Home ಪ್ರವಾಸ ಹಂಪಿ ಉತ್ಸವಕ್ಕೆ ಜಲಕ್ರೀಡೆಯ ಕಳೆ  ಕಮಲಾಪುರ ಕೆರೆಯಲ್ಲಿ ಬೋಟಿಂಗ್‌ಗೆ ಪ್ರವಾಸಿಗರು ಫಿದಾ
ಪ್ರವಾಸಮನರಂಜನೆಸುದ್ದಿಗಳು

ಹಂಪಿ ಉತ್ಸವಕ್ಕೆ ಜಲಕ್ರೀಡೆಯ ಕಳೆ  ಕಮಲಾಪುರ ಕೆರೆಯಲ್ಲಿ ಬೋಟಿಂಗ್‌ಗೆ ಪ್ರವಾಸಿಗರು ಫಿದಾ

Share
Share

ವಿಜಯನಗರ:
ವಿಶ್ವವಿಖ್ಯಾತ ಹಂಪಿ ಉತ್ಸವದ ಸಡಗರದ ನಡುವೆ ಪ್ರವಾಸಿಗರಿಗೆ ಕಮಲಾಪುರ ಕೆರೆಯ ಜಲರಾಶಿಯು ಹೊಸ ಲೋಕವನ್ನೇ ತೆರೆದಿಟ್ಟಿದೆ. ಕಲ್ಲು-ಕಲೆಗಳ ನಾಡಿನಲ್ಲಿ ಬೋಟಿಂಗ್ ವ್ಯವಸ್ಥೆಯು ಪ್ರವಾಸಿಗರ ಮನಗೆದ್ದಿದ್ದು, ಸಾವಿರಾರು ಜನರು ನೀರಿನ ಅಲೆಗಳ ಮೇಲೆ ಸವಾರಿ ಮಾಡಿ ಸಂಭ್ರಮಿಸಿದರು.
ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಹಾಗೂ ಮೀನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಆರಂಭಿಸಲಾಗಿರುವ ದೋಣಿ ವಿಹಾರಕ್ಕೆ ಪ್ರವಾಸಿಗರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ. ಕೆರೆಯ  ನೀರಿನ ಮೇಲೆ ವೇಗವಾಗಿ ಚಲಿಸುವ ಬೋಟ್‌ಗಳಲ್ಲಿ ಕುಳಿತು ಪ್ರವಾಸಿಗರು ಹರ್ಷೋದ್ಗಾರ ಮಾಡಿದರು.
ಕೇವಲ ಐತಿಹಾಸಿಕ ಸ್ಮಾರಕಗಳನ್ನು ನೋಡುವುದಕ್ಕೆ ಸೀಮಿತವಾಗಿದ್ದ ಪ್ರವಾಸಿಗರಿಗೆ ಈ ಜಲಕ್ರೀಡೆಯಿಂದ ರೋಮಾಂಚನ ಸಿಕ್ಕಿದೆ. ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರು ಸ್ಪೀಡ್ ಬೋಟ್‌ಗಳ ಸವಾರಿಗೆ ಮಾರುಹೋದರು. ಕುಟುಂಬ ಸಮೇತ ಕೆರೆಗೆ ಆಗಮಿಸಿ, ಬೋಟಿಂಗ್ ಮುಗಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಕಮಲಾಪುರ ಕೆರೆಯ ತಂಪಾದ ಗಾಳಿ ಮತ್ತು ಪ್ರಕೃತಿಯ ಸೊಬಗಿನ ನಡುವೆ ದೋಣಿ ವಿಹಾರ ಮಾಡುವುದು ಪ್ರವಾಸಿಗರ ಪ್ರವಾಸದ ಖುಷಿಯನ್ನು ಇಮ್ಮಡಿಗೊಳಿಸಿದೆ.

