ಹರಪನಹಳ್ಳಿ: ‘ದಾನಧರ್ಮ ಮಾಡುವುದು ಇಸ್ಲಾಂ ಧರ್ಮದ ಪ್ರಮುಖ ತತ್ವಗಳಲ್ಲಿ ಒಂದಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ಅರ್ಹರಿಗೆ ಸಹಾಯ ಮಾಡುವಲ್ಲಿ ನಾವು ಎಂದಿಗೂ ಹಿಂದೆ ಸರಿಯಬಾರದು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಷರೀಫ್ ಮಕರಬ್ಬಿ ಹೇಳಿದರು.
ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಿಜಯನಗರ ಜಿಲ್ಲೆ ಹಾಗೂ ಹರಪನಹಳ್ಳಿ ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಧನಸಹಾಯ ವಿತರಿಸಿ ಅವರು ಮಾತನಾಡಿದರು.
ಧರ್ಮಗುರುಗಳ ಹಿತವಚನದಂತೆ ಶಿಕ್ಷಣಕ್ಕಾಗಿ ಈ ಸಹಾಯ ಹಸ್ತ ಚಾಚಲಾಗಿದೆ. ನೆರವು ಪಡೆದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದ ಸತ್ಪ್ರಜೆಗಳಾಗಿ ಬೆಳೆಯಬೇಕು. ನಮ್ಮ ಸಂಘವು ನಿರಂತರವಾಗಿ ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ವಿದ್ಯಾರ್ಥಿಗಳು ಕೇವಲ ಶಿಕ್ಷಣವನ್ನಷ್ಟೇ ಅಲ್ಲದೆ, ಉತ್ತಮ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಆಶಿಸಿದರು.
ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಎನ್. ಇಸ್ಮಾಯಿಲ್, ಗೌರವಾಧ್ಯಕ್ಷ ಎಸ್. ಶಫಿವುಲ್ಲಾ, ಕಾರ್ಯದರ್ಶಿ ಕೆ. ರಿಜ್ವಾನ್ ಸಾಹೇಬ್, ಉಪಾಧ್ಯಕ್ಷ ಯಾಹ್ಯ, ನಿರ್ದೇಶಕರುಗಳಾದ ಎಚ್. ಪೀರಾ ಸಾಹೇಬ್, ಎಂ. ದಾದಾಪೀರ್ ಮತ್ತಿತರರು ಪಾಲ್ಗೊಂಡಿದ್ದರು.
ಉತ್ತಮ ಕಾರ್ಯಕ್ರಮ ಅಭಿನಂದನೆಗಳು 🌹🌹