ವಿಜಯನಗರ (ಹೊಸಪೇಟೆ) : ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾಕಿ ಇರುವ ಎಫ್.ಎಸ್.ಟಿ.ಪಿ ಮತ್ತು ಎಸ್.ಟಿ.ಪಿ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸ್ಥಳೀಯ ಆಡಳಿತದ 24×7 ಕುಡಿಯುವ ನೀರಿನ ಯೋಜನೆ (ಅಮೃತ್ 2.0 ಯೋಜನೆ) ಹಾಗೂ ಒಳಚರಂಡಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಭಿವೃದ್ಧಿ ಕೆಲಸಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಯಾವುದೇ ರೀತಿಯ ನಿರ್ಲಕ್ಷ್ಯವಹಿಸದೇ ಕಾಂಗಾರಿ ಅನುಷ್ಠಾನಗೊಳಿಸಬೇಕು. ಅದಲ್ಲದೇ ಕಾಮಗಾರಿಯ ಗುಣಮಟ್ಟವೂಕಾಯ್ದುಕೊಳ್ಳಬೇಕು. ಒಂದು ವೇಳೆ ಗುತ್ತಿಗೆದಾರರು ವಿವಿಧ ನೆಪ ಹೇಳುವ ಮೂಲಕ ಕಾಮಗಾರಿ ವಿಳಂಬವಾದಲ್ಲಿ ಅಥವಾ ಕಳಪೆ ಕಾಮಗಾರಿ ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಗುತ್ತಿಗೆದಾರರನ್ನ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪೈಪ್‌ಲೈನ್ ಅಳವಡಿಕೆಗೆ ರಸ್ತೆ ಬದಿಯಲ್ಲಿನ ಪೆಟ್ಟಿ ಅಂಗಡಿಗಳ ಅತಿಕ್ರಮಣದಿಂದ ಅಡ್ಡಿಯಾಗುತ್ತಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಅತಿಕ್ರಮಣದಾರರೊಂದಿಗೆ ಸೂಕ್ತ ಸಂವಹನ ನಡೆಸಿ ಜಾಗವನ್ನು ತಕ್ಷಣ ತರೆವುಗೊಳಿಸಿ ಮುಂಬರುವ ಆಗಸ್ಟ್ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಡಿಸೆಂಬರ್ ವೇಳೆಗೆ ಸಂಪೂರ್ಣ ಯೋಜನೆ ಮುಕ್ತಾಯಗೊಳಿಸಬೇಕು. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಮತ್ತು ಘನತ್ಯಾಜ್ಯ ನಿರ್ವಹಣೆ ನಿಯಮಗಳಿಗೆ ಸಂಬಂದಿಸಿದಂತೆ ಕೇವಲ ದಾಖಲೆ ಅಥವಾ ಕಾಗದದ ಮೇಲೆ ಪ್ರಗತಿ ತೋರಿಸುವುದನ್ನು ನಿಲ್ಲಿಸಿ.
ಪ್ರಾಯೋಗಿಕ ಹಾಗೂ ವಾಸ್ತವಿಕ ಸುಧಾರಣೆ ಕಸ ವಿಲೇವಾರಿ ಮತ್ತು ಹಸಿರು ಪರಿಸರ ನಿರ್ವಹಣೆಯಲ್ಲಿ ಕಾಣಬೇಕು ಎಂದು ತಾಕೀತು ಮಾಡಿದರು. ಕಾಮಗಾರಿಗಳ ವಿಳಂಬಕ್ಕೆ ವಿವಿಧ ತಾಂತ್ರಿಕ ಕುಂಟುನೆಪ ಹೇಳದೇ, ಸಂಬಂದ ಅಧಿಕಾರಿಗಳು ಸಮನ್ವಯತೆಯಿಂದ ಜಂಟಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ ಅವರು, ನೀರು ಶುದ್ಧೀಕರಣ ಘಟಕ ಮತ್ತು ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಪೂರ್ಣಗೊಳಿಸಿದ ನಂತರವೇ ಮನೆ ಮನೆಗೆ ನಳ ಸಂಪರ್ಕ ನೀಡುವ ಕೆಲಸವನ್ನು ವಿಸ್ತರಿಸಬೇಕು. ಕಾರ್ಮಿಕರ ನಿರ್ವಹಣೆ ಮತ್ತು ಅಗತ್ಯ ಸಾಮಗ್ರಿಗಳ ಪೂರೈಕೆಯಲ್ಲಿನ ವಿಳಂಬವನ್ನು ಸರಿದೂಗಿಸಲು ಗುತ್ತಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಪರಿಣಿತ ಕಾರ್ಮಿಕರನ್ನು ನಿಯೋಜಿಸಿ ಮೆಕ್ಯಾನಿಕಲ್ ಫಿಟ್ಟಿಂಗ್ ಕೆಲಸ ಚುರುಕುಗೊಳಿಸಬೇಕು.
ಇನ್ನು ಯಾವುದೇ ಕಾಲಾವಕಾಶ ನೀಡುವುದಿಲ್ಲ. ಪೈಪ್‌ಲೈನ್ ಮಾರ್ಗ ಬದಲಾವಣೆ ಅಥವಾ ಸಂಪರ್ಕ ಕಲ್ಪಿಸುವಾಗ ಸ್ಥಳೀಯವಾಗಿ ಯಾವುದೇ ಗೊಂದಲಗಳಿದ್ದಲ್ಲಿ ಸಂಬಂದಪಟ್ಟ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು.
