Home ಕ್ರೀಡೆ ಕೆಂಪು ಮಣ್ಣಿನ ಕಣದಲ್ಲಿ ಪೈಲ್ವಾನರ ಜಿದ್ದಾಜಿದ್ದಿ
ಕ್ರೀಡೆಮನರಂಜನೆಸುದ್ದಿಗಳು

ಕೆಂಪು ಮಣ್ಣಿನ ಕಣದಲ್ಲಿ ಪೈಲ್ವಾನರ ಜಿದ್ದಾಜಿದ್ದಿ

Share
Share

ವಿಜಯನಗರ:
ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವಂತೆ, ಹಂಪಿಯ ಹೊಸಮಲಪನಗುಡಿಯ ವಿದ್ಯಾರಣ್ಯ ಪೀಠದ ಮೈದಾನದಲ್ಲಿ ಶನಿವಾರ ಸಾಂಪ್ರದಾಯಿಕ ಮಣ್ಣಿನ ಕುಸ್ತಿ ಪಂದ್ಯಾವಳಿ ಪ್ರೇಕ್ಷಕರ ಮೈನವಿರೇಳಿಸಿತು.
ಸುತ್ತಲೂ ಹೂವುಗಳಿಂದ ಅಲಂಕೃತಗೊಂಡಿದ್ದ ಕೆಂಪು ಮಣ್ಣಿನ ಅಖಾಡವು ಪೈಲ್ವಾನರ ಸೆಣಸಾಟಕ್ಕೆ ಸಾಕ್ಷಿಯಾಯಿತು. ಕೇಸರಿ ಮತ್ತು ಕೆಂಪು ಬಣ್ಣದ ಲಂಗೋಟಿ ಧರಿಸಿ ಅಖಾಡಕ್ಕಿಳಿದ ಪೈಲ್ವಾನರು, ಮಣ್ಣನ್ನು ಮೈಗೆ ಹಚ್ಚಿಕೊಂಡು ಪರಸ್ಪರ ಸವಾಲು ಹಾಕಿದರು. ಮಣ್ಣಿನಲ್ಲಿ ಉರುಳಾಡುತ್ತಾ, ಒಬ್ಬರನ್ನೊಬ್ಬರು ಕೆಡವಲು ನಡೆಸಿದ ಕಸರತ್ತು ನೆರೆದಿದ್ದ ಸಹಸ್ರಾರು ಕ್ರೀಡಾಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.
ಅಖಾಡದಲ್ಲಿ ರೆಫರಿಗಳ ತೀಕ್ಷ್ಣ ನೋಟದ ನಡುವೆ ನಡೆದ ಪಂದ್ಯದಲ್ಲಿ ಪೈಲ್ವಾನರು ತಮ್ಮ ದೈಹಿಕ ಬಲದ ಜೊತೆಗೆ ಮಾನಸಿಕ ತಂತ್ರಗಾರಿಕೆಯನ್ನು ಪ್ರದರ್ಶಿಸಿದರು. ಮೈದಾನದ ಸುತ್ತಲೂ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಪ್ರತಿ ಪಟ್ಟುಗಳಿಗೂ ಚಪ್ಪಾಳೆ ತಟ್ಟಿ ಪೈಲ್ವಾನರನ್ನು ಪ್ರೋತ್ಸಾಹಿಸಿದರು.
ಉಸಿರು ಬಿಗಿಹಿಡಿಯುವಂತೆ ಮಾಡಿದ ‘ಗುಂಡು ಎತ್ತುವ ಸ್ಪರ್ಧೆ’: ಶಕ್ತಿ ಪ್ರದರ್ಶನದ ಕೇಂದ್ರಬಿಂದುವಾಗಿದ್ದ ಗುಂಡು ಎತ್ತುವ ಸ್ಪರ್ಧೆಯಲ್ಲಿ ಯುವಕರು ನೂರಾರು ಕೆಜಿ ತೂಕದ ಕಲ್ಲನ್ನು ಭುಜದ ಮೇಲೆ ಆಡಿಸಿ ವೀಕ್ಷಕರನ್ನು ಬೆರಗುಗೊಳಿಸಿದರು.
ಬಿಜಾಪುರದ ಶೇಖಪ್ಪ ಬಸಪ್ಪ ಅವರು 175 ಕೆಜಿ ತೂಕದ ಗುಂಡನ್ನು ಲೀಲಾಜಾಲವಾಗಿ ಎತ್ತಿ ಪ್ರಥಮ ಸ್ಥಾನ ಗಳಿಸಿದರು. ಅದೇ ಜಿಲ್ಲೆಯ ನಬಿ ನದಾಫ್ (155 ಕೆಜಿ) ದ್ವಿತೀಯ ಹಾಗೂ ರಾಯಚೂರಿನ ರಂಗಸ್ವಾಮಿ (135 ಕೆಜಿ) ತೃತೀಯ ಸ್ಥಾನ ಪಡೆದರು.
ಬಂಡಿ ಗಾಲಿ ಜೋಡಣೆ: ಕೇವಲ ಶಕ್ತಿಯಷ್ಟೇ ಅಲ್ಲದೆ, ವೇಗ ಮತ್ತು ಕೌಶಲದ ಪರೀಕ್ಷೆಯಾಗಿದ್ದ ಎತ್ತಿನಬಂಡಿ ಗಾಲಿ ಜೋಡಿಸುವ ಸ್ಪರ್ಧೆಯು ನೋಡುಗರ ಕಣ್ಣು ಮಿಟುಕದಂತೆ ಮಾಡಿತು.
ನೂರಾರು ಕೆಜಿ ತೂಕದ ಮರದ ಗಾಲಿಗಳನ್ನು ಏಕಾಂಗಿಯಾಗಿ ಜೋಡಿಸುವ ಸಾಹಸದಲ್ಲಿ ಬಡಗಿ ಶ್ರೀನಿವಾಸ ಅವರು ಪ್ರಥಮ ಸ್ಥಾನಕ್ಕೆ ಮುತ್ತಿಕ್ಕಿದರು. ಹೊಸಪೇಟೆಯ ದೇವಪ್ಪ ದ್ವಿತೀಯ ಹಾಗೂ ಬಡಗಿ ವೆಂಕೋಬ ತೃತೀಯ ಸ್ಥಾನ ಗಳಿಸಿದರು.
ಶಾಸಕ ಹೆಚ್.ಆರ್ ಗವಿಯಪ್ಪ ಅವರು ವಿಜೇತರಿಗೆ ತಮ್ಮ ವೈಯಕ್ತಿಕ ನಿಧಿಯಿಂದ ಕ್ರಮವಾಗಿ ₹10,000, ₹5,000 ಹಾಗೂ ₹3,000 ನಗದು ಬಹುಮಾನ ವಿತರಿಸಿ ಪ್ರೋತ್ಸಾಹಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಉಪವಿಭಾಗಾಧಿಕಾರಿ ವಿವೇಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

