Home ಕಾರ್ಮಿಕರಿಗೆ ನಿರಾಳ: ಹೊಸ ಕಾರ್ಡ್ ಬರುವವರೆಗೂ ಇ-ಕೆವೈಸಿ ಆಗಿರುವ ಹಳೆಯ ನರೇಗಾ ಜಾಬ್ ಕಾರ್ಡ್‌ಗಳೇ ಸಿಂಧು
Homeಸುದ್ದಿಗಳು

ಕಾರ್ಮಿಕರಿಗೆ ನಿರಾಳ: ಹೊಸ ಕಾರ್ಡ್ ಬರುವವರೆಗೂ ಇ-ಕೆವೈಸಿ ಆಗಿರುವ ಹಳೆಯ ನರೇಗಾ ಜಾಬ್ ಕಾರ್ಡ್‌ಗಳೇ ಸಿಂಧು

Share
Share

ಹರಪನಹಳ್ಳಿ: ಗ್ರಾಮೀಣ ಭಾಗದಲ್ಲಿ ಜನರಿಗೆ ಉದ್ಯೋಗ ಭದ್ರತೆ, ಜಲಸಂರಕ್ಷಣೆ, ಆಸ್ತಿ ಸೃಜನೆ ಹಾಗೂ ಜೀವನೋಪಾಯಕ್ಕಾಗಿ ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದ ನರೇಗಾ ಯೋಜನೆಯು ರದ್ದಾಗಿ ಮತ್ತಷ್ಟು ಪಾರದರ್ಶಕತೆ ಹಾಗೂ ತಂತ್ರಜ್ಞಾನದ ಬಳಕೆಯೊಂದಿಗೆ ಕೇಂದ್ರ ಸರ್ಕಾರವು ‘ವಿಕಸಿತ ಭಾರತ-ಜಿ ರಾಮ್ ಜಿ ಕಾಯ್ದೆ, 2025 ಅನ್ನು ಜುಲೈ 1 ರಿಂದ ದೇಶಾದ್ಯಂತ ಜಾರಿಗೊಳಿಸಿದೆ ಎಂದು ಹರಪನಹಳ್ಳಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ್ ವೈ.ಎಚ್. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಕಸಿತ ಭಾರತ-ಜಿ ರಾಮ್ ಜಿ ಕಾಯ್ದೆಯು ಗ್ರಾಮೀಣ ಉದ್ಯೋಗ ಮತ್ತು ಅಭಿವೃದ್ಧಿಯ ಹೊಸ ಶಾಸನವಾಗಿದ್ದು, ಗ್ರಾಮೀಣ ಕುಟುಂಬಗಳಿಗೆ ಒಂದು ಆರ್ಥಿಕ ವರ್ಷದಲ್ಲಿ 125 ದಿನಗಳ ಕೌಶಲ್ಯರಹಿತ ಕೂಲಿ ಉದ್ಯೋಗದ ಶಾಸನಬದ್ಧ ಗ್ಯಾರಂಟಿಯನ್ನು ನೀಡುತ್ತದೆ. ಇದು ಗ್ರಾಮೀಣ ಭಾಗದಲ್ಲಿ ಉತ್ಪಾದಕ ಆಸ್ತಿಗಳ ಸೃಜನೆ ಮಾಡುವ ಮೂಲಕ ಗ್ರಾಮೀಣ ಅಭಿವೃದ್ಧಿಯನ್ನು ‘ವಿಕಸಿತ ಭಾರತ 2047’ ರ ದೃಷ್ಟಿಕೋನದೊಂದಿಗೆ ಜೋಡಿಸುವ ಗುರಿ ಹೊಂದಿದೆ.

ಜುಲೈ 1, 2026 ರಿಂದ ಜಾರಿಗೆ ಬರುವಂತೆ ಹಳೆಯ ನರೇಗಾ ಕಾಯ್ದೆ ರದ್ದಾಗಿದ್ದು, ನೂತನ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) – ಕಾಯ್ದೆಯು ದೇಶದ ಎಲ್ಲಾ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಜಾರಿಯಾಗಿದೆ. ಹೊಸ ಕಾಯ್ದೆ ಪ್ರಾರಂಭವಾದ ದಿನಾಂಕದಂದು ನರೇಗಾ ಅಡಿಯಲ್ಲಿ ಬಾಕಿ ಇರುವ ಅಥವಾ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಹೊಸ ಕಾಯ್ದೆ ನಿಯಮಾವಳಿಗಳ ಪ್ರಕಾರವೇ ಮುಂದುವರಿಸಬಹುದು.