ಯುಜಿಡಿ ಯೋಜನೆಯ ಬಾಕಿ ಇರುವ ಮಿಸ್ಸಿಂಗ್ ಲಿಂಕ್ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಮತ್ತು ಮುಂದಿನ ವಾರವೇ ಇದರ ಯೋಜನಾ ಪ್ರಗತಿ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರಸ್ತೆಗಳನ್ನು ದುರಸ್ತಿಗೊಳಿಸಿ, ಕುಡಿಯುವ ನೀರಿನ ಪೈಪ್‌ಲೈನ್ ಮತ್ತು ಮನೆ ಸಂಪರ್ಕದ ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದಕ್ಕೆ ಸಂಬಂಧಿಸಿದ ಅಧಿಕಾರಿ ಪ್ರತಿಕ್ರಿಯಿಸಿ ಅಮೃತ್ 2.0 ಯೋಜನೆಯಡಿ 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪಟ್ಟಣಗಳನ್ನು ಒಳಪಡಿಸಲಾಗುತ್ತಿದ್ದು, ಜಿಲ್ಲಾ ವ್ಯಾಪ್ತಿಯ ಒಟ್ಟು 7 ಪಟ್ಟಣಗಳಲ್ಲಿ ಯೋಜನೆ ಪ್ರಗತಿಯಲ್ಲಿದೆ. ಈ ಪೈಕಿ ಮರಿಯಮ್ಮನಹಳ್ಳಿ ಪಟ್ಟಣದ ಈ ಯೋಜನೆಗೆ 2023 ರಲ್ಲಿ ಕಾರ್ಯಾದೇಶ ನೀಡಲಾಗಿದ್ದು, ಚೆನ್ನೈ ಮೂಲದ ಎಕೋ ಪ್ರೊಡಕ್ಷನ್
ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಕಾಮಗಾರಿ ನಿರ್ವಹಿಸುತ್ತಿದೆ. ಒಟ್ಟು 54 ರಿಂದ 58 ಕಿ.ಮೀ ವ್ಯಾಪ್ತಿಯ ಪೈಪ್‌ಲೈನ್ ಹಾಗೂ ರೈಸಿಂಗ್ ಮೇನ್ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ.
ನೀರು ಶುದ್ಧೀಕರಣ ಘಟಕದ ಸಿವಿಲ್ ಕಾಮಗಾರಿಗಳು ಮುಗಿದಿದ್ದು, ಎಲೆಕ್ಟ್ರೋ-ಮೆಕ್ಯಾನಿಕಲ್ ಕೆಲಸ ಪ್ರಗತಿಯಲ್ಲಿದೆ. ಜಿಲ್ಲೆಯ ಮರಿಯಮ್ಮನಹಳ್ಳಿ ವ್ಯಾಪ್ತಿಯಲ್ಲಿ 10 ಲಕ್ಷ ಲೀಟರ್ ಮತ್ತು ಎರಡು 5 ಲಕ್ಷ ಲೀಟರ್ ಸಾಮರ್ಥ್ಯ 3 ಟ್ಯಾಂಕ್‌ಗಳ ಕಾಮಗಾರಿ ಹಮ್ಮಿಕೊಂಡಿದ್ದು, 2 ಕಾಮಗಾರಿ ಬಹುತೇಕ ಪೂರ್ಣಗೊಂಡಿವೆ. ಆದರೆ 10 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ಕಾಮಗಾರಿ ಸ್ಥಳ
ಸಮಸ್ಯೆಯಿಂದಾಗಿ ವಿಳಂಬವಾಗಿದೆ.
ಅದರಂತೆ ಯೋಜಿತ 4,488 ನಳ ಸಂಪರ್ಕಗಳ ಪೈಕಿ ಈಗಾಗಲೇ 4,400 ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಅದರಂತೆ ಒಟ್ಟು 102 ಕಿ.ಮೀ ಪೈಪ್‌ಲೈನ್ ಜಾಲದ ಪೈಕಿ ಈಗಾಗಲೇ 80 ಕಿ.ಮೀ ಕೆಲಸ ಪೂರ್ಣಗೊಂಡಿದೆ. ಯೋಜಿತ 6,500
ಮನೆಗಳ ಪೈಕಿ 4,300 ಮನೆಗಳಿಗೆ ಯಶಸ್ವಿಯಾಗಿ ನಳ ಸಂಪರ್ಕ ಕಲ್ಪಿಸಲಾಗಿದೆ. ಹೀಗೆ ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ಆಗಸ್ಟ್ ಅಂತ್ಯಕ್ಕೆ ಸಂಪೂರ್ಣ ಮುಕ್ತಾಯಗೊಳ್ಳಲಿವೆ ಎಂದು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖ ಅಧಿಕಾರಿಗಳು, ಸ್ಥಳೀಯ ಆಡಳಿತ ಸಂಸ್ಥೆಯ ಮುಖ್ಯಾಧಿಕಾರಿಗಳು, ಗುತ್ತಿಗೆದಾರರು ಇದ್ದರು.
- AMRUT 2.0 Scheme
- Civic Infrastructure
- DC Kavitha S Mannikeri
- Drainage Works
- Drinking Water Project
- FSTP
- Hospet
- Karnataka News
- Sewage Treatment Plant
- Sirisuddi
- STP
- VIJAYANAGARA
- ಅಮೃತ್ 2.0 ಯೋಜನೆ
- ಎಫ್ಎಸ್ಟಿಪಿ
- ಎಸ್ಟಿಪಿ
- ಒಳಚರಂಡಿ ಕಾಮಗಾರಿ
- ಕರ್ನಾಟಕ ಸುದ್ದಿ
- ಕುಡಿಯುವ ನೀರಿನ ಯೋಜನೆ
- ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ
- ನಗರಾಭಿವೃದ್ಧಿ ಕೋಶ
- ಮರಿಯಮ್ಮನಹಳ್ಳಿ
- ವಿಜಯನಗರ
- ಹೊಸಪೇಟೆ
Leave a comment