         

ರಾಜ್ಯ ಮಟ್ಟದ ಪುರುಷ ಕುಸ್ತಿ ಪಂದ್ಯ ವಿಜೇತರು: 57 ರಿಂದ 65 ಕೆಜಿ ತೂಕದ ಕುಸ್ತಿಯಲ್ಲಿ ರಾಜ್ಯಮಟ್ಟದ ಹಂಪಿ ಕಿಶೋರ ಪ್ರಶಸ್ತಿಗೆ ವಿರೂಪಾಕ್ಷ ಪ್ರಥಮ ಸ್ಥಾನ, ಕಾರ್ತಿಕ್ ಮಾರುತಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. 64 ರಿಂದ 74 ಕೆಜಿ ತೂಕದ ಕುಸ್ತಿಯಲ್ಲಿ ರಾಜ್ಯ ಮಟ್ಟದ ಹಂಪಿ ಕುಮಾರ ಪ್ರಶಸ್ತಿಗೆ ಕೆ ಸಂಜೀವನ ಪ್ರಥಮ ಸ್ಥಾನ, ಭರತ್ ಕುಡ್ಡೆಮ್ಮಿ ದ್ವಿತೀಯ ಸ್ಥಾನ.
75 ರಿಂದ 85 ಕೆಜಿ ತೂಕದ ಕುಸ್ತಿಯಲ್ಲಿ ರಾಜ್ಯ ಮಟ್ಟದ ಹಂಪಿ ಕೇಸರಿ ಪ್ರಶಸ್ತಿಗೆ ಬೀರಲಿಂಗೇಶ್ವರ ಪ್ರಥಮ ಸ್ಥಾನ, ಶಿವಾನಂದ ದ್ವಿತೀಯ ಸ್ಥಾನ. 86ಕ್ಕೂ ಮೇಲ್ಪಟ್ಟ ತೂಕದ ಕುಸ್ತಿಯಲ್ಲಿ ರಾಜ್ಯಮಟ್ಟದ ಹಂಪಿ ಕಂಠೀರವ ಪ್ರಶಸ್ತಿಗೆ ಪರಮಾನಂದ ಪ್ರಥಮ, ವಿಜಯಕುಮಾರ ಜಿ ದ್ವಿತೀಯ ಸ್ಥಾನ.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರಸ್ತೆ ನಿರ್ಮಾಣಕ್ಕೆ ಜಾಗ ತ್ಯಾಗ ಮಾಡಿದ ಗ್ರಾಮಸ್ಥರ ಋಣ ತೀರಿಸಲಾಗದು: ಶಾಸಕ ಹೆಚ್.ಆರ್. ಗವಿಯಪ್ಪ

ವಿಜಯನಗರ (ಹೊಸಪೇಟೆ) : ಊರಿನ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ತಮ್ಮ ಜಾಗ...

Homeಸುದ್ದಿಗಳು

ಕೊಪ್ಪಳ : ಪ್ರತಿಭಾ ಪುರಸ್ಕಾರಕ್ಕೆ ಬನ್ನಿ

ಹರಪನಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲೂಕು ಘಟಕದ ವತಿಯಿಂದ 2026-27ನೇ ಸಾಲಿನ...

Homeಸುದ್ದಿಗಳು

ಜಿಲ್ಲೆಯ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಶೇ.100 ಇ-ಫಾರ್ಮ್ ವಿತರಣೆ ಪೂರ್ಣ

ವಿಜಯನಗರ (ಹೊಸಪೇಟೆ)  : ಜಿಲ್ಲೆಯ ಐದು ತಾಲೂಕಿನಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ...

Homeಸುದ್ದಿಗಳು

ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ಆಯ್ಕೆಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : 2026ನೇ ಸಾಲಿಗೆ ಜಿಲ್ಲೆಯಲ್ಲಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟು ಜಿಲ್ಲಾ ಮಟ್ಟದ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.