕ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಚಾಲನೆ ನೀಡುವರು, ಜೊತೆಗೆ ಕ್ಯಾಬಿನೆಟ್‌ನ ಅನೇಕ ಸಚಿವರು ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಸ್ಥಳದಲ್ಲೇ ಅರ್ಜಿ ವಿಲೇವಾರಿ: ಸೆಪ್ಟೆಂಬರ್ 5 ರಂದು ಬೆಳಗ್ಗೆ 9 ಗಂಟೆಯಿAದಲೇ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಪಂಚಾಯಿತಿ ಮತ್ತು ಇಲಾಖಾವಾರು ಪ್ರತ್ಯೇಕ ಕೌಂಟರ್‌ಗಳನ್ನು ತೆರೆದು ಸ್ಥಳದಲ್ಲೇ ಅರ್ಜಿ ಸ್ವೀಕರಿಸಿ, ತ್ವರಿತವಾಗಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಹಿಂದುಳಿದ ಪ್ರದೇಶಕ್ಕೆ ಆದ್ಯತೆ: ಕೂಡ್ಲಿಗಿ ತಾಲೂಕು ಕೂಲಿ ಕಾರ್ಮಿಕರು ಹಾಗೂ ರೈತರಿರುವ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿಂದಲೇ ರಾಜ್ಯಮಟ್ಟದ ಯೋಜನೆಗೆ ಚಾಲನೆ ಸಿಗುತ್ತಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಈ ಭಾಗದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ತರಲಾಗುವುದು ಎಂದರು. ಸಭೆಯಲ್ಲಿ ಸ್ಥಳೀಯ ಶಾಸಕ ಡಾ:ಎನ್.ಟಿ.ಶ್ರೀನಿವಾಸ್, ವಿಜಯನಗರ ಶಾಸಕರಾದ ಹೆಚ್.ಆರ್.ಗವಿಯಪ್ಪ, ಹರಪನಹಳ್ಳಿ
ಶಾಸಕರಾದ ಲತಾ ಮಲ್ಲಿಕಾರ್ಜುನ್, ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಕುರಿ ಶಿವಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯತ್ ಸಿಇಓ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Leave a comment