ಹರಪನಹಳ್ಳಿ : ಶಾಲಾ-ಕಾಲೇಜುಗಳು ಆರಂಭವಾದರೂ ಹಾಸ್ಟೆಲ್‌ಗಳು ತೆರೆಯದ ಕಾರಣ ಗ್ರಾಮೀಣ ವಿದ್ಯಾರ್ಥಿಗಳು ಪರದಾಡುತ್ತಿದ್ದು, ತಕ್ಷಣವೇ ವಸತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ತಾಲ್ಲೂಕು ಸಮಿತಿಯು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ಪ್ರಸಕ್ತ ಸಾಲಿನ ತರಗತಿಗಳು ಆರಂಭವಾಗಿದ್ದರೂ ವಸತಿ ನಿಲಯಗಳ ಆಯ್ಕೆ ಪಟ್ಟಿ ಬಿಡುಗಡೆ ವಿಳಂಬವಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳು ನಿತ್ಯ ದೂರದ ಊರುಗಳಿಂದ ಕಾಲೇಜುಗಳಿಗೆ ಬರಲಾಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅರ್ಜಿ ಸಲ್ಲಿಸಿದ ಎಲ್ಲಾ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮೆರಿಟ್ ಬದಿಗಿಟ್ಟು ವಸತಿ ನೀಡಬೇಕು.
ಮಾಸಿಕ ಆಹಾರ ಭತ್ಯೆಯನ್ನು ಕನಿಷ್ಠ ₹4,500 ಕ್ಕೆ ಹೆಚ್ಚಿಸಬೇಕು ಹಾಗೂ ಹಾಸ್ಟೆಲ್‌ಗಳಲ್ಲಿ ಕಂಪ್ಯೂಟರ್ ಮತ್ತು ಉಚಿತ ವೈ-ಫೈ ಸೌಲಭ್ಯ ಕಲ್ಪಿಸಬೇಕು ಎಂದು ಜಿಲ್ಲಾ ಕಾರ್ಯದರ್ಶಿ ಶಿವಾರೆಡ್ಡಿ ಹಾಗೂ ತಾಲ್ಲೂಕು ಸಂಚಾಲಕ ಮಲ್ಲಿಕಾರ್ಜುನ ಒತ್ತಾಯಿಸಿದ್ದಾರೆ. ಸಂಜುನಾಯ್ಕ, ಗಣೇಶ್, ಅಂಜು, ಸಂಜು, ಸುದೀಪ, ಬಸವರಾಜ್, ಇರ್ಫಾನ್, ಪ್ರಕಾಶ್ , ಬೋವಿ ಅಂಜಿನಪ್ಪ, ಕೆ. ಹನುಮಂತ ಇತರರಿದ್ದರು.
Leave a comment