ಸಾರ್ವಜನಿಕ ಮತ್ತು ಸಮುದಾಯ ಆಸ್ತಿಗಳು ಅಪೂರ್ಣವಾಗದಂತೆ ತಡೆಯಲು ಈ ಕಾಮಗಾರಿಗಳನ್ನು ಸುಗಮವಾಗಿ ಹೊಸ ಯೋಜನೆಗೆ ವರ್ಗಾಯಿಸಿ, ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡಲಾಗುತ್ತದೆ. ಹೊಸ ಕಾಯ್ದೆಯಡಿ ‘ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್ಗಳನ್ನು’ ವಿತರಿಸುವವರೆಗೆ, ಈಗಾಗಲೇ ಇ-ಕೆ ವೈಸಿ (e-kyc) ಪೂರ್ಣಗೊಂಡಿರುವ ಹಳೆಯ ನರೇಗಾ ಜಾಬ್ ಕಾರ್ಡ್ಗಳೇ ಸಿಂಧುವಾಗಿರುತ್ತವೆ. ಕೌಶಲ್ಯರಹಿತ ದೈಹಿಕ ಕೆಲಸ ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬರುವ ವಯಸ್ಕ ಸದಸ್ಯರನ್ನು ಹೊಂದಿರುವ ಪ್ರತಿಯೊಂದು ಗ್ರಾಮೀಣ ಕುಟುಂಬವೂ ಈ ಯೋಜನೆಗೆ ಅರ್ಹವಾಗಿದೆ.

ಹಳೆಯ ಜಾಬ್ ಕಾರ್ಡ್ ಹೊಂದಿಲ್ಲದ ಕುಟುಂಬಗಳು ಗ್ರಾಮ ಪಂಚಾಯಿತಿಗೆ ಸದಸ್ಯರ ಹೆಸರು, ವಯಸ್ಸು ಮತ್ತು ವಿಳಾಸದ ವಿವರ ನೀಡಿ ಹೊಸ ಕಾರ್ಡ್ಗಾಗಿ ನೊಂದಾಯಿಸಿ ಕೊಳ್ಳಬಹುದು. ಉದ್ಯೋಗಕ್ಕಾಗಿ ಗ್ರಾಮೀಣ ವಯಸ್ಕ ಸದಸ್ಯರು ಗ್ರಾಮ ಪಂಚಾಯಿತಿ, ಕಾರ್ಯಕ್ರಮ ಅಧಿಕಾರಿಗಳು (PO) ಅಥವಾ ಗ್ರಾ.ಪಂ.ನ ಅಧಿಕೃತ ವ್ಯಕ್ತಿಗೆ ಮೌಖಿಕವಾಗಿ, ಲಿಖಿತವಾಗಿ (ಫಾರ್ಮ್ 6ರ ಮೂಲಕ) ಅಥವಾ ಡಿಜಿಟಲ್ ವೇದಿಕೆಗಳ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

15 ದಿನಗಳಲ್ಲಿ ಕೆಲಸ, ಇಲ್ಲದಿದ್ದರೆ ನಿರುದ್ಯೋಗ ಭತ್ಯೆ! ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಉದ್ಯೋಗ ಒದಗಿಸುವುದು ಕಡ್ಡಾಯವಾಗಿದೆ. ಒಂದು ವೇಳೆ 15 ದಿನಗಳಲ್ಲಿ ಕೆಲಸ ನೀಡದಿದ್ದರೆ ಆಯಾ ರಾಜ್ಯ ಸರ್ಕಾರವೇ ಕೂಲಿಕಾರರಿಗೆ ನಿರುದ್ಯೋಗ ಭತ್ಯೆ ಪಾವತಿಸಬೇಕಾಗುತ್ತದೆ. ಭತ್ಯೆಯ ದರವು ಒಂದು ಆರ್ಥಿಕ ವರ್ಷದಲ್ಲಿ ಮೊದಲ 30 ದಿನಗಳವರೆಗೆ ಅಧಿಸೂಚಿತ ವೇತನ ದರದ 1/4 ಭಾಗಕ್ಕಿಂತ (ನಾಲ್ಕನೇ ಒಂದು ಭಾಗ) ಕಡಿಮೆ ಇರಬಾರದು. ಉಳಿದ ಅವಧಿಗೆ ಅಧಿಸೂಚಿತ ವೇತನ ದರದ 1/2 ಭಾಗದಷ್ಟು (ಅರ್ಧದಷ್ಟು) ಕಡಿಮೆ ಇರಬಾರದು.