ಸಾರ್ವಜನಿಕರಿಂದ ಉತ್ತಮ ಸ್ಪಂದನೆ: ಹಂಪಿ ಉತ್ಸವ ಅಂಗವಾಗಿ ಕಮಲಾಪುರ ಕೆರೆಯಲ್ಲಿ ಹಮ್ಮಿಕೊಳ್ಳಲಾಗಿರುವ ದೋಣಿ ವಿಹಾರಕ್ಕೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಮೀನಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಬಿ. ಮಲ್ಲೇಶ್ ತಿಳಿಸಿದರು.
ಈ ಬಾರಿ ಪ್ರವಾಸಿಗರನ್ನು ಆಕರ್ಷಿಸಲು ಕೆರೆಯಲ್ಲಿ ಮೂರು ಫ್ಲೈಯರ್‌ಗಳು, ಒಂದು ಸ್ಪೀಡ್ ಬೋಟ್, ಜೆಟ್ ಸ್ಕೀ (ವಾಟರ್ ಬೈಕ್), ಬಂಪರ್ ರೈಡ್ ಹಾಗೂ ಬನಾನಾ ರೈಡ್‌ಗಳನ್ನು  ಪರಿಚಯಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಜಿಲ್ಲಾಡಳಿತದ ವತಿಯಿಂದ ವ್ಯಾಪಕ ಪ್ರಚಾರ ನೀಡಲಾಗಿದೆ ಎಂದು ತಿಳಿಸಿದ ಅವರು, ಸ್ಪೀಡ್ ಬೋಟ್ ಮತ್ತು ಫ್ಲೈಯರ್ ರೈಡ್‌ಗಳಿಗೆ ತಲಾ 100 ರೂ. ಹಾಗೂ ಜೆಟ್ ಸ್ಕೀ, ಬನಾನಾ ಮತ್ತು ಬಂಪರ್ ರೈಡ್‌ಗಳಿಗೆ ತಲಾ 300 ರೂ. ನಿಗದಿಪಡಿಸಲಾಗಿದೆ ಎಂದರು.
ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಪಿ.ಎಸ್.ಐ, ಸಿ.ಪಿ.ಐ ಹಾಗೂ ಹೋಮ್ ಗಾರ್ಡ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ತುರ್ತು ಸಂದರ್ಭಗಳ ಎದುರಿಸಲು ಆಂಬ್ಯುಲೆನ್ಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸನ್ನದ್ಧರಾಗಿದ್ದಾರೆ. ಕರಾವಳಿ ಭಾಗದ ಭಟ್ಕಳ, ಹೊನ್ನಾವರ, ಉಡುಪಿ ಹಾಗೂ ಮಲ್ಪೆಯಲ್ಲಿ ಜಲಕ್ರೀಡೆ ನಡೆಸಿದ ಅನುಭವವಿರುವ ‘ಅಕ್ವಾ ರೈಡ್ ವಾಟರ್ ಕಂಪನಿ’ಯ ತಜ್ಞರು ಈ ರೈಡ್‌ಗಳನ್ನು ನಡೆಸಿಕೊಡುತ್ತಿದ್ದಾರೆ. ಫೆಬ್ರವರಿ 15ರವರೆಗೆ ಈ ಸೌಲಭ್ಯ ಲಭ್ಯವಿದ್ದು, ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 7. 30 ರವರೆಗೆ ಸಾರ್ವಜನಿಕರು  ದೋಣಿವಿಹಾರ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ಹಂಪಿಯ ಕಲೆ ನೋಡಿ ಖುಷಿಯಾಗಿತ್ತು. ಅದರ ಜೊತೆಗೆ ಈ ಕೆರೆಯಲ್ಲಿ ಬೋಟಿಂಗ್ ಮಾಡಿದ್ದು ನಮ್ಮ ಪ್ರವಾಸಕ್ಕೆ ಹೊಸ ಕಳೆ ನೀಡಿತು. ಅಲೆಗಳ ಮೇಲೆ ವೇಗವಾಗಿ ಹೋಗುವಾಗ ತುಂಬಾ ರೋಮಾಂಚನವಾಯಿತು ಎನ್ನುತ್ತಾರೆ ಚಿತ್ರದುರ್ಗ ಪ್ರವಾಸಿಗ ರಂಗಣ್ಣ.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಉಪ್ಪಾರ ನೌಕರರಿಂದ ಪ್ರತಿಭಾ ಪುರಸ್ಕಾರ

ಹರಪನಹಳ್ಳಿ: ಹಬ್ಬ ಹರಿದಿನಗಳ ಆಚರಣೆಯಲ್ಲಿ ಮೇಲ್ವರ್ಗದ ಸಮುದಾಯಗಳಿಗಿಂತ ಶೋಷಿತ ವರ್ಗದವರೇ ಹೆಚ್ಚು ದುಂದುವೆಚ್ಚ ಮಾಡುತ್ತಿರುವುದು ಕಳವಳಕಾರಿ...

Homeಸುದ್ದಿಗಳು

ಹರಪನಹಳ್ಳಿ : ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ 

ಪ್ರಜಾಸೇವ ಆಂದೋಲನ ಜನರ ಹೃದಯಕ್ಕೆ ಮುಟ್ಟುವಂತಿರಲಿ ಹರಪನಹಳ್ಳಿ :  ಹಿಂದೆ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಭರವಸೆಯಿಲ್ಲದೆ...

Homeಸುದ್ದಿಗಳು

ಬಾಲಕನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ 

ಹೊಸಪೇಟೆ (ವಿಜಯನಗರ ಜಿಲ್ಲೆ ) : ಏಳು ವರ್ಷದ ಬಾಲಕನನ್ನು ಅಪಹರಿಸಿ ಕಾಲುವೆಗೆ ಎಸೆದು ಕೊಲೆ...

Homeಸುದ್ದಿಗಳು

ಜೆಡಿಎಸ್ ಅಧ್ಯಕ್ಷರಾಗಿ ವಿ. ಮಲ್ಕಪ್ಪ ಆಯ್ಕೆ

ಹರಪನಹಳ್ಳಿ : ತಾಲ್ಲೂಕು ಜಾತ್ಯಾತೀತ ಜನತಾದಳದ (ಜೆಡಿಎಸ್) ನೂತನ ಅಧ್ಯಕ್ಷರಾಗಿ ತಾವರೆಗೊಂದಿ ಗ್ರಾಮದ ವಿ. ಮಲ್ಕಪ್ಪ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.