ಹೊಸ ಕಾಯ್ದೆಯ ಸೆಕ್ಷನ್ 10 ರ ನಿಬಂಧನೆಗಳ ಪ್ರಕಾರ ಕೇಂದ್ರ ಸರ್ಕಾರವು ಕೂಲಿ ದರವನ್ನು 382  ರೂಪಾಯಿಗಳಿಗೆ ಹೆಚ್ಚಳ ಮಾಡಿದೆ. ಕೂಲಿ ವೇತನವನ್ನು ವಾರಕ್ಕೊಮ್ಮೆ ಅಥವಾ ಯಾವುದೇ ಸಂದರ್ಭದಲ್ಲೂ ಮಸ್ಟರ್ ರೋಲ್ (ಹಾಜರಾತಿ ಪಟ್ಟಿ) ಮುಚ್ಚಿದ 15 ದಿನಗಳ ಒಳಗಾಗಿ ಕಡ್ಡಾಯವಾಗಿ ಪಾವತಿಸಬೇಕು. ವೇತನವನ್ನು ನೇರ ಸೌಲಭ್ಯ ವರ್ಗಾವಣೆ  ಮೂಲಕ ಕೂಲಿಕಾರರ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ವೈಯಕ್ತಿಕ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಒಂದು ವೇಳೆ 15 ದಿನಗಳೊಳಗೆ ವೇತನ ಪಾವತಿಯಾಗದಿದ್ದರೆ, ವಿಳಂಬವಾದ ಪ್ರತಿ ದಿನಕ್ಕೆ ಪಾವತಿಸದ ವೇತನದ ಶೇ. 0.05 ರಷ್ಟು ವಿಳಂಬ ಪರಿಹಾರವನ್ನು ಪಡೆಯಲು ಕೂಲಿಕಾರರು ಅರ್ಹರಿರುತ್ತಾರೆ.

ಮುಖದ ಗುರುತಿಸುವಿಕೆ ಹಾಜರಾತಿ : ಹೊಸ ಕಾಯ್ದೆಯಡಿ ಪಾರದರ್ಶಕತೆ ತರಲು ಕೆಲಸದ ಸ್ಥಳಗಳಲ್ಲಿ  ಮುಖದ ಗುರುತಿಸುವಿಕೆ ಆಧಾರಿತ ತಂತ್ರಜ್ಞಾನದ ಮೂಲಕವೇ ಹಾಜರಾತಿ ದಾಖಲಿಸಲಾಗುತ್ತದೆ. ನೆಟ್‌ವರ್ಕ್ ಸಮಸ್ಯೆ, ತಾಂತ್ರಿಕ ತೊಂದರೆ ಅಥವಾ ಸಾಧನ  ಕೆಟ್ಟುಹೋಗುವಂತಹ ಅಸಾಧಾರಣ ಮತ್ತು ನೈಜ ಸಂದರ್ಭಗಳಿಗಾಗಿ ಸರ್ಕಾರದ ಮಾರ್ಗಸೂಚಿಗಳನ್ವಯ ‘ವಿನಾಯಿತಿ ನಿರ್ವಹಣಾ ವ್ಯವಸ್ಥೆ’ ಕೂಡ ಲಭ್ಯವಿರುತ್ತದೆ.

ಕೆಲಸದ ಸ್ಥಳದಲ್ಲಿ ಸುರಕ್ಷಿತ ಕುಡಿಯುವ ನೀರು, ಮಕ್ಕಳಿಗೆ ನೆರಳು, ವಿಶ್ರಾಂತಿ ಅವಧಿ ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆಯ (ಫಸ್ಟ್ ಏಡ್ ಬಾಕ್ಸ್) ಮೂಲಸೌಕರ್ಯಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಉದ್ಯೋಗವನ್ನು ಕೂಲಿಕಾರರ ಗ್ರಾಮದ 5 ಕಿಲೋಮೀಟರ್ ವ್ಯಾಪ್ತಿಯಲ್ಲೇ ನೀಡಲಾಗುತ್ತದೆ. ಒಂದು ವೇಳೆ 5 ಕಿ.ಮೀ ಗಿಂತ ದೂರದಲ್ಲಿ (ತಾಲ್ಲೂಕಿನ ಒಳಗಡೆ) ಉದ್ಯೋಗ ನೀಡಿದರೆ, ಸಾರಿಗೆ ಮತ್ತು ಜೀವನ ವೆಚ್ಚಕ್ಕಾಗಿ ಗಳಿಸಿದ ವೇತನದ ಜೊತೆಗೆ ಹೆಚ್ಚುವರಿ ಶೇ. 10 ರಷ್ಟು ಹಣವನ್ನು ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.

ಅನುಷ್ಠಾನದ ಜವಾಬ್ದಾರಿ ಮತ್ತು ಗ್ರಾಮ ಪಂಚಾಯಿತಿಗಳ ಪಾತ್ರ: ಜಿಲ್ಲಾ ಮಟ್ಟದಲ್ಲಿ ರಾಜ್ಯ ಸರ್ಕಾರ ನಿಯೋಜಿಸಿದ ಜಿಲ್ಲಾ ಕಾರ್ಯಕ್ರಮ ಸಂಯೋಜಕರು  ಮತ್ತು ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿಯನ್ನು ‘ಕಾರ್ಯಕ್ರಮ ಅಧಿಕಾರಿ’ (PO) ಆಗಿ ನೇಮಿಸಲಾಗುತ್ತದೆ. ಕುಟುಂಬಗಳ ನೋಂದಣಿ, ಅರ್ಜಿ ಸ್ವೀಕಾರ, ಕಾಮಗಾರಿಗಳ ಅನುಷ್ಠಾನ, ದಾಖಲೆಗಳ ನಿರ್ವಹಣೆ ಮತ್ತು ಭವಿಷ್ಯದ ಅಗತ್ಯಗಳಿಗೆ ಪೂರಕವಾದ ‘ವಿಕಸಿತ ಗ್ರಾಮ ಪಂಚಾಯಿತಿ ಯೋಜನೆ ತಯಾರಿಕೆಯಲ್ಲಿ ಗ್ರಾಮ ಪಂಚಾಯಿತಿಗಳು ಪ್ರಮುಖ ಪಾತ್ರ ವಹಿಸುತ್ತವೆ.

ಕಾಯ್ದೆಯಡಿ ಕೈಗೊಳ್ಳುವ ಎಲ್ಲಾ ಕಾಮಗಾರಿಗಳು ಗ್ರಾಮಸಭೆಯಿಂದ ಅನುಮೋದಿಸಲ್ಪಟ್ಟ  ಹೊಸ ಕಾಯ್ದೆಯಡಿಯೂ ಸಹ ಯಾವುದೇ ಕಾಮಗಾರಿಗಳ ಅನುಷ್ಠಾನಕ್ಕಾಗಿ ಗುತ್ತಿಗೆದಾರರನ್ನು ತೊಡಗಿಸಿಕೊಳ್ಳುವಂತಿಲ್ಲ. ಸಂಪೂರ್ಣವಾಗಿ ಮಾನವ ಶ್ರಮವನ್ನು ಕೂಲಿಕಾರರನ್ನು ಬಳಸಿ ಕೆಲಸ ನಿರ್ವಹಿಸಬೇಕು. ಮಾನವ ಶ್ರಮವನ್ನು ಕಸಿದುಕೊಳ್ಳುವ ಅಥವಾ ಕೂಲಿಕಾರರನ್ನು ಸ್ಥಾನಪಲ್ಲಟಗೊಳಿಸುವ ಭಾರಿ ಯಂತ್ರೋಪಕರಣಗಳನ್ನು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಪಾರದರ್ಶಕತೆ ಮತ್ತು ಸಾರ್ವಜನಿಕ ಪ್ರಕಟಣೆ : ಪ್ರತಿ ಕೆಲಸದ ಸ್ಥಳದಲ್ಲಿ ಕಾಮಗಾರಿಯ ವಿವರ, ಅಂದಾಜು ಮಾನವ ದಿನಗಳು, ಸಾಮಗ್ರಿಗಳ ಪ್ರಮಾಣ ಮತ್ತು ಐಟಂವಾರು ವೆಚ್ಚಗಳನ್ನು ಪ್ರದರ್ಶಿಸುವ ‘ಜನತಾ ಬೋರ್ಡ್’ ಅಳವಡಿಸುವುದು ಕಡ್ಡಾಯ. ಪ್ರಮುಖ ಅಂಕಿ-ಅಂಶಗಳು, ಮಾಸ್ಟರ್ ರೋಲ್‌ಗಳು, ಪಾವತಿಗಳು ಮತ್ತು ಮಂಜೂರಾತಿಗಳ ಡಿಜಿಟಲ್ ಹಾಗೂ ಭೌತಿಕ ಪ್ರದರ್ಶನ ಸೇರಿದಂತೆ ‘ಸಾಪ್ತಾಹಿಕ ಸಾರ್ವಜನಿಕ ಪ್ರಕಟಣಾ ವ್ಯವಸ್ಥೆ’ ಇರಲಿದೆ.

ಗ್ರಾಮ ಪಂಚಾಯಿತಿಗಳು ವಾರಕ್ಕೊಮ್ಮೆ ಬಹಿರಂಗಪಡಿಸುವಿಕೆ ಸಭೆಗಳನ್ನು ನಡೆಸಲಿವೆ.  ಅನುಮತಿಸಲಾದ ನಾಲ್ಕು ಪ್ರಮುಖ ಕ್ಷೇತ್ರಗಳ ಕಾಮಗಾರಿಗಳಲ್ಲಿ ಸುಸ್ಥಿರ ಮತ್ತು ಚೇತರಿಸಿಕೊಳ್ಳುವ ಗ್ರಾಮೀಣ ಅಭಿವೃದ್ಧಿಗಾಗಿ ಕಾಯ್ದೆಯು 4 ಪ್ರಮುಖ ವಿಷಯಾಧಾರಿತ ಕ್ಷೇತ್ರಗಳಡಿ ಕಾಮಗಾರಿಗಳಿಗೆ ಅನುಮತಿ ನೀಡುತ್ತದೆ. ಜಲ ಭದ್ರತಾ ಕಾಮಗಾರಿಗಳು ಪ್ರಮುಖ ಗ್ರಾಮೀಣ ಮೂಲಸೌಕರ್ಯಗಳು ಜೀವನೋಪಾಯಕ್ಕೆ ಸಂಬಂದಿಸಿದ    ಮೂಲಸೌಕರ್ಯಗಳು ತೀವ್ರ ಹವಾಮಾನ ವೈಪರೀತ್ಯ ಶಮನ ಕಾಮಗಾರಿಗಳು ಎಂದು ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರಸ್ತೆ ನಿರ್ಮಾಣಕ್ಕೆ ಜಾಗ ತ್ಯಾಗ ಮಾಡಿದ ಗ್ರಾಮಸ್ಥರ ಋಣ ತೀರಿಸಲಾಗದು: ಶಾಸಕ ಹೆಚ್.ಆರ್. ಗವಿಯಪ್ಪ

ವಿಜಯನಗರ (ಹೊಸಪೇಟೆ) : ಊರಿನ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ತಮ್ಮ ಜಾಗ...

Homeಅಪರಾಧ

ಹರಪನಹಳ್ಳಿ: ನಕಲಿ ದಾಖಲೆ ಸೃಷ್ಟಿಸಿ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಹರಪನಹಳ್ಳಿ : ನಕಲಿ ದಾಖಲೆ ಸೃಷ್ಟಿಸಿಕೊಂಡು ತನ್ನ ಹೆಸರಿಗೆ ಆಸ್ತಿ ಪತ್ರಗಳನ್ನು ಮಾಡಿಕೊಂಡು ಪರಾರಿಯಾಗಿದ್ದ 12...

Homeಸುದ್ದಿಗಳು

ಕೊಪ್ಪಳ : ಪ್ರತಿಭಾ ಪುರಸ್ಕಾರಕ್ಕೆ ಬನ್ನಿ

ಹರಪನಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲೂಕು ಘಟಕದ ವತಿಯಿಂದ 2026-27ನೇ ಸಾಲಿನ...

Homeಕೃಷಿ

ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ

ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂದು ಆಗ್ರಹಿಸಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.